ಅತೀ ವೇಗದ ವಾಹನ ಚಾಲನೆ: 13 ಬಾರಿ ನಿಮಯಮ ಉಲ್ಲಂಘಿಸಿದ ಫಡ್ನವೀಸ್

Update: 2018-12-14 16:01 GMT

ಮುಂಬೈ, ಡಿ.14: ಅತೀ ವೇಗದ ವಾಹನ ಚಾಲನೆಗೆ ಸಂಚಾರಿ ಪೊಲೀಸರು ದಂಡ ವಿಧಿಸಿದಾಗ, ಈ ಬಾರಿ ಬಿಟ್ಟುಬಿಡಿ, ಇನ್ನು ಮುಂದೆ ತಪ್ಪು ಮಾಡುವುದಿಲ್ಲ ಎಂದು ಸವಾರರು ಗೋಗರೆದರೂ ಸಂಚಾರಿ ಪೊಲೀಸರು ಕಿವಿಗೆ ಹಾಕಿಕೊಳ್ಳುವುದಿಲ್ಲ. ಆದರೆ ರಾಜ್ಯದ ಮುಖ್ಯಮಂತ್ರಿ ನಿಯಮ ಉಲ್ಲಂಘಿಸಿದಾಗ ವಿಧಿಸಿದ ದಂಡವನ್ನು ಸೊಲ್ಲೆತ್ತದೆ ಮನ್ನಾ ಮಾಡುತ್ತಾರೆ ಎಂಬ ವಿಷಯ ಇದೀಗ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ಸದಾ ವೇಗವನ್ನು ಇಷ್ಟಪಡುವ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಸಂಚರಿಸುವ ಕಾರು ಕೂಡಾ ಶರವೇಗದಲ್ಲಿ ಧಾವಿಸುತ್ತದೆ. ಈ ವರ್ಷದ ಜನವರಿಯಿಂದ ಆಗಸ್ಟ್‌ ವರೆಗಿನ ಅವಧಿಯಲ್ಲಿ ಅತೀ ವೇಗದ ಚಾಲನೆಯಿಂದ ಮುಖ್ಯಮಂತ್ರಿ 13 ಬಾರಿ ನಿಯಮ ಉಲ್ಲಂಘಿಸಿರುವುದು ಅಲ್ಲಲ್ಲಿ ಅಳವಡಿಸಲಾಗಿರುವ ಟ್ರಾಫಿಕ್ ಕ್ಯಾಮರಾದಿಂದ ತಿಳಿದು ಬಂದಿದೆ. ಮಹಾರಾಷ್ಟ್ರದಲ್ಲಿ ವೇಗದ ಚಾಲನೆಗೆ 1 ಸಾವಿರ ರೂ. ದಂಡ ವಿಧಿಸಲಾಗುತ್ತದೆ.

ಅಂತೆಯೇ 13 ಬಾರಿ ನಿಯಮ ಉಲ್ಲಂಘಿಸಿದ ಮುಖ್ಯಮಂತ್ರಿಯ ಮೇಲೆ 13 ಸಾವಿರ ರೂ. ದಂಡ ಬಿದ್ದಿದೆ. ಆದರೆ ದಂಡ ವಿಧಿಸಲಾಗಿದ್ದ ಇ-ಚಲನ್‌ಗಳನ್ನು ಸಂಚಾರಿ ಪೊಲೀಸರು ಸದ್ದಿಲ್ಲದೆ ರದ್ದುಗೊಳಿಸಿರುವುದು ಮಾಹಿತಿ ಹಕ್ಕು ಕಾರ್ಯಕರ್ತ ಶಕೀಲ್ ಅಹ್ಮದ್ ಸಲ್ಲಿಸಿದ್ದ ಮಾಹಿತಿ ಹಕ್ಕು ಅರ್ಜಿಯಿಂದ ಬೆಳಕಿಗೆ ಬಂದಿದೆ. ಈ ಬಗ್ಗೆ ಚರ್ಚೆ ಆರಂಭವಾಗುತ್ತಿದ್ದಂತೆಯೇ ಸ್ಪಷ್ಟೀಕರಣ ನೀಡಿರುವ ಸಂಚಾರಿ ಪೊಲೀಸರು, ಭದ್ರತೆಯ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ಕಾರಿಗೆ ವೇಗ ಮಿತಿಯ ನಿಯಮದಿಂದ ವಿನಾಯಿತಿ ಇದೆ ಎಂದು ತಿಳಿಸಿದ್ದಾರೆ.

ಆದರೆ , ಕೇವಲ ಅಗ್ನಿಶಾಮಕ ದಳದ ವಾಹನ, ಆ್ಯಂಬುಲೆನ್ಸ್ ಮತ್ತು ಪೊಲೀಸರ ವಾಹನಗಳಿಗೆ ಮಾತ್ರ ವೇಗಮಿತಿ ಕಾನೂನಿನಿಂದ ವಿನಾಯಿತಿ ಇದೆ ಎಂದು ಶಕೀಲ್ ಅಹ್ಮದ್ ಹೇಳಿದ್ದಾರೆ. ಈ ವಿಷಯದ ಬಗ್ಗೆ ವಿಪಕ್ಷಗಳು, ಸರಕಾರವನ್ನು ಟೀಕಿಸಿವೆ. ಕಾನೂನು ಎಲ್ಲರಿಗೂ ಸಮಾನವಾಗಿದೆ. ವಿವಿಐಪಿ ಸಂಸ್ಕೃತಿ ಕೊನೆಯಾಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಆದರೆ ಇನ್ನೊಂದೆಡೆ ಮುಖ್ಯಮಂತ್ರಿಗಳಿಗೆ ಕಾನೂನಿನಿಂದ ವಿನಾಯಿತಿ ನೀಡಲಾಗುತ್ತಿದೆ. ಮೋದಿ ಅಭಿಪ್ರಾಯವನ್ನು ಪಕ್ಷದ ಮುಖಂಡರೇ ಪಾಲಿಸದಿದ್ದರೆ ಉಳಿದವರು ಏನು ಮಾಡಿಯಾರು ಎಂದು ಎನ್‌ಸಿಪಿ ವಕ್ತಾರ ನವಾಬ್ ಮಲಿಕ್ ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News