ಮೂಳೆ ಬೆಳವಣಿಯನ್ನು ಕುಂಠಿತಗೊಳಿಸುವ ಅಪರೂಪದ ಹೊಸ ರೋಗ ಪತ್ತೆ ಹಚ್ಚಿದ ಮಣಿಪಾಲ ಜೆನೆಟಿಕ್ಸ್ ತಂಡ

Update: 2018-12-14 15:41 GMT

ಮಣಿಪಾಲ, ಡಿ.14: ಮಣಿಪಾಲದ ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ಮೆಡಿಕಲ್ ಜೆನೆಟಿಕ್ಸ್ ವಿಭಾಗದ ವೈದ್ಯಕೀಯ ವಿಜ್ಞಾನಿಗಳ ತಂಡವು ಮಕ್ಕಳಲ್ಲಿ ಮೂಳೆ ಬೆಳವಣಿಗೆಯನ್ನು ಕುಂಠಿತ ಮಾಡಬಲ್ಲ ಅಪರೂಪದ ರೋಗವೊಂದನ್ನು ಮೊದಲ ಬಾರಿಗೆ ಪತ್ತೆ ಮಾಡಿದ್ದಾರೆ.

ಈ ಸ್ಥಿತಿಯು ಮೂಳೆಗಳ ಅಸಹಜ ಬೆಳವಣಿಗೆಯಿಂದ ವ್ಯಕ್ತಿಗಳಲ್ಲಿ ಕುಬ್ಜತೆ ಯನ್ನು ಉಂಟು ಮಾಡಬಲ್ಲದು. ಇದರ ಜೆನೆಟಿಕ್ ಮೂಲವನ್ನೂ ಸಹ ಪತ್ತೆ ಹಚ್ಚುವುದರಲ್ಲಿ ತಂಡವು ಯಶಸ್ವಿಯಾಗಿದೆ ಎಂದು ತಂಡದ ಮುಖ್ಯಸ್ಥರಾದ ಡಾ. ಗಿರೀಶ್ ಕಟ್ಟ ಅವರು ತಿಳಿಸಿದ್ದು, ಹೊಸ ಆವಿಷ್ಕಾರದ ಕುರಿತು ಸಂಪೂರ್ಣ ಮಾಹಿತಿಯನ್ನು ನೀಡಿದ್ದಾರೆ.

ಕೆಎಂಸಿ ತಂಡದ ಈ ಸಂಶೋಧನೆಯನ್ನು ಹೆಸರಾಂತ ವೈದ್ಯಕೀಯ ಪತ್ರಿಕೆಯಾದ ‘ಹ್ಯೂಮನ್ ಮ್ಯೂಟೇಶನ್’ನಲ್ಲಿ (ಪ್ರಕಾಶಕರು-ವೈಲಿ, ಅಮೇರಿಕಾ) ಪ್ರಕಟಿಸಲಾಗಿದೆ.

ಎರಡು ಬೇರೆ ಬೇರೆ ಕುಟುಂಬದ ಮಕ್ಕಳನ್ನು ಪರಿಶೀಲಿಸಿದಾಗ ಅವರ ಬೆಳವಣಿಗೆ ಸಾಮಾನ್ಯ ಮಕ್ಕಳಿಗಿಂತ ತುಂಬಾ ಕುಂಠಿತವಾಗಿರುವುದು ಮತ್ತು ಅವರ ಬೆಳವಣಿಗೆ ಬಹಳ ನಿಧಾನಗತಿಯಲ್ಲಿರುವುದನ್ನು ಮಕ್ಕಳ ತಜ್ಞರು ಗಮನಿಸಿ ಮಣಿಪಾಲದ ಜೆನೆಟಿಕ್ಸ್ ವೈದ್ಯರಲ್ಲಿಗೆ ಸಲಹೆಗಾಗಿ ಶಿಫಾರಸು ಮಾಡಿದ್ದರು. ಮಣಿಪಾಲದ ವೈದ್ಯಕೀಯ ಜೆನೆಟಿಕ್ಸ್ ತಜ್ಞರಾದ ಡಾ.ಗಿರೀಶ್ ಕಟ್ಟ ಮತ್ತು ಡಾ. ಅಂಜು ಶುಕ್ಲಾ, ಇದು ಸಾಮಾನ್ಯವಾಗಿ ಕಂಡುಬರುವ ಸ್ಥಿತಿ ಯಲ್ಲ ಎಂಬುದನ್ನು ಅರಿತು ಎಕ್ಸೋಮ್ ಸಿಕ್ವೆನ್ಸಿಂಗ್ ಎಂಬ ಆಧುನಿಕ ತಂತ್ರಜ್ಞಾನದ ಮೂಲಕ ರೋಗಿಯ ಎಲ್ಲಾ ಅನುವಂಶಿಕ ಧಾತು(ಜೀನ್ಸ್)ಗಳ ಅಧ್ಯಯನ ನಡೆಸಿದರು.

ಈ ವೈದ್ಯಕೀಯ ತಂಡ ಮಣಿಪಾಲದ ಬಯೋ ಇನ್‌ಫಾರ್ಮಾಟಿಕ್ಸ್ ಪರಿಣಿತರಾದ ನೀತುಕೃಷ್ಣ ಕೌಸ್ತುಭಮ್ ಹಾಗೂ ಡಾ. ಶ್ರೀಲಕ್ಷ್ಮಿ ಭವಾನಿ ಅವರ ಸಹಾಯದಿಂದ ಈ ರೋಗದ ಕಾರ್ಯವಿಧಾನ ಹಾಗೂ ಲಕ್ಷಣದ ಪರಸ್ಪರ ಸಂಬಂಧವನ್ನು ಪತ್ತೆ ಮಾಡಿತು. ಈ ಹೊಸ ಅನುವಂಶಿಕ ಧಾತುವಿನ ಯಶಸ್ವಿ ಆವಿಷ್ಕಾರದ ನಂತರ ಜರ್ಮನಿಯ ವಿಜ್ಞಾನಿಗಳಾದ ಡಾ. ಕರ್ಸ್ಟಿನ್ ಕುಶೆ ಮತ್ತು ಡಾ. ಲೆಯೊನ್ನಿ ವೊನ್ ಎಲ್ಸನರ್ ಸಹಯೋಗದಲ್ಲಿ ತಂಡವು ಈ ರೋಗದ ಕುರಿತು ಮತ್ತಷ್ಟು ಪ್ರಯೋಗಗಳನ್ನು ನಡೆಸಿತು. ಈ ಸಂಶೋಧನೆಯ ಮೇಲ್ವಿಚಾರಣೆಯಲ್ಲಿ ಬೆಲ್ಜಿಯಂನ ಆಂಟ್ವೆರ್ಪ್ ವಿಶ್ವವಿದ್ಯಾಲಯದ ಡಾ. ಹರ್ಟ್ ಮೊರ್ಟಿಯರ್ ಸಹಕರಿಸಿದ್ದರು ಎಂದು ಮಾಹೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಮಣಿಪಾಲ ತಂಡದ ಈ ಹೊಸ ಅವಿಷ್ಕಾರವನ್ನು ಪ್ರಶಂಸಿಸಿದ ಮಾಹೆಯ ಕುಲಪತಿ ಡಾ.ವಿನೋದ್ ಭಟ್, ಸತತ ಮೂರು ವರ್ಷಗಳ ಈ ಆವಿಷ್ಕಾರ, ಮಾಹೆಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವಲ್ಲಿ ನಮ್ಮ ಬದ್ಧತೆಯನ್ನು ವಿವರಿಸುತ್ತದೆ ಎಂದರು. ಈ ಸಂಶೋಧನೆಯಲ್ಲಿ ನೆರವಾದ ಜರ್ಮನಿ ಮತ್ತು ಬೆಲ್ಜಿಯಂನ ಸಹಯೋಗಿಗಳು ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ಸಂದರ್ಶಕ ಉಪನ್ಯಾಸಕರಾಗಿದ್ದಾರೆ ಎಂದು ಕೆಎಂಸಿಯ ಡೀನ್ ಡಾ. ಪ್ರಜ್ಞಾ ರಾವ್ ತಿಳಿಸಿದ್ದಾರೆ.

ಈಗಾಗಲೇ ಸುಮಾರು 15 ಹೊಸ ರೋಗಗಳನ್ನು ಪತ್ತೆ ಹಚ್ಚಿರುವ ಮಣಿಪಾಲ ಜೆನೆಟಿಕ್ಸ್ ತಂಡವನ್ನು ಕುಲಪತಿ ಡಾ.ವಿನೋದ್ ಭಟ್ ಅಭಿನಂದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News