ರಕ್ಷಣೆ ಒದಗಿಸಿ ಮರಳು ತೆಗೆಯಲು ಅವಕಾಶ ಕಲ್ಪಿಸಿ: ಸಿಪಿಎಂ ಆಗ್ರಹ
Update: 2018-12-13 18:29 IST
ಉಡುಪಿ, ಡಿ.13: ಜಿಲ್ಲಾಧಿಕಾರಿಗಳು ಪರವಾನಿಗೆ ಪಡೆದವರ ಪರವಾನಿಗೆ ರದ್ದು ಪಡಿಸುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಆದುದರಿಂದ ಅವರಿಗೆ ಸೂಕ್ತ ರಕ್ಷಣೆ ಒದಗಿಸಿ, ಮರಳು ಮಾರುಕಟ್ಟೆಯಲ್ಲಿ ಸಿಗುವಂತೆ ಮಾಡಬೇಕು ಎಂದು ಸಿಪಿಎಂ ಉಡುಪಿ ಜಿಲ್ಲಾ ಸಮಿತಿ ಆಗ್ರಹಿದೆ.
ನ.27ರಂದು ಕಟ್ಟಡ ಕಾರ್ಮಿಕ ಸಂಘಗಳ ನೇತೃತ್ವದಲ್ಲಿ ಮಣಿಪಾಲದಲ್ಲಿ ಜಿಲ್ಲಾಧಿಕಾರಿ ಕಚೇರಿ ಬಳಿ ನಡೆದ ಹೋರಾಟದ ಸಂದರ್ಭದಲ್ಲಿ ಇಲಾಖೆಯ ಹಿರಿಯ ವಿಜ್ಞಾನಿಗಳು ಸ್ಥಳಕ್ಕೆ ಆಗಮಿಸಿ 2-3 ದಿನಗಳಲ್ಲಿ ಪರವಾನಿಗೆ ನೀಡಿ ಮರಳು ತೆಗೆಯಲು ಅವಕಾಶ ಮಾಡುವುದಾಗಿ ಹೇಳಿದ್ದರು. ಆದರೆ ಪರವಾನಿಗೆ ಪಡೆದವರು ಮರಳು ತೆಗೆಯಲು ಕೆಲವು ಶಕ್ತಿಗಳು ಅಡ್ಡಿ ಪಡಿಸುತ್ತಿರುವ ವಿಚಾರ ತಿಳಿದು ಬಂದಿದೆ. ಇದು ಅಕ್ಷಮ್ಯ ಅಪರಾಧ. ಇದರಿಂದ ಕಟ್ಟಡ ಕಾರ್ಮಿಕರಿಗೆ ಮಾತ್ರವಲ್ಲದೆ ಇತರ ವಿಭಾಗದ ಜನರಿಗೂ ತೊಂದರೆಯಾಗುತ್ತಿದೆ ಎಂದು ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.