ಪ್ರಮುಖ ಸುನ್ನೀ ವಿದ್ವಾಂಸ ಪಿ.ಎ. ಉಸ್ತಾದ್ ನಿಧನ

Update: 2018-12-13 08:30 GMT

ಬಂಟ್ವಾಳ, ಡಿ.13: ಪ್ರಮುಖ ಸುನ್ನೀ ವಿದ್ವಾಂಸ, ಸುರಿಬೈಲ್ ದಾರುಲ್ ಅಶ್‌ಅರಿಯ್ಯಾ ಕಾಲೇಜಿನ ಪ್ರಾಂಶುಪಾಲ ಅಲ್ ಜುನೈದಿ ಪಿ.ಎ.ಅಬ್ದುರ್ರಹ್ಮಾನ್ ಬಾಖವಿ (71) ಗುರುವಾರ ನಿಧನರಾದರು.

ಪಿ.ಎ. ಉಸ್ತಾದ್ ಅಲ್ಪ ಕಾಲದ ಅನಾರೋಗ್ಯದಿಂದ ಬಳಲುತ್ತಿದ್ದು, ಚಿಕಿತ್ಸೆಗಾಗಿ ಕೇರಳದ ಕಾಂಞಂಗಾಡ್ ಆಸ್ಪತ್ರೆಗೆ ದಾಖಲಿಸಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ.

ಮೃತರು ಆರು ಮಂದಿ ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂಧುಮಿತ್ರರು, ಶಿಷ್ಯಂದಿರನ್ನು ಅಗಲಿದ್ದಾರೆ. 

ಪಿ.ಎ.ಅಬ್ದುರ್ರಹ್ಮಾನ್ ಬಾಖವಿ ಅವರು 'ಪಿ.ಎ.ಉಸ್ತಾದ್' ಎಂದೇ ಖ್ಯಾತಿ ಪಡೆದು ಹನೀಫಿ ಎಂಬ ಬಿರಿದುದಾರಿಗಳಾದ ಸಾವಿರಾರು ವಿದ್ವಾಂಸರುಗಳನ್ನು ಸಮಾಜಕ್ಕೆ ಸಮರ್ಪಿಸಿದ ನೇತಾರರಾಗಿದ್ದಾರೆ.

ಇವರು ಸದ್ಯ ಸುರಿಬೈಲು ದಾರುಲ್ ಅಶ್‌ಅರಿಯ್ಯಾ ವಿದ್ಯಾಸಂಸ್ಥೆಯ ಪ್ರಾಂಶುಪಾಲರಾಗಿದ್ದು, ಕಳೆದ 6 ವರ್ಷಗಳಿಂದ ಇಲ್ಲಿ ಸೇವೆ ಸಲ್ಲಿಸುತ್ತಿದ್ದರು.

ಅದಲ್ಲದೆ, ನೆಲ್ಲಿಕ್ಕುನ್ನು, ಮಿತ್ತಬೈಲು, ಕೊಲ್ಲಂಗಾನ, ಮಞಂಪಾರ ಪಲ್ಲಂಗೋಡು, ಚೆರ್ಕುನ್ನು ಮುಂತಾದ ಸ್ಥಳಗಳಲ್ಲಿ ಧಾರ್ಮಿಕ ಸೇವೆ ಸಲ್ಲಿಸಿದ್ದು, ಸಾವಿರಾರು ಶಿಷ್ಯಬಳಗವನ್ನು ಹೊಂದಿದ್ದಾರೆ.

ಮೃತರ ಅಂತ್ಯಸಂಸ್ಕಾರ ಇಂದು ಸಂಜೆ 5 ಗಂಟೆಗೆ ಕೇರಳದ ತಿರುವಟ್ಟೂರಿನಲ್ಲಿ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ಸಂತಾಪ: ಪಿ.ಎ.ಉಸ್ತಾದ್ ನಿಧನಕ್ಕೆ ಅಖಿಲ ಭಾರತ ಸುನ್ನೀ ಉಲಮಾ ಒಕ್ಕೂಟದ ರಾಷ್ಟ್ರೀಯ ಪ್ರ. ಕಾರ್ಯದರ್ಶಿ ಕಾಂತಪುರಂ ಎ.ಪಿ.ಅಬೂಬಕರ್ ಮುಸ್ಲಿಯಾರ್, ಸೈಯದ್ ಕೆ.ಎಸ್.ಆಟಕ್ಕೋಯ ತಂಙಳ್ ಕುಂಬೋಳ್, ಎಸ್‌ಎಂಎ ರಾಜ್ಯಾಧ್ಯಕ್ಷ ಸೈಯದ್ ಜಲಾಲುದ್ದೀನ್ ತಂಙಳ್, ದಾರುಲ್ ಅಶ್‌ಅರಿಯ್ಯಾ ಮ್ಯಾನೇಜರ್ ಮುಹಮ್ಮದಲಿ ಸಖಾಫಿ, ದ.ಕ. ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ.ಖಾದರ್, ಡಾ.ಅಬ್ದುರ್ರಶೀದ್ ಝೈನಿ ಕಾಮಿಲ್, ದಾರುನ್ನಜಾತ್ ಸಂಸ್ಥೆಯ ಅಧ್ಯಕ್ಷ ಪಿ.ಕೆ.ಅಬೂಬಕರ್ ಮುಸ್ಲಿಯಾರ್, ಎಸ್‌ಎಂಎ ಪುತ್ತೂರು ವಿಭಾಗದ ಅಧ್ಯಕ್ಷ ಹಾಜಿ ಕೆ.ಎ.ಹಮೀದ್ ಕೊಡಂಗಾಯಿ ಮೊದಲಾದ ಪ್ರಮುಖರು ಸಂತಾಪ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News