ಮೀನುಗಾರಿಕೆ ಕಾಲೇಜುಗಳ ಸಾಂಸ್ಕೃತಿಕ-ಕ್ರೀಡಾಕೂಟ, ವಸ್ತು ಪ್ರದರ್ಶನ

Update: 2018-12-14 12:52 GMT

ಮಂಗಳೂರು, ಡಿ.14: ಮಂಗಳೂರು ಮೀನುಗಾರಿಕಾ ಕಾಲೇಜಿನ ಸ್ವರ್ಣ ಮಹೋತ್ಸವದ ಅಂಗವಾಗಿ ಕಾಲೇಜಿನಲ್ಲಿ ಆಯೋಜಿಸಿರುವ ಸರಣಿ ಕಾರ್ಯಕ್ರಮದಲ್ಲಿ ಶುಕ್ರವಾರ ಎರಡು ದಿನಗಳ ಅಖಿಲ ಭಾರತ ಮೀನುಗಾರಿಕೆ ಕಾಲೇಜುಗಳ ಸಾಂಸ್ಕೃತಿಕ ಮತ್ತು ಕ್ರೀಡಾಕೂಟ ಹಾಗೂ ವಸ್ತು ಪ್ರದರ್ಶನ ಆರಂಭಗೊಂಡಿತು.

ಕೊಚ್ಚಿನ್‌ನ ಸಾಗರೋತ್ಪನ್ನ ರಫ್ತು ಅಭಿವೃದ್ಧಿ ಪ್ರಾಧಿಕಾರ ಮತ್ತು ಮಂಗಳೂರು ಮೀನುಗಾರಿಕೆ ಕಾಲೇಜು ಹಳೇ ವಿದ್ಯಾರ್ಥಿಗಳ ಸಂಘದ ಸಹಭಾಗಿತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ದೇಶದ 29 ಮೀನುಗಾರಿಕಾ ಕಾಲೇಜುಗಳ ಪೈಕಿ ಐದು ರಾಜ್ಯಗಳ 10 ಕಾಲೇಜಿನ ತಂಡಗಳು ಈ ಕೂಟದಲ್ಲಿ ಭಾಗವಹಿಸಿವೆ. ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಕರ್ನಾಟಕ (ಮಂಗಳೂರು), ಮಹಾರಾಷ್ಟ್ರದ ತಂಡಗಳನ್ನು ಇದು ಒಳಗೊಂಡಿದೆ. ತಮಿಳುನಾಡಿನಿಂದ ಐದು ತಂಡಗಳು ಭಾಗವಹಿಸಿ ಗಮನ ಸೆಳೆದಿವೆ.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ (ಪ್ರಭಾರ) ಡಾ.ಈಶ್ವರ್, ಮಂಗಳೂರು ವಿಶ್ವವಿದ್ಯಾನಿಲಯವು ಪ್ರಥಮ ಬಾರಿಗೆ ಸಾಂಸ್ಕೃತಿಕ ಮತ್ತು ಕ್ರೀಡಾ ನಿಯಮ ಜಾರಿ ಮಾಡಿದೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕೂಡ ಪಠ್ಯೇತರ ಚಟುವಟಿಕೆಗಳಿಗೆ ಆದ್ಯತೆ ನೀಡುತ್ತಿವೆ. ಇದಕ್ಕೆ ಪೂರಕವಾಗಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವ ಕೆಲಸ ನಡೆಯಬೇಕಾಗಿದೆ ಎಂದರು.

ಭಾರತವು ಶೇ.60ಕ್ಕಿಂತ ಹೆಚ್ಚು ಯುವಜನತೆಯೊಂದಿಗೆ ಯುವ ಭಾರತವಾಗಿ ರೂಪುಗೊಂಡಿದ್ದು, ದೇಶದ ಉತ್ತಮ ಭವಿಷ್ಯದ ದೃಷ್ಟಿಯಿಂದ ವೌಲ್ಯಯುತ ಶಿಕ್ಷಣ ನೀಡುವುದು ಪ್ರಾಧ್ಯಾಪಕರ ಮತ್ತು ಶಿಕ್ಷಣ ಸಂಸ್ಥೆಗಳ ಜವಾಬ್ದಾರಿ ಎಂದು ಡಾ. ಈಶ್ವರ್ ನುಡಿದರು.

ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಶ್ರೀನಿವಾಸ ರಾವ್ ಮಾತನಾಡಿ, ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸುವ ಮೂಲಕ ವಿದ್ಯಾರ್ಥಿಗಳಿಗೆ ಪ್ರತಿಭೆ ಅನಾವರಣದ ಜತೆಗೆ ಸಂಸ್ಕೃತಿ ವಿನಿಮಯ ಮಾಡಿಕೊಳ್ಳಲು ಅವಕಾಶವಿದೆ. ವಿದ್ಯಾರ್ಥಿಗಳು ಈ ಅವಕಾಶದ ಸದುಪಯೋಗ ಮಾಡಬೇಕು ಎಂದು ಕರೆ ನೀಡಿದರು.

ಮಂಗಳೂರು ಮೀನುಗಾರಿಕಾ ಕಾಲೇಜಿನ ಡೀನ್ ಡಾ.ಎಚ್. ಶಿವಾನಂದ ಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಕಾಲೆಜಿನ ಪ್ರಾಧ್ಯಾಪಕ ಗಂಗಾಧರ ಗೌಡ ಉಪಸ್ಥಿತರಿದ್ದರು. ಕಾಲೇಜಿನ ಎ್ಆರ್‌ಎಂ ವಿಭಾಗದ ಮುಖ್ಯಸ್ಥ ಡಾ.ಶಿವಪ್ರಕಾಶ್ ಎಸ್.ಎಂ. ಸ್ವಾಗತಿಸಿದರು. ಅಕ್ವಾಟಿಕ್ ಬಯೋಲಜಿ ವಿಭಾಗದ ಪ್ರಾಧ್ಯಾಪಕ ಡಾ.ಶಿವಕುಮಾರ್ ಮಗದ ವಂದಿಸಿದರು. ಕಾಲೇಜು ಪ್ರಾಧ್ಯಾಪಕಿ ಮೃದುಲಾ ರಾಜೇಶ್ ಮತ್ತು ವಂದನಾ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News