ಸಿಪಿಐಎಂ ಹಿರಿಯ ಸದಸ್ಯ ಚಂದ್ರಹಾಸ ಕೊಡಿಯಾಲ್ ಬೈಲ್ ನಿಧನ

Update: 2018-12-14 09:20 GMT

ಮಂಗಳೂರು, ಡಿ. 14: ಸಿಪಿಐಎಂ ಹಿರಿಯ ಸದಸ್ಯ, ಪ್ರಗತಿಪರ ಚಿಂತಕರಾದ ಚಂದ್ರಹಾಸ ಕೊಡಿಯಾಲಬೈಲ್ (82) ಅವರು ಗುರುವಾರ ಕುತ್ತಾರಿನಲ್ಲಿರುವ ಸ್ವಗೃಹದಲ್ಲಿ ನಿಧನ ಹೊಂದಿದರು.

ಮಂಗಳೂರು ನಗರದ ಕೊಡಿಯಾಲಬೈಲ್ ನಲ್ಲಿ ಹುಟ್ಟಿ ಬೆಳೆದ ಚಂದ್ರಹಾಸ ಅವರು  ತನ್ನ ಎಳೆಯ ಪ್ರಾಯದಲ್ಲೇ ಕಮ್ಯುನಿಸ್ಟ್ ಚಳುವಳಿಗೆ ಆಕರ್ಷಿತರಾದರು. ಅದಕ್ಕೆ ಕಾರಣ ಅವರ ಅಣ್ಣ ಲಕ್ಷ್ಮಣ ಶೆಟ್ಟಿಗಾರ್ ಬೀಡಿ ಕಾರ್ಮಿಕರ ಸಂಘಟನೆಯ ಮುಂಚೂಣಿಯಲ್ಲಿದ್ದರು. ಆ ಮೂಲಕ ಕಮ್ಯುನಿಸ್ಟ್ ಪಕ್ಷದ ಪ್ರಭಾವಕ್ಕೆ ಒಳಗಾದರು. ಚಿಕ್ಕಂದಿನಿಂದಲೇ ದುಡಿಯುವ ವರ್ಗದ ಬಗ್ಗೆ ಭಾರೀ ಅಭಿಮಾನವಿರಿಸಿದ ಚಂದ್ರಹಾಸರವರು ಅವಿಭಜಿತ ಕಮ್ಯುನಿಸ್ಟ್ ಪಕ್ಷದಲ್ಲೇ ಸದಸ್ಯರಾಗಿದ್ದರು.

ಅಂದಿನಿಂದ ಇವತ್ತಿನವರೆಗೂ ಪಕ್ಷದ ಅನೇಕ ಹೋರಾಟ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದು ಮಾತ್ರವಲ್ಲದೆ ಅನೇಕ ಸಂದರ್ಭಗಳಲ್ಲಿ ಪಕ್ಷ, ಸಂಘಟನೆಗಳಿಗೆ ಆರ್ಥಿಕ ಸಹಕಾರವನ್ನು ನೀಡುತ್ತಿದ್ದರು. ತೆರೆಯ ಮರೆಯಲ್ಲಿದ್ದುಕೊಂಡು ಪಕ್ಷದ ಚಳುವಳಿಗೆ ಸಂಪೂರ್ಣ ಸಹಕಾರ ನೀಡುತ್ತಿದ್ದು, ಅವರ ಬದ್ಧತೆಯನ್ನು ಎತ್ತಿ ತೋರಿಸಿದೆ. ಟೈಲರ್ ವೃತ್ತಿಯನ್ನು ತನ್ನ ಜೀವನಾಧಾರವನ್ನಾಗಿಸಿದ ಚಂದ್ರಹಾಸರು ಕಳೆದ 6 ದಶಕಗಳ ಕಾಲ ಮಂಗಳೂರಿನ ಹೃದಯಭಾಗದಲ್ಲಿ ಸ್ಟೈಲಿಶ್ ಟೈಲರ್ ಎಂಬ ಭಾರೀ ಪ್ರಖ್ಯಾತಿ ಪಡೆದ ಸಂಸ್ಥೆಯನ್ನು ಹೊಂದಿ, ತನ್ನ ವ್ರತಿಯಲ್ಲೂ ಅಪಾರ ನಿಷ್ಠೆವುಳ್ಳವರಾಗಿದ್ದರು.

ಅವರ ನಿಧನವು ಮಂಗಳೂರಿನ ದುಡಿಯುವ ವರ್ಗದ ಚಳುವಳಿಗೆ ಅಪಾರ ನಷ್ಟವುಂಟಾಗಿದೆ ಎಂದು ಸಿಪಿಐಎಂ ತನ್ನ ಭಾವಪೂರ್ಣ ಶ್ರದ್ದಾಂಜಲಿಯಲ್ಲಿ ತಿಳಿಸಿದೆ.

ಅಂತ್ಯಕ್ರಿಯೆಯಲ್ಲಿ ಸಿಪಿಐಎಂ ಜಿಲ್ಲಾ ನಾಯಕರಾದ ವಸಂತ ಆಚಾರಿ, ಜೆ. ಬಾಲಕೃಷ್ಣ ಶೆಟ್ಟಿ, ಕೃಷ್ಣಪ್ಪ ಸಾಲ್ಯಾನ್, ಸುನಿಲ್ ಕುಮಾರ್ ಬಜಾಲ್, ವಾಸುದೇವ ಉಚ್ಚಿಲ್, ಮುನೀರ್ ಕಾಟಿಪಳ್ಳ, ಜಯಂತ ನಾಯಕ್, ಪದ್ಮಾವತಿ ಶೆಟ್ಟಿ, ಯೋಗೀಶ್ ಜಪ್ಪಿನಮೊಗರು, ಕಾಸರಗೋಡು ಜಿಲ್ಲೆಯ ಸಿಪಿಐಎಂ ನಾಯಕರಾದ ಕೆ.ಆರ್.ಜಯಾನಂದ, ಕೃಷ್ಣ ಶೆಟ್ಟಿಗಾರ್, ಜಯಕರ ಮಂಜೇಶ್ವರ ಮುಂತಾದವರು ಭಾಗವಹಿಸಿದ್ದರು.

ಮೃತರು ಪತ್ನಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News