ಚುನಾವಣೆಯಲ್ಲಿ ಬಿಜೆಪಿಯ ಕಳಪೆ ಸಾಧನೆಯ ಲಾಭವೆತ್ತಲು ಶಿವಸೇನೆ ತಯಾರಿ

Update: 2018-12-13 17:51 GMT

ಮುಂಬೈ,ಡಿ.13: ಛತ್ತೀಸ್‌ಗಡ,ಮಧ್ಯಪ್ರದೇಶ ಮತ್ತು ರಾಜಸ್ಥಾನ ವಿಧಾನಸಭಾ ಚುನಾವಣೆಗಳಲ್ಲಿ ಪಕ್ಷದ ಆಘಾತಕಾರಿ ಸೋಲಿನಿಂದ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಜೋಡಿ ದಿಗ್ಭ್ರಮೆಗೊಂಡಿದ್ದರೆ,ಇತ್ತ ಕೇಂದ್ರ ಮತ್ತು ಮಹಾರಾಷ್ಟ್ರದಲ್ಲಿ ಕೇಸರಿ ಪಕ್ಷದ ಪಾಲುದಾರನಾಗಿರುವ ಶಿವಸೇನೆ ಪರಿಸ್ಥಿತಿಯ ಲಾಭವೆತ್ತಲು ಹವಣಿಸುತ್ತಿರುವಂತಿದೆ. ಈ ಮೂರೂ ರಾಜ್ಯಗಳಲ್ಲಿ ಬಿಜೆಪಿಯನ್ನು ಸೋಲಿಸಿದ್ದಕ್ಕೆ ಶಿವಸೇನೆ ಅಧ್ಯಕ್ಷ ಉದ್ಧವ ಠಾಕ್ರೆ ಅವರು ಈಗಾಗಲೇ ಮತದಾರರನ್ನು ಅಭಿನಂದಿಸಿದ್ದರೆ,ಬಿಜೆಪಿಯ ಮಿತ್ರರಾದ ಜೆಡಿಯು ಅಧ್ಯಕ್ಷ ಹಾಗೂ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಪಂಜಾಬ್‌ನ ಅಕಾಲಿ ದಳದ ಮುಖ್ಯಸ್ಥ ಪ್ರಕಾಶ ಸಿಂಗ್ ಬಾದಲ್ ಅವರು ಬಿಜೆಪಿಯ ಸೋಲಿನ ಬಗ್ಗೆ ಇನ್ನೂ ತುಟಿ ಬಿಚ್ಚಿಲ್ಲ.

 ಠಾಕ್ರೆ ಅವರು ಈಗಾಗಲೇ ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ಅವರೊಂದಿಗೆ ಮಾತುಕತೆಗಳನ್ನು ಆರಂಭಿಸಿದ್ದಾರೆಂದು ವರದಿಯಾಗಿದೆ. ತಮ್ಮ ಮತಗಳ ಬುನಾದಿಗೆ ಕನ್ನ ಕೊರೆಯುತ್ತಿರುವ ಬಿಜೆಪಿಯನ್ನು ಏಕಾಂಗಿಯಾಗಿಸುವುದು ಕಾಂಗ್ರೆಸ್,ಎನ್‌ಸಿಪಿ ಮತ್ತು ಶಿವಸೇನೆಯ ಅಘೋಷಿತ ಕಾರ್ಯತಂತ್ರವಾಗಿದೆ. ಬಿಜೆಪಿ ದುರ್ಬಲಗೊಂಡರೆ ಅದರಿಂದ ಮಹಾರಾಷ್ಟ್ರದಲ್ಲಿ ಹಿರಿಯ ಪಾಲುದಾರನೆಂಬ ತನ್ನ ವರ್ಚಸ್ಸನ್ನು ಮರಳಿ ಪಡೆಯಲು ಶಿವಸೇನೆಗೆ ನೆರವಾಗಲಿದೆ.

ಬಿಜೆಪಿಯು ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯನ್ನು ಹಿಂದೂಡಬೇಕು ಮತ್ತು 2019ರ ಎಪ್ರಿಲ್-ಮೇನಲ್ಲಿ ಲೋಕಸಭಾ ಚುನಾವಣೆಯ ಜೊತೆಗೆ ರಾಜ್ಯ ವಿಧಾನಸಭೆಗೂ ಚುನಾವಣೆಯನ್ನು ನಡೆಸಬೇಕು ಎಂದು ಶಿವಸೇನೆ ಬಯಸಿದೆ. ಸದ್ಯದ ಸ್ಥಿತಿಯಲ್ಲಿ ಠಾಕ್ರೆಯವರಂತೆ ನಿತೀಶ್ ಕುಮಾರ್ ಸಹ ಬಿಜೆಪಿಯೊಂದಿಗಿನ ಮೈತ್ರಿಯ ಲಾಭನಷ್ಟವನ್ನು ಲೆಕ್ಕ ಹಾಕಬೇಕಿದೆ. ಅವರು ಬಿಜೆಪಿಯೊಂದಿಗೆ ಮರುಮೈತ್ರಿ ಮಾಡಿಕೊಂಡ ಬಳಿಕ ಅಲ್ಪಸಂಖ್ಯಾತರು ಜೆಡಿಯುನಿಂದ ದೂರ ಸರಿಯುತ್ತಿದ್ದಾರೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸುವ ಸಂಘ ಪರಿವಾರದ ಸಂಕಲ್ಪ ಅಲ್ಪಸಂಖ್ಯಾತರು ಆರ್‌ಜೆಡಿ-ಕಾಂಗ್ರೆಸ್ ಮೈತ್ರಿಕೂಟದತ್ತ ವಾಲುವಂತೆ ಮಾಡಲಿದೆ. ಲೋಕ ಜನಶಕ್ತಿ ಪಾರ್ಟಿಯ ರಾಮ ವಿಲಾಸ ಪಾಸ್ವಾನ್ ಅವರು ಇದೇ ಸಂದಿಗ್ಧತೆಯಲ್ಲಿದ್ದಾರೆ.

ಇತ್ತ ದಕ್ಷಿಣ ಭಾರತದಲ್ಲಿಯೂ ಮಿತ್ರಪಕ್ಷಗಳನ್ನು ಗಳಿಸಿಕೊಳ್ಳಲು ಬಿಜೆಪಿಗೆ ಸಾಧ್ಯವಾಗುತ್ತಿಲ್ಲ. ಪಶ್ಚಿಮ ಬಂಗಾಳ ಮತ್ತು ಒಡಿಶಾಗಳಲ್ಲಂತೂ ಅದು ಸಂಪೂರ್ಣವಾಗಿ ಏಕಾಂಗಿಯಾಗಿದೆ. ಅತ್ತ ಅಸ್ಸಾಮಿನಲ್ಲಿಯೂ ಪೌರತ್ವ ನೋಂದಣಿ ವಿಷಯದಲ್ಲಿ ಎಜಿಪಿ ಮೋದಿ ಸರಕಾರದೊಂದಿಗೆ ಮುನಿಸಿಕೊಂಡಿದೆ.

ಈ ಹಿನ್ನೆಲೆಯಲ್ಲಿ ಕಬ್ಬಿಣ ಕಾದಾಗಲೇ ಬಡಿಯಬೇಕು ಎಂಬ ಧೋರಣೆ ಹೊಂದಿರುವ ಶಿವಸೇನೆ ಬಿಜೆಪಿಯ ಕಳಪೆ ಸಾಧನೆಯ ಲಾಭವೆತ್ತಲು ಅವಧಿಗೆ ಮುನ್ನವೇ ಚುನಾವಣೆಯನ್ನು ಬಯಸುತ್ತಿದೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News