ಮೋದಿ ಮೇಲಿದ್ದ ನಿರೀಕ್ಷೆ ಈಗ ದೇಶದ ಜನರಲ್ಲಿ ಉಳಿದಿಲ್ಲ: ಪೇಜಾವರ ಶ್ರೀ

Update: 2018-12-13 14:09 GMT

ಉಡುಪಿ, ಡಿ.13: ದೇಶದ ಪಂಚ ರಾಜ್ಯಗಳಲ್ಲಿ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣಾ ಫಲಿತಾಂಶ, ಪ್ರಧಾನಿ ನರೇಂದ್ರ ಮೋದಿಯವರಿಗೆ ಜನರು ನೀಡಿದ ಎಚ್ಚರಿಕೆಯಾಗಿದೆ ಎಂದು ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥರು ಹೇಳಿದ್ದಾರೆ.

ಉಡುಪಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್ಥಿಕ ಸುಧಾರಣೆ ಹಾಗೂ ರಾಮಮಂದಿರಕ್ಕೆ ಪ್ರಧಾನಿ ಆದ್ಯತೆ ನೀಡಬೇಕಾಗಿದೆ ಎಂದರು. ಮಂದಿರ ನಿರ್ಮಾಣದಿಂದ ಹಿಂದೂ ಮತದಾರರ ಉತ್ಸಾಹವೂ ಹೆಚ್ಚಬಹುದು ಎಂದವರು ಅಭಿಪ್ರಾಯಪಟ್ಟರು.

ಆದರೆ ಎನ್‌ಡಿಎ ಮೈತ್ರಿಕೂಟವನ್ನು ಉಳಿಸಿಕೊಳ್ಳಲು ಪ್ರಧಾನಿ ಅವರು, ಮಂದಿರ ನಿರ್ಮಾಣ ನಿರ್ಧಾರದಿಂದ ಹಿಂದೆ ಸರಿಯಲೂಬಹುದು ಎಂದು ಹೇಳಿದ ಪೇಜಾವರಶ್ರೀ, ಇತರೆ ಮಿತ್ರ ಪಕ್ಷಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿರಬೇಕಾದ ಅಗತ್ಯವಿದೆ ಎಂದರು.

ಬಿಜೆಪಿಗೆ ನಷ್ಟ: ತೆಲುಗುದೇಶಂನ ಚಂದ್ರಬಾಬು ನಾಯ್ಡು ವಿರೋಧ ಕಟ್ಟಿಕೊಂಡರೆ ಬಿಜೆಪಿಗೆ ನಷ್ಟ ಎಂದು ಹೇಳಿದ ಅವರು, ಚಂದ್ರಬಾಬು ನಾಯ್ಡು ಬಿಜೆಪಿಯನ್ನು ಬಗ್ಗುಬಡಿಯಲು ಹಠ ತೊಟ್ಟಿದ್ದಾರೆ ಎಂದು ಹೇಳಿದರು. ಹೀಗಾಗಿ ಇತರೆ ಮಿತ್ರಪಕ್ಷಗಳೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಬೇಕು. ಈ ವಿಷಯದಲ್ಲಿ ಅವರು ಅಟಲ್ ಬಿಹಾರಿ ವಾಜಪೇಯಿ ಅವರ ನೀತಿಯನ್ನು ಅನುಸರಿಸಬೇಕು ಎಂದು ಪ್ರಧಾನಿ ಮೋದಿಗೆ ಸಲಹೆ ನೀಡಿದರು.

ಮೋದಿ ಬಗ್ಗೆ ನಿರಾಶೆ

ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಮೊದಲಿದ್ದ ನಿರೀಕ್ಷೆ ಈಗ ದೇಶದ ಜನರಲ್ಲಿ ಉಳಿದಿಲ್ಲ. ಜನ ನಿರೀಕ್ಷೆ ಇಟ್ಟುಕೊಂಡಷ್ಟು ಕೆಲಸ ದೇಶದಲ್ಲಿ ಆಗಿಲ್ಲ. ನೋಟ್ ನಿಷೇಧದ ಫಲ ಜನಸಾಮಾನ್ಯರಿಗೆ ತಲುಪಿಲ್ಲ ಎಂದು ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅಭಿಪ್ರಾಯಪಟ್ಟರು.

ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ದೇಶದ ಮುಂದಿನ ಪ್ರಧಾನಮಂತ್ರಿ ಅಭ್ಯರ್ಥಿಯಾಗಬಹುದೇ ಎಂದು ಪ್ರಶ್ನಿಸಿದಾಗ, ದೇಶಕ್ಕೆ ಮೋದಿಯೇ ಮುಂದಿನ ಪ್ರಧಾನಿಯಾಗಬೇಕು. ಯೋಗಿ ಆದಿತ್ಯನಾಥರು ಮೋದಿಯಷ್ಟು ಸಮರ್ಥ ಅಲ್ಲ ಎಂದರು.

ಆದಿತ್ಯನಾಥರು ಮೂಲತ: ರಾಜಕಾರಣಿಯಲ್ಲ. ಅವರೊಬ್ಬ ಸಂತ. ಉತ್ತರ ಪ್ರದೇಶದಲ್ಲಿ ಅವರು ಇಷ್ಟು ಮಾಡಿರುವುದೇ ವಿಶೇಷ. ಹೀಗಾಗಿ ಪ್ರಧಾನಿ ಪಟ್ಟಕ್ಕೆ ಮೋದಿಯೇ ಸಮರ್ಥರು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News