ಉಡುಪಿ: ಶ್ರೀಕೃಷ್ಣ ಮಠದಲ್ಲಿ ಎಡೆಸ್ನಾನಕ್ಕೂ ವಿದಾಯ

Update: 2018-12-13 14:01 GMT
ಶ್ರೀಕೃಷ್ಣ ಮಠದಲ್ಲಿ ಸುಬ್ರಹ್ಮಣ್ಯ ಷಷ್ಠಿಯ ಪ್ರಯುಕ್ತ ಪರ್ಯಾಯ ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥರು ಮತ್ತು ಅದಮಾರು ಕಿರಿಯ ಯತಿಗಳಾದ ಶ್ರೀಈಶಪ್ರಿಯ ತೀರ್ಥರ ಉಪಸ್ಥಿತಿಯಲ್ಲಿ ರಥೋತ್ಸವ.

ಉಡುಪಿ, ಡಿ.13: ಸುಬ್ರಹ್ಮಣ್ಯ ಷಷ್ಠಿಯ ಪ್ರಯುಕ್ತ ಗುರುವಾರ ಶ್ರೀಕೃಷ್ಣ ಮಠದ ಸುಬ್ರಹ್ಮಣ್ಯ ದೇವರ ಗುಡಿಯ ಆವರಣದಲ್ಲಿ ಪ್ರಥಮ ಬಾರಿಗೆ ಮಡೆ ಸ್ನಾನದಂತೆ ಎಡೆಸ್ನಾನಕ್ಕೂ ಅವಕಾಶ ಸಿಗದೇ, ಹರಕೆ ಹೊತ್ತ ಒಂದಿಬ್ಬರು ಆಸಕ್ತ ಭಕ್ತರು ಕೇವಲ ಉರುಳು ಸೇವೆ ನಡೆಸಬೇಕಾಯಿತು.

ಪರ್ಯಾಯ ಪಲಿಮಾರು ಮಠಾಧೀಶರು ತೆಗೆದುಕೊಂಡ ಮಹತ್ವದ ದಿಟ್ಟ ನಿರ್ಧಾರದಂತೆ ಇಂದು ಕಳೆದೆರಡು ವರ್ಷಗಳಿಂದ ನಡೆದುಕೊಂಡು ಬಂದ ಎಡೆಸ್ನಾನಕ್ಕೂ ಅವಕಾಶ ಸಿಗಲಿಲ್ಲ. ಇದರಿಂದ ಶ್ರೀಕೃಷ್ಣಮಠದಲ್ಲಿ ಇದೇ ಮೊದಲ ಬಾರಿಗೆ ಮಡೆಸ್ನಾನ ಹಾಗೂ ಎಡೆಸ್ನಾನ ಎರಡೂ ವಿದಾಯ ಹೇಳಿದಂತಾಗಿದೆ.

ಕೆಲವರ್ಷಗಳ ಹಿಂದಿನವರೆಗೆ ಶ್ರೀಕೃಷ್ಣ ಮಠದ ಸುಬ್ರಹ್ಮಣ್ಯ ದೇವರ ಗುಡಿಯಲ್ಲಿ ಹರಕೆ ಹೊತ್ತ ಭಕ್ತರಿಂದ ಮಡೆಸ್ನಾನ ನಡೆಯುತ್ತಿತ್ತು. ಆದರೆ ಸುಬ್ರಹ್ಮಣ್ಯದಲ್ಲಿ ಇದು ವಿವಾದವಾದ ಬಳಿಕ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥರು ತಮ್ಮ ಎರಡು ವರ್ಷಗಳ ಪರ್ಯಾಯಾವಧಿಯಲ್ಲಿ (2016-17) ಮಡೆಸ್ನಾನವನ್ನು ನಿಲ್ಲಿಸಿ ಎಡೆಸ್ನಾನಕ್ಕೆ ಅವಕಾಶ ನೀಡಿದ್ದರು.

ಅನಗತ್ಯ ವಿವಾದ ಬೇಡ: ಆದರೆ ಈ ವರ್ಷ ಪರ್ಯಾಯ ಪೀಠವೇರಿದ ಪಲಿಮಾರುಶ್ರೀಗಳು ಅನಗತ್ಯ ವಿವಾದಕ್ಕೆ ಆಸ್ಪದ ನೀಡದಂತೆ ಎಡೆಸ್ನಾನಕ್ಕೂ ಅವಕಾಶ ನೀಡದಿರಲು ನಿರ್ಧರಿಸಿದರು.

‘ಅನಗತ್ಯ ವಿವಾದ ಬೇಡವೆಂದು ಈ ನಿರ್ಧಾರಕ್ಕೆ ಬಂದಿದ್ದೇವೆ. ಎಡೆಸ್ನಾನ ದಿಂದಲೂ ಕೆಲವರಿಗೆ ಬೇಸರವಾಗಿದೆ. ತಿನ್ನುವ ಅನ್ನದ ಮೇಲೆ ಉರುಳು ಸೇವೆ ಮಾಡುವುದು ಕೆಲವರಿಗೆ ಇಷ್ಟವಿಲ್ಲ. ಹೀಗಾಗಿ ಕೃಷ್ಣ ಮಠದ ಭೋಜನ ಶಾಲೆಯಲ್ಲೇ ಪ್ರಸಾದಕ್ಕೆ ವ್ಯವಸ್ಥೆ ಮಾಡಲಾಗಿದೆ’ ಎಂದು ಪಲಿಮಾರು ಮಠದ ಶ್ರೀವಿದ್ಯಾಧೀಶತೀರ್ಥರು ನುಡಿದರು.

ಪೇಜಾವರಶ್ರೀ ಸ್ವಾಗತ: ಕೃಷ್ಣ ಮಠದಲ್ಲಿ ಮಡೆಸ್ನಾನದಂತೆ ಎಡೆಸ್ನಾನವನ್ನೂ ರದ್ದು ಮಾಡಿರುವ ಪರ್ಯಾಯ ಪಲಿಮಾರುಶ್ರೀಗಳ ನಿರ್ಧಾರವನ್ನು ಪೇಜಾವರ ಮಠದ ಶ್ರೀವಿಶ್ವೇಶತೀರ್ಥರು ಸ್ವಾಗತಿಸಿದ್ದಾರೆ.

ಜಾತಿಯ ಹೆಸರಿನಲ್ಲಿ ವಿರೋಧ ಬಂದರೆ ಸಂಘರ್ಷವಾಗುತ್ತದೆ. ದೇವಸ್ಥಾನ ಗಳಲ್ಲಿ ಮಡೆಸ್ನಾನ-ಎಡೆಸ್ನಾನ ಅನಿವಾರ್ಯವೇನಲ್ಲ. ಹಿಂದೂ ಧರ್ಮಕ್ಕೆ ಇದರಿಂದ ಯಾವುದೇ ಹಾನಿಯಿಲ್ಲ. ದೇವಸ್ಥಾನದ ಉತ್ಸವ-ಪೂಜೆಗಳು ಶಾಸ್ತ್ರಬದ್ಧವಾಗಿ ನಡೆದರೆ ಸಾಕು ಎಂದು ಪೇಜಾವರಶ್ರೀ ಪತ್ರಕರ್ತರೊಂದಿಗೆ ಮಾತನಾಡುತ್ತಾ ನುಡಿದರು.

ವಿವಾದ ಭಿನ್ನಾಭಿಪ್ರಾಯದ ಆಚರಣೆಗಳು ನಿಂತರೆ ಹಿಂದೂ ಧರ್ಮಕ್ಕೆ ಯಾವುದೇ ನಷ್ಟವಿಲ್ಲ. ಇತ್ತೀಚಿನ ವರ್ಷಗಳಲ್ಲಿ ಎಡೆಸ್ನಾನಕ್ಕೆ ಬರುವವರ ಸಂಖ್ಯೆಯೂ ಕಡಿಮೆಯಾಗುತ್ತಿದೆ. ಘರ್ಷಣೆಗೆ ಎಡೆಮಾಡುವ ಆಚರಣೆ ನಮಗೆ ಬೇಡ ಎಂದು ಪೇಜಾವರಶ್ರೀ, ಪಲಿಮಾರುಶ್ರೀ ನಿರ್ಧಾರವನ್ನು ಶ್ಲಾಘಿಸಿದರು.

ಮುಚ್ಲುಗೋಡು:  ಪೇಜಾವರ ಮಠ ಆಡಳಿತಕ್ಕೊಳಪಟ್ಟ ಮುಚ್ಲುಗೋಡು ಶ್ರೀಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಕಳೆದ ನಾಲ್ಕು ವರ್ಷಗಳಿಂದ ನಡೆದುಕೊಂಡು ಬಂದ ಎಡೆಸ್ನಾನ ಪದ್ದತಿ ಈ ಬಾರಿಯು ಮುಂದುವರಿಯಿತು. ಈ ಬಾರಿ 4-5 ಮಂದಿ ಭಕ್ತರು ಬಾಳೆ ಎಲೆಯಲ್ಲಿ ಬಡಿಸಿದ ನೈವೇದ್ಯದ ಮೇಲೆ ಉರುಳುವ ಮೂಲಕ ತಮ್ಮ ಹರಕೆಯನ್ನು ತೀರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News