×
Ad

ಕಾರ್ಕಳದ ಖಾಸಗಿ ಶಾಲೆಯಲ್ಲಿ ಅತ್ಯಾಚಾರ ಪ್ರಕರಣ: ಆರೋಪಿ ಶಿಕ್ಷಕನಿಗೆ ನ್ಯಾಯಾಂಗ ಬಂಧನ

Update: 2018-12-14 19:47 IST

ಉಡುಪಿ, ಡಿ.14: ಕಾರ್ಕಳದ ಖಾಸಗಿ ಶಾಲೆಯೊಂದರ ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಪೊಕ್ಸೋ ಕಾಯಿದೆ ಯಡಿ ಬಂಧಿಸಲ್ಪಟ್ಟ ಶಿಕ್ಷಕ ಪ್ರಸಾದ್ (28) ಎಂಬಾತನಿಗೆ ಕುಂದಾಪುರ ಜಿಲ್ಲಾ ವಿಶೇಷ ನ್ಯಾಯಾಲಯವು 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ಆದೇಶ ನೀಡಿದೆ.

ಪ್ರಸಾದ್ ಶಾಲೆಯ ಕೋಣೆಯೊಂದರಲ್ಲಿ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗುವ ವೀಡಿಯೊ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ಹಿನ್ನೆಲೆಯಲ್ಲಿ ಶಾಲಾ ಮುಖ್ಯಸ್ಥರು ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪೊಕ್ಸೋ ಕಾಯಿದೆಯಡಿ ಪ್ರಕರಣ ದಾಖಲಿಸಲಾಗಿತ್ತು.

ಅದರಂತೆ ಆರೋಪಿಯನ್ನು ಬಂಧಿಸಿರುವ ಪೊಲೀಸರು, ಇಂದು ಕುಂದಾಪುರದಲ್ಲಿರುವ ಜಿಲ್ಲಾ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ನ್ಯಾಯಾ ಧೀಶರು ಆರೋಪಿಯನ್ನು ಡಿ. 27ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ನೀಡಿದರು. ಅದರಂತೆ ಪೊಲೀಸರು ಆರೋಪಿಯನ್ನು ಹಿರಿಯಡ್ಕದಲ್ಲಿ ರುವ ಕಾರಾಗೃಹಕ್ಕೆ ಕೊಂಡೊಯ್ದಿದ್ದಾರೆ.

‘ಈ ಪ್ರಕರಣಕ್ಕೆ ಸಂಬಂಧಿಸಿ ಶಿಕ್ಷಕ ಮಾತ್ರವಲ್ಲದೆ ಈ ವೀಡಿಯೊವನ್ನು ಪ್ರಸಾರ ಮಾಡಿದ ಸ್ಥಳೀಯ ಖಾಸಗಿ ವಾಹಿನಿಯೊಂದರ ಹಾಗೂ ಫೋಟೊ ಪ್ರಕಟಿಸಿದ ವೆಬ್‌ಸೈಟ್ ಒಂದರ ವಿರುದ್ಧವೂ ಶಾಲಾ ಮುಖ್ಯಸ್ಥರು ನೀಡಿದ ದೂರಿನಂತೆ ಪ್ರಕರಣ ದಾಖಲಿಸಲಾಗಿದೆ. ಅದೇ ರೀತಿ ಈ ವೀಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟವರ ಬಗ್ಗೆಯೂ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ್ ನಿಂಬರ್ಗಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News