ಲಂಕಾ ಸಂಸತ್ತು ವಿಸರ್ಜನೆ ಕಾನೂನುಬಾಹಿರ: ಸುಪ್ರೀಂ ಕೋರ್ಟ್ ತೀರ್ಪು

Update: 2018-12-13 16:33 GMT

ಕೊಲಂಬೊ, ಡಿ. 13: ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನ ಕಳೆದ ತಿಂಗಳು ಸಂಸತ್ತನ್ನು ವಿಸರ್ಜಿಸಿರುವುದು ಕಾನೂನುಬಾಹಿರವಾಗಿತ್ತು ಎಂದು ದೇಶದ ಸುಪ್ರೀಂ ಕೋರ್ಟ್ ಗುರುವಾರ ತೀರ್ಪು ನೀಡಿದೆ.

ಈ ತೀರ್ಪು ಅಧ್ಯಕ್ಷರ ವಿರುದ್ಧ ವಾಗ್ದಂಡನೆ ಕಲಾಪಗಳನ್ನು ಆರಂಭಿಸಲು ಅವರ ಎದುರಾಳಿಗಳಿಗೆ ಅವಕಾಶ ಮಾಡಿಕೊಟ್ಟಿದೆ.

ಅಕ್ಟೋಬರ್ 26ರಂದು ಪ್ರಧಾನಿ ವಿಕ್ರಮೆಸಿಂಘೆಯನ್ನು ದಿಢೀರ್ ವಜಾಗೊಳಿಸಿ, ಅವರ ಸ್ಥಾನಕ್ಕೆ ಮಾಜಿ ಅಧ್ಯಕ್ಷ ಮಹಿಂದ ರಾಜಪಕ್ಸರನ್ನು ನೇಮಕ ಮಾಡಿದ್ದ ಅಧ್ಯಕ್ಷರಿಗೆ ಈ ತೀರ್ಪು ತೀವ್ರ ಹಿನ್ನಡೆಯಾಗಿದೆ.

ಅಧ್ಯಕ್ಷರ ಅತ್ಯಂತ ವಿವಾದಾತ್ಮಕ ನಿರ್ಧಾರದಿಂದ ಹಿಂದೂ ಮಹಾಸಾಗರದ ದ್ವೀಪ ರಾಷ್ಟ್ರದಲ್ಲಿ ಸಾಂವಿಧಾನಿಕ ಬಿಕ್ಕಟ್ಟು ನೆಲೆಸಿರುವುದನ್ನು ಸ್ಮರಿಸಬಹುದಾಗಿದೆ.

ಬಳಿಕ ಅವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ನವೆಂಬರ್ 9ರಂದು ಸಂಸತ್ತನ್ನು ಅವಧಿಗಿಂತ ಎರಡು ವರ್ಷ ಮೊದಲೇ ವಿಸರ್ಜಿಸಿದ್ದರು ಹಾಗೂ ಜನವರಿಯಲ್ಲಿ ಮಧ್ಯಂತರ ಚುನಾವಣೆ ನಡೆಸಲು ಆದೇಶ ನೀಡಿದ್ದರು.

ಸಂಸತ್ತನ್ನು ವಿಸರ್ಜಿಸುವ ಮೂಲಕ ಸಿರಿಸೇನ ಸಂವಿಧಾನವನ್ನು ಉಲ್ಲಂಘಿಸಿದ್ದಾರೆ ಎಂಬುದಾಗಿ 7 ನ್ಯಾಯಾಧೀಶರ ಪೀಠವೊಂದು ಒಮ್ಮತದಿಂದ ನಿರ್ಧರಿಸಿದೆ.

ಕಿಕ್ಕಿರಿದು ಸೇರಿದ ನ್ಯಾಯಾಲಯದ ಕೋಣೆಯಲ್ಲಿ ಮಹತ್ವದ ತೀರ್ಪನ್ನು ಪ್ರಕಟಿಸಿದ ಮುಖ್ಯ ನ್ಯಾಯಾಧೀಶ ನಳಿನ್ ಪೆರೇರ, ಸಂಸತ್ತನ್ನು ಅವಧಿಗೆ ಮುಂಚಿತವಾಗಿ ವಿಸರ್ಜಿಸುವ ಮೂಲಕ ಸಿರಿಸೇನ ಸಂವಿಧಾನವನ್ನು ಉಲ್ಲಂಘಿಸಿದ್ದಾರೆ ಎಂಬುದನ್ನು ನ್ಯಾಯಾಧೀಶರು ಒಪ್ಪಿದ್ದಾರೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News