ಡಿ.21: ಭೋಪಾಲದ ಸಾಮಾಜಿಕ ಕಾರ್ಯಕರ್ತ ಡಾ.ಸತಿನಾಥ ಸಾರಂಗಿ ಮಂಗಳೂರಿಗೆ

Update: 2018-12-13 15:30 GMT

ಮಂಗಳೂರು, ಡಿ.13: ಭೋಪಾಲದ ಸಾಮಾಜಿಕ ಕಾರ್ಯಕರ್ತ ಡಾ.ಸತಿನಾಥ ಸಾರಂಗಿ ಡಿ.21ರಂದು ಎಂಆರ್‌ಪಿಎಲ್ ಭೂಸ್ವಾಧೀನಕ್ಕೊಳಗಾಗಲಿರುವ ಮತ್ತು ಕಾರ್ಖಾನೆಗಳಿರುವ ಪ್ರದೇಶಕ್ಕೆ ಭೇಟಿ ನೀಡಿ, ಪರಿಸ್ಥಿತಿಯ ಬಗ್ಗೆ ಸ್ಥಳಿಯರೊಂದಿಗೆ ಚರ್ಚಿಸಲಿದ್ದಾರೆ.

ಡಿ.21ರಂದು ಕರಾವಳಿ ಕರ್ನಾಟಕ ಜನಾಭಿವೃದ್ಧಿ ವೇದಿಕೆಯ ಆಶ್ರಯದಲ್ಲಿ ಜಿಲ್ಲಾಧಿಕಾರಿ ಕಚೇರಿಯ ಎದುರು ನಡೆಯುವ ‘ಎಂಆರ್‌ಪಿಎಲ್ ವಿಸ್ತರಣೆ ವಿರೋಧಿಸಿ, ತುಳುನಾಡನ್ನು ಉಳಿಸಿ’ ಜನಾಗ್ರಹ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಡಿ.22ರಂದು ಬೆಳಗ್ಗೆ ಸಂತ ಅಲೋಶಿಯಸ್ ಕಾಲೇಜಿನ ಸಭಾಂಗಣದಲ್ಲಿ ಹೋರಾಟಗಾರು, ಪತ್ರಕರ್ತರು, ಸಂಘಸಂಸ್ಥೆ ಹೊಣೆಗಾರರು ಹಾಗೂ ವಿದಾರ್ಥಿಗಳೊಂದಿಗೆ ಮುಕ್ತ ಸಂವಾದ ನಡೆಸಲಿದ್ದಾರೆ.

ಡಾ.ಸತಿನಾಥ ಸಾರಂಗಿಯವರು ಐಐಟಿ ವಾರಾಣಸಿಯಲ್ಲಿ ಸ್ನಾತಕೋತ್ತರ ಪದವಿ ಪಡೆದ ಬಳಿಕ, ಭೋಪಾಲದ ಅನಿಲ ದುರಂತ ಸಂತ್ರಸ್ತರ ಪುನರ್ವಸತಿ, ಚಿಕಿತ್ಸೆ, ಪರಿಹಾರಕ್ಕಾಗಿ ಹಾಗೂ ಕಾನೂನು ಹೋರಾಟಗಳಲ್ಲಿ ತೊಡಗಿಸಿಕೊಂಡವರು. ಭೋಪಾಲದಲ್ಲಿ ನಡೆದ ಅನಿಲ ದುರಂತ ವೇಳೆ ಚಳವಳಿಗೆ ಮುಂದಾಗಿದ್ದ ಅವರು, ಮುಂದೆ ಎಲ್ಲಿಯೂ ಅಂತಹ ಮಾನವ ಪ್ರೇರಿತ ದುರಂತಗಳ ತಡೆಗೆ ಕಾರ್ಯೋನ್ಮುಖರಾದವರು. ದೇಶ ವಿದೇಶಗಳಲ್ಲಿ ಅನೇಕ ಕಡೆ ಭೋಪಾಲ ದುರಂತದ ಬಗ್ಗೆ ತಮ್ಮ ಭಾಷಣ, ಬರಹ ಹಾಗೂ ಚರ್ಚಾಕೂಟಗಳ ಮೂಲಕ ಜಾಗೃತಿ ನೀಡುತ್ತಾ ಬಂದಿದ್ದಾರೆ.

ತಾವೇ ಸ್ಥಾಪಿಸಿದ ಸಂಭಾವನಾ ಟ್ರಸ್ಟ್ ಕ್ಲಿನಿಕ್ ಮೂಲಕ ಇಂದಿಗೂ ಅನಿಲ ಸೋರಿಕೆ ಉಂಟಾಗಿರುವ ಸಂತ್ರಸ್ತರ ಕಾಯಿಲೆಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಅವರ ನಿಸ್ವಾರ್ಥ ಸೇವೆಗೆ ಅನೇಕ ಪ್ರಶಸ್ತಿಗಳು ಅರಸಿ ಬಂದಿವೆ ಎಂದು ಕರಾವಳಿ ಕರ್ನಾಟಕ ಜನಾಭಿವೃದ್ಧಿ ವೇದಿಕೆಯ ಸದಸ್ಯ ಶಬ್ಬೀರ್ ಅಹ್ಮದ್ ಪ್ರಕಟನೆಯಲ್ಲಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News