ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ಪ್ರಸ್ತಾವನೆ: ಎಸ್ಪಿ ಲಕ್ಷ್ಮಣ್ ನಿಂಬರ್ಗಿ

Update: 2018-12-14 11:14 GMT

ಉಡುಪಿ, ಡಿ.14: ರಾಷ್ಟ್ರೀಯ ಹೆದ್ದಾರಿ 66ರ ಸಂತೆಕಟ್ಟೆ, ಅಂಬಲಪಾಡಿ ಹಾಗೂ ಕಟಪಾಡಿ ಜಂಕ್ಷನ್‌ಗಳಲ್ಲಿ ಟ್ರಾಫಿಕ್ ಸಿಗ್ನಲ್‌ಗಳನ್ನು ಅಳವಡಿಸುವಂತೆ ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ್ ಬ.ನಿಂಬರ್ಗಿ ತಿಳಿಸಿದ್ದಾರೆ.

ಉಡುಪಿ ಜಿಲ್ಲಾ ಪೊಲೀಸ್ ಕಚೇರಿಯಲ್ಲಿಂದು ನಡೆದ ಎಸ್ಪಿ ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ಅವರು ಮಾಧ್ಯಮದವರಿಗೆ ಈ ವಿಷಯ ತಿಳಿಸಿದರು. ಈ ಮೂರು ಜಂಕ್ಷನ್‌ಗಳಲ್ಲಿ ವಾಹನ ದಟ್ಟನೆ ಹೆಚ್ಚಿದ್ದು, ಪೊಲೀಸ್ ಸಿಬ್ಬಂದಿ ಗಳನ್ನು ನೇಮಕ ಮಾಡಿದರೂ ಟ್ರಾಫಿಕ್ ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಆದುದರಿಂದ ಇಲ್ಲಿಗೆ ಟ್ರಾಫಿಕ್ ಸಿಗ್ನಲ್‌ಗಳ ಅಗತ್ಯತೆಯನ್ನು ಮನಗಂಡು ಇಲಾಖೆಗೆ ಪತ್ರ ಬರೆಯಲಾಗಿದೆ ಎಂದರು.

ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್ ಸಿಗ್ನಲ್ ಅಳವಡಿಸಲು ಅವಕಾಶ ಇಲ್ಲ ದಿದ್ದರೂ ಇಲ್ಲಿ ಸಿಗ್ನಲ್ ಅಳವಡಿಸದಿದ್ದರೆ ಟ್ರಾಫಿಕ್ ನಿಯಂತ್ರಣ ಸಾಧ್ಯವಿಲ್ಲ. ಆದುದರಿಂದ ವಿಶೇಷ ಆದ್ಯತೆ ಮೇರೆಗೆ ಈ ಮೂರು ಜಂಕ್ಷನ್‌ಗಳಲ್ಲಿ ಟ್ರಾಫಿಕ್ ಸಿಗ್ನಲ್ ಮಂಜೂರು ಮಾಡುವಂತೆ ಇಲಾಖೆಗೆ ಮನವಿ ಮಾಡಲಾಗಿದೆ ಎಂದು ಅವರು ಹೇಳಿದರು.

ಈ ಹಿಂದೆ 10 ಕಿ.ಮೀ. ದೂರದ ಕುಂದಾಪುರದ ಪೊಲೀಸ್ ಠಾಣಾ ವ್ಯಾಪ್ತಿ ಯಲ್ಲಿದ್ದ ಹಟ್ಟಿಯಂಗಡಿ ಗ್ರಾಮವು ಈಗ 15ಕಿ.ಮೀ. ದೂರದ ಕಂಡ್ಲೂರಿನಲ್ಲಿ ಹೊಸದಾಗಿ ಸ್ಥಾಪನೆಗೊಂಡ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಗೆ ಬರುತ್ತಿದ್ದು, ಇದರಿಂದ ಗ್ರಾಮಸ್ಥರಿಗೆ ದೂರು ನೀಡಲು ಸಮಸ್ಯೆ ಯಾಗುತ್ತಿದೆ. ಆದುದರಿಂದ ಮೊದಲಿನಂತೆ ಈ ಗ್ರಾಮವನ್ನು ಕುಂದಾಪುರ ಠಾಣಾ ವ್ಯಾಪ್ತಿಗೆ ಒಳಪಡಿಸುವಂತೆ ಸ್ಥಳೀಯರೊಬ್ಬರು ಕರೆ ಮಾಡಿ ಮನವಿ ಮಾಡಿದರು. ಈ ಕುರಿತು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಎಸ್ಪಿ ಹೇಳಿದರು.

ಗಂಗೊಳ್ಳಿ ಸ್ಮಶಾನದಲ್ಲಿ ಜಾತಿಬೇಧ

ಗಂಗೊಳ್ಳಿಯ ಸ್ಮಶಾನದಲ್ಲಿ ಕೇವಲ ಒಂದು ಜಾತಿಯವರು ಬಿಟ್ಟರೆ ಇತರ ಜಾತಿಯವರ ಹೆಣಗಳನ್ನು ಸುಡಲು ಅವಕಾಶ ನೀಡುತ್ತಿಲ್ಲ. ಈ ಬಗ್ಗೆ ಗ್ರಾಪಂಗೆ ದೂರು ನೀಡಿದರೂ ಸ್ಪಂದನೆ ಇಲ್ಲ. ಅಲ್ಲಿದ್ದ ಸಾರ್ವಜನಿಕ ಸ್ಮಶಾನ ಎಂಬ ಬೋರ್ಡ್‌ನ್ನು ಕೂಡ ಗ್ರಾಪಂ ತೆರವುಗೊಳಿಸಿದೆ. ತಹಶೀಲ್ದಾರರು ಇಲ್ಲಿ ಎಲ್ಲ ಜಾತಿಯವರಿಗೆ ಅವಕಾಶ ನೀಡುವಂತೆ ಸೂಚಿಸಿದರೂ ಗ್ರಾಪಂ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಗ್ರಾಮಸ್ಥರೊಬ್ಬರು ದೂರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಎಸ್ಪಿ, ಈ ಸಂಬಂಧ ಕುಂದಾಪುರ ತಹಶೀಲ್ದಾರ್ ಹಾಗೂ ಡಿವೈಎಸ್ಪಿ ಅವರಿಗೆ ಸ್ಥಳ ಪರಿಶೀಲಿಸಿ ಸಮಸ್ಯೆ ಬಗೆಹರಿಸುವಂತೆ ಸೂಕ್ತ ನಿರ್ದೇಶನ ನೀಡಲಾಗುವುದು ಎಂದು ತಿಳಿಸಿದರು.

ಉಡುಪಿ ನಗರಸಭೆ ಕಚೇರಿ ಹಾಗೂ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಎದುರಿನ ಪಾರ್ಕಿಂಗ್ ಸಮಸ್ಯೆ ಕುರಿತ ದೂರಿಗೆ ಪ್ರತ್ರಿಯಿಸಿದ ಎಸ್ಪಿ, ನಗರಸಭೆ ಈ ಸಂಬಂಧ ನಗರ ಹಾಗೂ ಮಣಿಪಾಲದಲ್ಲಿ ಸ್ಥಳಗಳನ್ನು ಗುರುತಿಸಿ ಬಹುಮಹಡಿ ಪಾರ್ಕಿಂಗ್ ಕಟ್ಟಡಗಳನ್ನು ನಿರ್ಮಿಸಬೇಕಾಗಿದೆ. ಇದ ರಿಂದ ನಗರದ ಪಾರ್ಕಿಂಗ್ ಸಮಸ್ಯೆ ಬಗೆಹರಿಸಬಹುದು ಎಂದು ಅಭಿಪ್ರಾಯ ಪಟ್ಟರು.

ಮಲ್ಪೆಪಡುಕೆರೆ ರಸ್ತೆಯಲ್ಲಿ ದ್ವಿಚಕ್ರ ವಾಹನ ಸವಾರರಿಂದ ಅತೀವೇಗದ ಸಂಚಾರ, ಮಣಿಪಾಲ ಲಕ್ಷ್ಮೀಂದ್ರ ನಗರ 7ನೇ ಕ್ರಾಸ್ ಬಳಿ ಬ್ಯಾರಿಕೇಡ್ ಅಳ ವಡಿಕೆ, ಗಂಗೊಳ್ಳಿ ಪರ್ಮಿಟ್ ಇಲ್ಲದೆ ಬಸ್ ಓಡಾಟ, ಇಸ್ಪೀಟ್ ಜುಗಾರಿ, ಕಾರ್ಕಳ ಹಾಳೆಕಟ್ಟೆ ಜಿಪಂ ರಸ್ತೆಯಲ್ಲಿ ಅಧಿಕ ಭಾರದ ವಾಹನಗಳು ಸಂಚಾರ, ಉಡುಪಿ ಕಲ್ಪನಾ ಥಿಯೇಟರ್ ಬಳಿ ಪುಟ್‌ಪಾತ್‌ನಲ್ಲಿ ಬೀದಿ ವ್ಯಾಪಾರ, ಉಡುಪಿ ಬಿಗ್ ಬಜಾರ್‌ನಲ್ಲಿ ಪಾರ್ಕಿಂಗ್ ಸಮಸ್ಯೆ, ಕರ್ಕಶ ಹಾರ್ನ್ ಕುರಿತ ದೂರುಗಳು ಬಂದವು.

ಠಾಣೆಯ ಕರೆಗಳು ಮನೆಗೆ !

ಉಡುಪಿ ವೃತ್ತ ನಿರೀಕ್ಷಕರ ಕಚೇರಿಯ ಸ್ಥಿರ ದೂರವಾಣಿಗೆ ಬರುವ ಕರೆಗಳು ತಮ್ಮ ಮನೆಯ ದೂರವಾಣಿಗೆ ಬರುವ ಕುರಿತು ನಗರದ ನಿವಾಸಿಯೊಬ್ಬರು ಎಸ್ಪಿಯವರಲ್ಲಿ ದೂರಿಕೊಂಡರು. ಈ ಕುರಿತು ಬಿಎಸ್ಸೆನ್ನೆಸ್ ಕಚೇರಿಯನ್ನು ಸಂಪರ್ಕಿಸಿ ಸಮಸ್ಯೆ ಬಗೆಹರಿಸಲಾಗುವುದು ಎಂದು ಎಸ್ಪಿ ನಿಂಬರ್ಗಿ ಭರವಸೆ ನೀಡಿದರು.

ಕುಂದಾಪುರದಿಂದ ಉಡುಪಿಗೆ ಬರುವ ಖಾಸಗಿ ಬಸ್‌ಗಳು ಸಂತೆಕಟ್ಟೆಯ ಸರ್ವಿಸ್ ರಸ್ತೆಯಲ್ಲಿರುವ ನಿಲ್ದಾಣದಲ್ಲಿ ನಿಲುಗಡೆ ಮಾಡದೆ ರಾ.ಹೆ.ಯಲ್ಲಿ ನಿಲ್ಲಿಸಿ ಸಂಚಾರಕ್ಕೆ ತೊಂದರೆ ಮಾಡುತ್ತಿರುವ ಕುರಿತ ದೂರಿಗೆ ಪ್ರತಿಕ್ರಿಯಿಸಿದ ಎಸ್ಪಿ ಲಕ್ಷ್ಮಣ್ ನಿಂಬರ್ಗಿ, ಅಂತಹ ಬಸ್‌ಗಳನ್ನು ಮುಟ್ಟುಗೋಲು ಹಾಕುವಂತೆ ಸಂಚಾರ ಪೊಲೀಸರಿಗೆ ಸೂಚನೆ ನೀಡಿದರು.

ಇತರ ಇಲಾಖೆಯ ದೂರುಗಳು!

ಮಲ್ಪೆ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ, ಮಲ್ಪೆಬಂದರಿನಲ್ಲಿ ಬಾಲ ಕಾರ್ಮಿಕರು, ಅಕ್ರಮ ಕಲ್ಲು ಗಣಿಗಾರಿಕೆ, ಮರಳುಗಾರಿಕೆ, ಕುಂದಾಪುರ ನೆರೆಮನೆಯ ತೆಂಗಿನ ಮರದಿಂದ ತೊಂದರೆ, ನಿಟ್ಟೂರಿನಲ್ಲಿ ಸಾಕು ನಾಯಿಗಳ ಹಾವಳಿ ಸೇರಿದಂತೆ ಪೊಲೀಸ್ ಇಲಾಖೆಗೆ ಸಂಬಂಧಿಸದ ಹಲವು ದೂರುಗಳು ಬಂದವು. ಇದಕ್ಕೆ ಸ್ಪಂದಿಸಿದ ಎಸ್ಪಿ ನಿಂಬರ್ಗಿ, ಈ ಕುರಿತು ಆಯಾ ಸಂಬಂಧಪಟ್ಟ ಇಲಾಖೆಗಳಿಗೆ ತಿಳಿಸಲಾಗುವುದು ಎಂದು ತಿಳಿಸಿದರು.

ಮೂರು ವಾರಗಳ ಒಟ್ಟು ಪ್ರಕರಣಗಳು

ಉಡುಪಿ ಜಿಲ್ಲೆಯಲ್ಲಿ ನ.23ರಿಂದ ಈವರೆಗೆ 7 ಮಟ್ಕಾ ಪ್ರಕರಣದಲ್ಲಿ 8, 4 ಜುಗಾರಿ ಪ್ರಕರಣದಲ್ಲಿ 25, ಒಂದು ಗಾಂಜಾ ಸೇವನೆ ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಲಾಗಿದೆ. ಉಳಿದಂತೆ ಕೋಟ್ಪಾ 38, ಕುಡಿದು ವಾಹನ ಚಾಲನೆ 79, ಕರ್ಕಶ ಹಾರ್ನ್ 174, ಮೊಬೈಲ್ ಬಳಸಿ ವಾಹನ ಚಾಲನೆ 27, ಹೆಲ್ಮೆಟ್ ಧರಿಸದೆ ವಾಹನ ಚಾಲನೆ 1571, ಅತಿವೇಗ 52, ಇತರ ಮೋಟಾರ್ ಕಾಯಿದೆ ಉಲ್ಲಂಘನೆ 2601 ಪ್ರಕರಣಗಳು ದಾಖಲಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News