ಕಾರ್ಕಳ: ಪುರಸಭಾ ಚುನಾಯಿತ ಜನಪ್ರತಿನಿಧಿಗಳ ಸಭೆ

Update: 2018-12-12 17:37 GMT

ಕಾರ್ಕಳ, ಡಿ.12: ಪುರಸಭಾ ಚುನಾಯಿತ ಸದಸ್ಯರ ಸಭೆಯು ಆಡಳಿತಾಧಿಕಾರಿ( ಕುಂದಾಪುರ ಉಪಕಮಿಷನರ್) ಭೂಬಾಲನ್ ನೇತೃತ್ವದಲ್ಲಿ ಪುರಸಭಾ ಸಭಾಂಗಣದಲ್ಲಿ ಬುಧವಾರ ಸಂಜೆ ಜರುಗಿತು. 

ಸ್ಥಳೀಯ ಪುರಸಭೆಯ ಚುನಾವಣೆ ನಡೆದು ಮೂರುವರೆ ತಿಂಗಳು ಕಳೆದಿದ್ದು, ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಕೋರ್ಟ್ ಮೆಟ್ಟಿಲೇರಿರುವುದರಿಂದ ಸ್ಥಳೀಯ ಸಂಘ ಸಂಸ್ಥೆಗಳಲ್ಲಿ ಜನಾಡಳಿತವಿಲ್ಲದೆ ಅಭಿವೃದ್ಧಿ ಕಾಮಗಾರಿಗಳಿಗೆ ಹಿನ್ನಡೆಯಾಗಿದೆ ಎಂಬ ಆರೋಪವು ಸಭೆಯಲ್ಲಿ ಒಕ್ಕೊರಲಿನಿಂದ ಕೇಳಿಬಂತು. 

ಸದಸ್ಯ ಶುಭದ ರಾವ್ ಮಾತನಾಡಿ, ನಗರೋತ್ಥಾನ ಯೋಜನೆಯಡಿ ಬಿಡುಗಡೆಗೊಂಡಿರುವ ರೂ. 7 ಕೋಟಿ ಅನುದಾನಗಳ ಪೈಕಿ   ಮಾರುಕಟ್ಟೆ ರಸ್ತೆ ಕಾಂಗ್ರೀಟ್‍ಕರಣ ಕಾಮಗಾರಿ ನಡೆಯುತ್ತಿದೆ. ಒಂದುವರೆ ತಿಂಗಳು ಕಳೆದರೂ ಕಾಮಗಾರಿ ಮಂದಗತಿಯಲ್ಲಿ ಮುನ್ನೆಡೆಯುತ್ತಿದೆ. ಕಾಮಗಾರಿ ಗುಣಮಟ್ಟದ ಬಗ್ಗೆ ತೃಪ್ತಿಕರವಾಗಿಲ್ಲ. ಇದರ ಬಗ್ಗೆ ಇಲಾಖಾಧಿಕಾರಿಗಳು ಗಮನ ಹರಿಸುತ್ತಿಲ್ಲ. ಪರಿಣಾಮವಾಗಿ ವಾಹನ ಸಂಚಾರಕ್ಕೆ ಅಡೆಚಣೆ ಉಂಟಾಗಿ ನಗರದಲ್ಲಿ ವಾಹನ ದಟ್ಟನೆ ಹೆಚ್ಚಳವಾಗಲು ಕಾರಣವಾಗಿದೆ. ಕಾಮಗಾರಿ ವೇಗವನ್ನು ಹೆಚ್ಚಿಸುವ ಜೊತೆಗೆ ಅದರ ಗುಣಮಟ್ಟ ಕಾಪಾಡು ಪ್ರಕ್ರಿಯೆ ನಡೆಯಬೇಕೆಂದು ಅವರು ಆಗ್ರಹಿಸಿದರು. 

ಒಡಂಬಡಿಕೆಯಂತೆ ಕಾಮಗಾರಿ ನಡೆಯದೇ ಇದ್ದಲ್ಲಿ ಕಂಟ್ರಾಕ್ಟರ್‍ದಾರರಿಗೆ ನೋಟಿಸ್ ಜಾರಿ ಗೊಳಿಸಬೇಕು. ಅದನ್ನು ಉಲ್ಲಂಘಿಸಿದರೆ ಕಪ್ಪು ಕಟ್ಟಿಗೆ ಸೇರಿಸಬೇಕೆಂದು ಉಪಕಮಿಷನರ್ ನಿರ್ದೇಶನ ನೀಡಿದರು. ನಗರೋತ್ಧಾನ ಯೋಜನೆಯ ಕಾಮಗಾರಿಯನ್ನು ಒಂದೇ ಕಂಟ್ರಾಕ್ಟರ್‍ದಾರ ವಹಿಸಿಕೊಂಡಿದ್ದು, ಪುರಸಭಾ ವ್ಯಾಪ್ತಿಯಲ್ಲಿ ಅರೆಬರೆ ಕಾಮಗಾರಿ ನಡೆಸಿದ್ದಾರೆ ಎಂದು ಇದೇ ಸಂದರ್ಭದಲ್ಲಿ ಸದಸ್ಯ ಯೋಗೀಶ್ ದೇವಾಡಿಗ ಧ್ವನಿಗೂಢಿಸಿ ಕಾಮಗಾರಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. 

ಸಮಸ್ಸೆಗಳೇನು?

ಪುರಸಭಾ ವ್ಯಾಪ್ತಿಯ ರಸ್ತೆ ಇಕ್ಕೆಲೆಗಳಲ್ಲಿ ಕಳೆ ಕೀಳದೇ ಇರುವುದು. ಸ್ವಚ್ಚತೆ ಪರಿಪಾಲನೆಯಲ್ಲಿ ಹಿನ್ನಡೆ. ಚರಂಡಿಯಲ್ಲಿ ಹೂಳೆತ್ತದೇ ಇರುವುದು. ಕುಡಿಯುವ ನೀರು ಪೊರೈಕೆ ಸಮರ್ಪಕವಾಗಿಲ್ಲದೇ ಇರುವುದು. ಕೆಟ್ಟು ಹೋದ ರಸ್ತೆಯ ದುಸ್ಥಿತಿಯಿಂದ ಹೊರಬರುತ್ತಿರುವ ಧೂಳಿನಿಂದಾಗಿ ಮಾನವ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುವಂತೆ ಮಾಡುತ್ತಿರುವುದಾಗಿದೆ.

ಪ್ರಶಂಸೆಗೆ ಪಾತ್ರರಾದ ಪಕ್ಷೇತರ ಅಭ್ಯರ್ಥಿ !

ಪುರಸಭೆಗೆ ಆಯ್ಕೆಯಾದ ಪಕ್ಷೇತರ ಅಭ್ಯರ್ಥಿ ಲಕ್ಷ್ಮೀನಾರಾಯಣ ಅವರ ಕಾರ್ಯಸಾಧನೆಗೆ ಸಭೆಯಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತಗೊಂಡಿತು. 
ಪುರಸಭೆಯ ಆಡಳಿತವನ್ನೇ ಆಶ್ರಯಿಸದೇ ಮತದಾರರನ್ನು ಸಹಕಾರದಿಂದ ವಾರ್ಡ್ ವ್ಯಾಪ್ತಿಯಲ್ಲಿ ಸ್ವಚ್ಚತಾ ಕಾರ್ಯವನ್ನು ಪ್ರತಿವಾರ ನಡೆಸುತ್ತಾ ಬಂದಿದ್ದಾರೆ ಎಂಬ ಪ್ರಶಂಸೆಯ ಮಾತುಗಳು ಸರ್ವ ಸದಸ್ಯರಿಂದ ಕೇಳಿಬಂತು. ಆಡಳಿತಾಧಿಕಾರಿ( ಕುಂದಾಪುರ ಉಪಕಮಿಷನರ್) ಭೂಬಾಲನ್, ಮುಖ್ಯಾಧಿಕಾರಿ ಮೇಬಲ್ ಡಿಸೋಜಾ, ಅಭಿಯಂತರ ಪದ್ಮನಾಭ, ಕಂದಾಯಧಿಕಾರಿ ಸಂತೋಷ್ ಮೊದಲಾದವರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News