ಬ್ರಿಟನ್: ‘ಗೋಲ್ಡನ್ ವೀಸಾ’ ಕಾರ್ಯಕ್ರಮ ಮುಂದುವರಿಕೆ

Update: 2018-12-13 16:25 GMT

ಲಂಡನ್, ಡಿ. 13: ‘ಗೋಲ್ಡನ್ ವೀಸಾ’ ಕಾರ್ಯಕ್ರಮವನ್ನು ಬ್ರಿಟನ್ ಸದ್ಯ ಮುಂದುವರಿಸಲಿದೆ ಎಂದು ಸರಕಾರ ಬುಧವಾರ ಹೇಳಿದೆ.

ಭಾರತ ಮತ್ತು ಇತರ ದೇಶಗಳ ಅತಿ ಶ್ರೀಮಂತ ಹೂಡಿಕೆದಾರರಿಗೆ ತ್ವರಿತವಾಗಿ ಬ್ರಿಟನ್ ಪ್ರವೇಶಿಸಲು ಅವಕಾಶ ನೀಡುವ ಕಾರ್ಯಕ್ರಮವನ್ನು ಸ್ಥಗಿತಗೊಳಿಸಲು ಕಳೆದ ವಾರ ಬ್ರಿಟನ್ ನಿರ್ಧರಿಸಿರುವುದನ್ನು ಸ್ಮರಿಸಬಹುದಾಗಿದೆ. ಈ ಕಾರ್ಯಕ್ರಮವು ಶ್ರೀಮಂತರಿಗೆ ಕಪ್ಪುಹಣ ಬಿಳುಪು ಮಾಡಲು ಅವಕಾಶ ನೀಡುತ್ತದೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಬ್ರಿಟನ್ ಆ ನಿರ್ಧಾರವನ್ನು ತೆಗೆದುಕೊಂಡಿತ್ತು.

2015ರಲ್ಲಿ ‘ಗೋಲ್ಡನ್ ವೀಸಾ’ ಕಾರ್ಯಕ್ರಮಕ್ಕೆ ಸಂಬಂಧಿಸಿದ ನಿಯಮಗಳನ್ನು ಬಿಗಿಗೊಳಿಸಲಾಗಿತ್ತು ಹಾಗೂ ಬ್ರಿಟನ್‌ಗೆ ಸಾಗಿಸುವ ಹಣದ ಮೂಲದ ಬಗ್ಗೆ ಪ್ರಶ್ನಿಸಲು ಅಧಿಕಾರಿಗಳಿಗೆ ಅಧಿಕಾರ ನೀಡಲಾಗಿತ್ತು.

2015ರ ಬಳಿಕದ ಅರ್ಜಿಗಳ ಪರಿಶೀಲನೆಯನ್ನು ಈ ವರ್ಷದ ಮೇ ತಿಂಗಳಲ್ಲಿ ಕೈಗೆತ್ತಿಕೊಂಡ ಬಳಿಕ, ಶ್ರೀಮಂತರ ತ್ವರಿತ ವೀಸಾವನ್ನು ಸ್ಥಗಿತಗೊಳಿಸುವ ನಿರ್ಧಾರಕ್ಕೆ ಬರಲಾಗಿತ್ತು.

ಭ್ರಷ್ಟಾಚಾರ ವಿರೋಧಿ ಕಾರ್ಯಕರ್ತರ ಆಕ್ರೋಶ

‘ಗೋಲ್ಡನ್ ವೀಸಾ’ ಕಾರ್ಯಕ್ರಮವನ್ನು ಸ್ಥಗಿತಗೊಳಿಸುವುದರಿಂದ ಹಿಂದಕ್ಕೆ ಸರಿಯುವ ಬ್ರಿಟನ್‌ನ ನಿರ್ಧಾರಕ್ಕೆ ಭ್ರಷ್ಟಾಚಾರ ವಿರೋಧಿ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಪ್ಪುಹಣವನ್ನು ಬಿಳುಪು ಮಾಡಲು ಈ ವೀಸಾ ಮಾರ್ಗವನ್ನು ಬಳಸಲಾಗುತ್ತದೆ ಹಾಗೂ ಸ್ವಚ್ಛ ಹಿನ್ನೆಲೆ ಹೊಂದಿರದ ವಿದೇಶಿಯರು ಬ್ರಿಟನ್‌ಗೆ ವಲಸೆ ಬರಲು ಅವಕಾಶ ಮಾಡಿಕೊಡುತ್ತದೆ ಎಂದು ಅವರು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News