ಭಾರತ ಹಿಂದೂ ರಾಷ್ಟ್ರವೆಂದು ಘೋಷಿಸಿಕೊಳ್ಳಬೇಕಿತ್ತು: ನ್ಯಾಯಮೂರ್ತಿ ವಿವಾದಾತ್ಮಕ ಹೇಳಿಕೆ

Update: 2018-12-13 03:31 GMT

ಶಿಲ್ಲಾಂಗ್, ಡಿ.13: ದೇಶ ವಿಭಜನೆ ಸಂದರ್ಭದಲ್ಲೇ ಭಾರತ ಹಿಂದೂ ರಾಷ್ಟ್ರವೆಂದು ಘೋಷಿಸಿಕೊಳ್ಳಬೇಕಿತ್ತು ಎಂದು ಮೇಘಾಲಯ ಹೈಕೋರ್ಟ್ ನ್ಯಾಯಮೂರ್ತಿ ಎಸ್.ಆರ್.ಸೇನ್ ವಿವಾದಾತ್ಮಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನಿವಾಸ ದೃಢೀಕರಣ ಪತ್ರ ನೀಡಲು ನಿರಾಕರಿಸಿದ ರಾಜ್ಯ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಅಮೋನ್ ರಾಣಾ ಎಂಬುವವರು ಸಲ್ಲಿಸಿದ್ದ ಅರ್ಜಿ ವಿಲೇವಾರಿ ಮಾಡುವ ವೇಳೆ ನ್ಯಾಯಮೂರ್ತಿ ಈ ಅಭಿಪ್ರಾಯ ವ್ಯಕ್ತಪಡಿಸಿದರು.

"ಪಾಕಿಸ್ತಾನ ತನನ್ನನ್ನು ಇಸ್ಲಾಮಿಕ್ ದೇಶ ಎಂದು ಕರೆದುಕೊಂಡಿತು. ದೇಶವನ್ನು ಧರ್ಮ ಆಧಾರದಲ್ಲಿ ವಿಭಜನೆ ಮಾಡಿದ ಕಾರಣ ಭಾರತವನ್ನು ಹಿಂದೂ ರಾಷ್ಟ್ರ ಎಂದು ಘೋಷಿಸಬೇಕಿತ್ತು. ಆದರೆ ಭಾರತ ಜಾತ್ಯತೀತ ದೇಶವಾಗಿಯೇ ಉಳಿಯಿತು" ಎಂದು ಹೇಳಿದರು.

"ಭಾರತವನ್ನು ಇಸ್ಲಾಮಿಕ್ ದೇಶವಾಗಿ ಮಾಡಲು ಯಾರೂ ಪ್ರಯತ್ನಿಸಬಾರದು ಎಂದು ಸ್ಪಷ್ಟಪಡಿಸುತ್ತಿದ್ದೇನೆ. ಇಲ್ಲದಿದ್ದರೆ ಅದು ಭಾರತ ಹಾಗೂ ವಿಶ್ವಕ್ಕೆ ಪ್ರಳಯದ ದಿನವಾಗಲಿದೆ. ಪ್ರಧಾನಿ ನರೇಂದ್ರ ಮೋದಿ ಸರ್ಕಾರವಷ್ಟೇ ಇದರ ತೀವ್ರತೆಯನ್ನು ಅರ್ಥ ಮಾಡಿಕೊಳ್ಳಬಲ್ಲದು ಎಂಬ ವಿಶ್ವಾಸ ನನ್ನದು. ಆದ್ದರಿಂದ ಮನವಿ ಮಾಡಿದಂತೆ ಅಗತ್ಯ ನೆರವು ನೀಡಲು ಸಾಧ್ಯವಿಲ್ಲ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರಾಷ್ಟ್ರೀಯ ಹಿತಾಸಕ್ತಿಯನ್ನು ಬೆಂಬಲಿಸುತ್ತಾರೆ ಎಂಬ ವಿಶ್ವಾಸ ನನ್ನದು" ಎಂದು ಮೇಘಾಲಯ ಹೈಕೋರ್ಟ್‌ನ ಏಕೈಕ ನ್ಯಾಯಮೂರ್ತಿಯಾಗಿರುವ ಅವರು ಸ್ಪಷ್ಟಪಡಿಸಿದರು.

ದೇಶದಲ್ಲಿ ಏಕರೂಪದ ಕಾನೂನು ಜಾರಿಯನ್ನು ಪ್ರತಿಪಾದಿಸಿದ ಅವರು, "ಭಾರತೀಯ ಕಾನೂನು ಹಾಗೂ ಸಂವಿಧಾನವನ್ನು ವಿರೋಧಿಸುವ ಯಾರೇ ಆಗಲಿ, ಅವರನ್ನು ದೇಶದ ಪ್ರಜೆಗಳು ಎಂದು ಪರಿಗಣಿಸುವಂತಿಲ್ಲ. ನಾವು ಮೊದಲು ಭಾರತೀಯರು ಎಂದು ನೆನಪಿನಲ್ಲಿಟ್ಟುಕೊಳ್ಳಬೇಕು. ಬಳಿಕ ಒಳ್ಳೆಯ ಮನುಷ್ಯರಾಗಬೇಕು; ಆ ಬಳಿಕ ನಾವು ಆಯಾ ಧರ್ಮಕ್ಕೆ ಸೇರಿದವರಾಗುತ್ತೇವೆ" ಎಂದು ವಿಶ್ಲೇಷಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News