ಅಡ್ಯನಡ್ಕ ಜನತಾ ವಿದ್ಯಾಸಂಸ್ಥೆಗಳ ವಾರ್ಷಿಕೋತ್ಸವ

Update: 2018-12-13 07:35 GMT

ಅಡ್ಯನಡ್ಕ, ಡಿ.13: ಒಂದು ಸಂಸ್ಕೃತಿಗೆ ಮತ್ತೊಂದು ಸಂಸ್ಕೃತಿ ಸೇರಿ ಪರಂಪರೆಯು ಬಲಿಷ್ಠವಾಗುತ್ತದೆ. ಮನುಷ್ಯರನ್ನು ಒಂದಾಗಿಸುವ ಗ್ರಾಮಮುಖಿ, ನೆಲಮುಖಿ ಮತ್ತು ಸಮಾಜಮುಖಿ ಶಿಕ್ಷಣ ಸಂಸ್ಥೆಗಳು ಸಂಸ್ಕೃತಿಯನ್ನು ಸಲಹುತ್ತವೆ. ಸಹವಾಸ ಮತ್ತು ಸಹಜೀವದದ ವೌಲ್ಯಗಳನ್ನು ಗಟ್ಟಿಗೊಳಿಸಿ ಬೌದ್ಧಿಕ ದಿವಾಳಿತನದಿಂದ ನಾಡನ್ನು ರಕ್ಷಿಸುತ್ತವೆ ಎಂದು ಪುತ್ತೂರು ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ, ಸಾಹಿತಿ ಡಾ. ನರೇಂದ್ರ ರೈ ದೇರ್ಲ ಅಭಿಪ್ರಾಯಿಸಿದ್ದಾರೆ.

ಅಡ್ಯನಡ್ಕದಲ್ಲಿ ಬುಧವಾರ ಜರುಗಿದ ಜನತಾ ವಿದ್ಯಾಸಂಸ್ಥೆಗಳ ವಾರ್ಷಿಕೋತ್ಸವ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಅಡ್ಯನಡ್ಕ ಎಜುಕೇಷನಲ್ ಸೊಸೈಟಿಯ ಅಧ್ಯಕ್ಷ ಗೋವಿಂದ ಪ್ರಕಾಶ್ ಸಾಯ ಮಾತನಾಡಿ, ವಿದ್ಯಾರ್ಜನೆಯೆಂಬುದು ಒಂದು ಕಠಿಣ ತಪಸ್ಸು. ಕುತೂಹಲದಿಂದ ವಿಚಕ್ಷಿಸಿ ಅಂತರಂಗ ಮತ್ತು ಬಹಿರಂಗದಲ್ಲಿ ನಡೆಸುವ ಶೋಧನೆಗಳಿಂದ ವಿಶೇಷವಾದ ಜ್ಞಾನ, ವಿದ್ಯೆ ಮತ್ತು ಅರಿವು ಪ್ರಾಪ್ತವಾಗುತ್ತದೆ ಎಂದರು.

ಜನತಾ ವಿದ್ಯಾಸಂಸ್ಥೆಗಳ ಆಡಳಿತಾಧಿಕಾರಿ ರಮೇಶ್ ಎಂ. ಬಾಯಾರ್ ಮಾತನಾಡಿ, ಅಪ್ಪನ ಅಧಿಕಾರ ಮತ್ತು ಅಮ್ಮನ ಮಮಕಾರ ಎರಡೂ ಮಗುವಿನ ಬೆಳವಣಿಗೆಗೆ ಅಗತ್ಯ. ಮಕ್ಕಳ ಕಲಿಕೆಯಲ್ಲಿ ವಿದ್ಯಾಸಂಸ್ಥೆಗಳ ಜವಾಬ್ದಾರಿ ಎಷ್ಟಿದೆಯೋ ಅಷ್ಟೇ ಪಾಲುದಾರಿಕೆ ಪಾಲಕರದ್ದಾಗಿರುತ್ತದೆ ಎಂದರು.

ಜನತಾ ವಿದ್ಯಾಸಂಸ್ಥೆಗಳ ವಾರ್ಷಿಕ ಸಂಚಿಕೆಯ ಹಸ್ತಪ್ರತಿ ’ಜನತಾ ದರ್ಪಣ’ವನ್ನು ಇದೇ ಸಂದರ್ಭ ಅನಾವರಣಗೊಳಿಸಲಾಯಿತು.

ಜನತಾ ಹಿ.ಪ್ರಾ. ಶಾಲೆಯ ಮುಖ್ಯೋಪಾಧ್ಯಾಯ ಮಾಧವ ನಾಯ್ಕ್ಕಾ, ಜನತಾ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯ ಮಹಾಬಲ ಶೆಟ್ಟಿ, ಜನತಾ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಟಿ.ಆರ್.ನಾಯ್ಕಾ ಹಾಗೂ ಜನತಾ ಪ.ಪೂ. ಕಾಲೇಜಿನ ಪ್ರಾಂಶುಪಾಲ ಡಿ.ಶ್ರೀನಿವಾಸ್ ಸಂಸ್ಥೆಗಳ ವಾರ್ಷಿಕ ವರದಿ ವಾಚಿಸಿದರು. ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜಯಾನಂದ ಉಳಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.
 
ಉಪನ್ಯಾಸಕ ಶೀನಪ್ಪ ನಾಯ್ಕಾ ಅತಿಥಿಗಳನ್ನು ಪರಿಚಯಿಸಿದರು. ಜನತಾ ವಿದ್ಯಾ ಸಂಸ್ಥೆಗಳ ಸಂಚಾಲಕಿ ಡಾ. ಅಶ್ವಿನಿ ಕೃಷ್ಣಮೂರ್ತಿ ಸ್ವಾಗತಿಸಿ, ಪ್ರಸ್ತಾವಿಸಿದರು. ಜನತಾ ವಿದ್ಯಾ ಸಂಸ್ಥೆಗಳ ಸಂಯೋಜನಾಧಿಕಾರಿ ಗಣೇಶಮೂರ್ತಿ ಎಂ. ವಂದಿಸಿದರು. ಜಯಶ್ರೆ ಕಾರ್ಯಕ್ರಮ ನಿರೂಪಿಸಿದರು.

ಬಳಿಕ ಜರುಗಿದ ವಿವಿಧ ವಿನೋದಾವಳಿಯಲ್ಲಿ ಆಕರ್ಷಕ ನೃತ್ಯಗಳು, ಸಮೂಹಗಾನ ಹಾಗೂ ‘ಸುದರ್ಶನ ವಿಜಯ’ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News