ಉಡುಪಿ: 3 ಗ್ರಾಪಂ, 8 ಸ್ಥಾನಗಳಿಗೆ ಜ.2ಕ್ಕೆ ಚುನಾವಣೆ

Update: 2018-12-13 15:14 GMT

ಉಡುಪಿ, ಡಿ.13: ಜಿಲ್ಲೆಯಲ್ಲಿ ಅವಧಿ ಪೂರ್ಣಗೊಂಡ ಮೂರು ಗ್ರಾಪಂಗಳು ಹಾಗೂ ವಿವಿಧ ಕಾರಣಗಳಿಂದ ತೆರವಾದ ಎಂಟು ಗ್ರಾಪಂಗಳ ಎಂಟು ಸ್ಥಾನಗಳನ್ನು ತುಂಬಲು ಚುನಾವಣಾ ವೇಳಾ ಪಟ್ಟಿಯನ್ನು ರಾಜ್ಯ ಚುನಾವಣಾ ಆಯೋಗ ಪ್ರಕಟಿಸಿದೆ ಎಂದು ಉಡುಪಿಯ ಅಪರ ಜಿಲ್ಲಾಧಿಕಾರಿ ವಿದ್ಯಾಕುಮಾರಿ ತಿಳಿಸಿದ್ದಾರೆ.

ಮಣಿಪಾಲದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಇದೇ ಮೊದಲ ಬಾರಿಗೆ ಮೂರು ಗ್ರಾಪಂಗಳ ಚುನಾವಣೆಯಲ್ಲಿ ಮತಪತ್ರಗಳ ಬದಲಿಗೆ ಬಹುಆಯ್ಕೆಯ ವಿದ್ಯುನ್ಮಾನ ಮತಯಂತ್ರಗಳನ್ನು ಬಳಸಲಾಗುತ್ತದೆ ಎಂದು ಅವರು ತಿಳಿಸಿದರು.

ಕುಂದಾಪುರ ತಾಲೂಕಿನ ಗಂಗೊಳ್ಳಿ ಗ್ರಾಪಂನ 33 ಸ್ಥಾನಗಳಿಗೆ, ಬೈಂದೂರು ತಾಲೂಕಿನ ಯಡ್ತರೆ ಗ್ರಾಪಂನ 25 ಹಾಗೂ ಬೈಂದೂರು ಗ್ರಾಪಂನ 21 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಇದರೊಂದಿಗೆ ಕುಂದಾಪುರ ತಾಲೂಕು ಉಳ್ಳೂರು ಗ್ರಾಪಂ (ಉಳ್ಳೂರು-1), ಬೈಂದೂರು ತಾಲೂಕಿನ ಕೆರ್ಗಾಲು ಗ್ರಾಪಂ (ಕೆರ್ಗಾಲು-4), ಕಾರ್ಕಳ ತಾಲೂಕಿನ ಬೈಲೂರು ಗ್ರಾಪಂ (ಬೈಲೂರು), ನಿಟ್ಟೆ ಗ್ರಾಪಂ (ನಿಟ್ಟೆ-10), ಬ್ರಹ್ಮಾವರ ತಾಲೂಕಿನ ಹಂದಾಡಿ (ಹಂದಾಡಿ-1), ಬಾರಕೂರು (ಹೊಸಾಳ-2), ಯಡ್ತಾಡಿ (ಯಡ್ತಾಡಿ-1) ಹಾಗೂ ಉಡುಪಿ ತಾಲೂಕಿನ ಕಡೇಕಾರು ಗ್ರಾಪಂನ (ಕಡೇಕಾರು-2) ತಲಾ ಒಂದೊಂದು ವಾರ್ಡುಗಳಿಗೂ ಚುನಾವಣೆಯನ್ನು ಘೋಷಿಸಲಾಗಿದೆ ಎಂದರು.

ಡಿ.17ರಿಂದ ನಾಮಪತ್ರಗಳನ್ನು ಸ್ವೀಕರಿಸಲಾಗುತ್ತದೆ. ಡಿ.20 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಡಿ.21ರಂದು ನಾಮಪತ್ರಗಳ ಪರಿಶೀಲನೆ, 24 ಸೋಮವಾರ ನಾಮಪತ್ರ ಹಿಂದೆಗೆದುಕೊಳ್ಳಲು ಕೊನೆಯ ದಿನವಾಗಿರುತ್ತದೆ. ಜ. 2ರಂದು ಮತದಾನ ನಡೆಯಲಿದೆ. ಜ.4ರಂದು ಮತಗಳ ಎಣಿಕೆ ನಡೆಯಲಿದೆ ಎಂದವರು ವಿವರಿಸಿದರು.

ಮತದಾನವು ಜ. 2ರಂದು ಬೆಳಗ್ಗೆ 7ರಿಂದ ಸಂಜೆ 5ಗಂಟೆಯವರೆಗೆ ನಡೆಯಲಿದೆ. ಮತಗಳ ಎಣಿಕೆಯು ಜ.4ರ ಬುಧವಾರ ಬೆಳಗ್ಗೆ 8 ರಿಂದ ಆಯಾ ತಾಲೂಕು ಕೇಂದ್ರಗಳಲ್ಲಿ ನಡೆಯಲಿದೆ ಎಂದು ಎಡಿಸಿ ತಿಳಿಸಿದರು.

ಗಂಗೊಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ 5,142 ಪುರುಷ, 5319 ಮಹಿಳೆಯರು ಸೇರಿದಂತೆ ಒಟ್ಟು 10,461 ಮತದಾರರಿದ್ದು, ಇಲ್ಲಿ 12 ಮತಗಟ್ಟೆಗಳಿರುತ್ತವೆ ಎಂದರು.

ಯಡ್ತರೆಯಲ್ಲಿ 4022 ಪುರುಷ, 4090 ಮಹಿಳೆಯರು ಸೇರಿ ಒಟ್ಟು 8112 ಮತದಾರರಿದ್ದರೆ ಒಟ್ಟು 9 ಮತಗಟ್ಟೆಗಳಿರುತ್ತವೆ. ಬೈಂದೂರಿನಲ್ಲಿ 3753 ಪುರುಷ ಹಾಗೂ 3839 ಮಹಿಳೆಯರು ಸೇರಿದಂತೆ ಒಟ್ಟು 7592 ಮತದಾರರಿದ್ದು ಗ್ರಾಪಂ ವ್ಯಾಪ್ತಿಯಲ್ಲಿ 10 ಮತಗಟ್ಟೆಗಳಿರುತ್ತವೆ. ಚುನಾವಣೆಯಲ್ಲಿ ಕಾರ್ಯನಿರ್ವಹಿಸುವ ಚುನಾವಣಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿಗಳ ಹೆಸರುಗಳನ್ನು ಸಹ ಈಗಾಗಲೇ ಪ್ರಕಟಿಸಲಾಗಿದೆ ಎಂದು ವಿದ್ಯಾಕುಮಾರಿ ತಿಳಿಸಿದರು.

ಎವಿಎಂ ಬಳಕೆ: ಕುಂದಾಪುರದ ಗಂಗೊಳ್ಳಿ ಗ್ರಾಪಂ, ಬೈಂದೂರು ತಾಲೂಕಿನ ಬೈಂದೂರು ಮತ್ತು ಯಡ್ತರೆ ಗ್ರಾಪಂಗಳಲ್ಲಿ ಮತದಾನ ಮತಪತ್ರಗಳ ಬದಲು ವಿದ್ಯುನ್ಮಾನ ಮತಯಂತ್ರಗಳ ಮೂಲಕ ನಡೆಸಲು ಚುನಾವಣಾ ಆಯೋಗ ನಿರ್ದರಿಸಿದೆ. ಇದಕ್ಕಾಗಿ ಜಿಲ್ಲೆಗೆ 20 ಇವಿಎಂ ಹಾಗೂ 20 ಕಂಟ್ರೋಲ್ ಯುನಿಟ್‌ಗಳನ್ನು ಹಂಚಿಕೆ ಮಾಡಲಾಗಿದೆ ಎಂದರು.

ಉಳಿದ ಎಂಟು ಗ್ರಾಪಂಗಳ ಎಂಟು ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿ ಹಿಂದಿನಂತೆ ಮತಪತ್ರಗಳನ್ನು ಬಳಸಲಾಗುವುದು ಎಂದವರು ಸ್ಪಷ್ಟ ಪಡಿಸಿದರು.

ಮೂರು ಗ್ರಾಪಂಗಳ ಚುನಾವಣೆಯಲ್ಲಿ ಇವಿಎಂ ಮತಯಂತ್ರಗಳನ್ನು ಬಳಸುತ್ತಿರುವುದರಿಂದ ಇವುಗಳ ಬಳಕೆ ಕುರಿತು ಗ್ರಾಪಂಗಳ ಮತದಾರರಿಗೆ ಮತದಾನ ಮಾಡುವ ಕುರಿತು ಪ್ರಾತ್ಯಕ್ಷಿಕೆ ಹಾಗೂ ಅರಿವು ಮೂಡಿಸುವ ಕಾರ್ಯಕ್ರಗಳನ್ನು ಆಯಾ ಗ್ರಾಪಂ ಮಟ್ಟದಲ್ಲಿ ನಡೆಸಲಾಗುತ್ತಿದೆ ಎಂದು ವಿದ್ಯಾಕುಮಾರಿ ತಿಳಿಸಿದರು.

ಡಿ.17ರಿಂದ ನೀತಿ ಸಂಹಿತೆ ಜಾರಿ

ಚುನಾವಣಾ ಆಯೋಗದ ನಿರ್ದೇಶನದಂತೆ ಸಾರ್ವತ್ರಿಕ ಹಾಗೂ ಉಪಚುನಾವಣೆ ನಡೆಯುವ ಗ್ರಾಪಂ ವ್ಯಾಪ್ತಿಯಲ್ಲಿ ಡಿ.17ರಿಂದ ಜ.4ರವರೆಗೆ ಚುನಾಣಾ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ.

ನೀತಿ ಸಂಹಿತೆ ಜಾರಿಯಲ್ಲಿರುವ ಅವಧಿಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿರುವ ಪ್ರದೇಶಗಳಲ್ಲಿರುವ ಎಲ್ಲಾ ಮದ್ಯದ ಅಂಗಡಿಗಳನ್ನು ಹಾಗೂ ಮದ್ಯ ತಯಾರಿಕಾ ಘಟಕಗಳನ್ನು ಮುಚ್ಚಲು ಆದೇಶಿಸಲಾಗಿದೆ ಎಂದು ಎಡಿಸಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News