×
Ad

ಹಸಿವು, ನೋವುಗಳಿಗೆ ಸ್ಪಂದಿಸುವುದೇ ನಿಜವಾದ ಧಾರ್ಮಿಕತೆ: ಕೇಮಾರುಶ್ರೀ

Update: 2018-12-14 22:10 IST

ಉಡುಪಿ, ಡಿ.14: ಇಂದು ನಾವು ಮಾನವೀಯತೆ ಇಲ್ಲದ ಯಾಂತ್ರೀಕೃತ ಪ್ರಪಂಚದಲ್ಲಿ ಬದುಕುತ್ತಿದ್ದೇವೆ. ಈ ಮಧ್ಯೆ ನಾವು ಇನ್ನೊಬ್ಬರ ಹಸಿವು ಹಾಗೂ ನೋವುಗಳಿಗೆ ಸ್ಪಂದಿಸಬೇಕಾಗಿದೆ. ಇದುವೇ ನಿಜವಾದ ಧಾರ್ಮಿಕತೆ ಎಂದು ಕೇಮಾರು ಸಾಂದೀಪನಿ ಮಠದ ಶ್ರೀಈಶ ವಿಠಲದಾಸ ಸ್ವಾಮೀಜಿ ಹೇಳಿದ್ದಾರೆ.

ಉಡುಪಿ ಜಿಲ್ಲಾ ಜಮಾಅತೆ ಇಸ್ಲಾಮಿ ಹಿಂದ್ ವತಿಯಿಂದ ಉಡುಪಿಯ ಪುರಭವನದಲ್ಲಿ ಶುಕ್ರವಾರ ನಡೆದ ಪ್ರವಾದಿ ಮುಹಮ್ಮದ್(ಸ) ಮಾನವ ಕುಲದ ಶ್ರೇಷ್ಠ ಮಾರ್ಗದರ್ಶಕ ಅಭಿಯಾನದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡುತಿದ್ದರು.

ಕೇವಲ ದೇವಸ್ಥಾನ, ಮಸೀದಿ, ಚರ್ಚ್‌ಗೆ ಹೋದರೆ ವ್ಯಕ್ತಿ ಧಾರ್ಮಿಕ ಆಗು ವುದಿಲ್ಲ. ಬದಲು ಧಾರ್ಮಿಕ ಗ್ರಂಥಗಳನ್ನು ಸರಿಯಾಗಿ ಅಧ್ಯಯನ ಮಾಡಿ ಅದನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಧಾರ್ಮಿಕ ಗ್ರಂಥಗಳಿಗೆ ನಮ್ಮಲ್ಲಿರುವ ಕೆಟ್ಟ ಆಲೋಚನೆಗಳನ್ನು ಸೇರಿಸುವುದರಿಂದ ಇಂದು ಸಮಾಜದಲ್ಲಿ ಸಂಘರ್ಷದ ವಾತಾವರಣ ಸೃಷ್ಠಿಯಾಗುತ್ತಿದೆ ಎಂದರು.

ಮಂಗಳೂರು ಶಾಂತಿ ಪ್ರಕಾಶನದ ವ್ಯವಸ್ಥಾಪಕ ಮಹಮ್ಮದ್ ಕುಂಞಿ ಮಾತನಾಡಿ, ಪ್ರವಾದಿ ಮುಹಮ್ಮದ್(ಸ) ಬೋದಿಸಿದ ಶಿಕ್ಷಣ ಹಾಗೂ ಸಂದೇಶಗಳು ಇಂದಿಗೂ ಪ್ರಸ್ತುತ. ಇವರು ಜನರಿಂದ ಜನರಿಗಾಗಿ ಬದುಕಿ ಅವರನ್ನು ಸಂಸ್ಕರಿಸುವ ಕೆಲಸ ಮಾಡಿದರು. ಮನುಷ್ಯರನ್ನು ಗೌರವಿಸುವ ಮಾನವೀಯ ಚಿಂತನೆಗಳನ್ನು ಪ್ರವಾದಿ ಕಲಿಸಿಕೊಟ್ಟರು ಎಂದು ಹೇಳಿದರು.

ಧರ್ಮದ ರಕ್ಷಣೆಯಲ್ಲ, ಧರ್ಮವನ್ನು ಪ್ರಾಮಾಣಿಕವಾಗಿ ಅನುಸರಿಸುವ ಪಾಠವನ್ನು ಪ್ರವಾದಿ ಜನರಿಗೆ ಹೇಳಿಕೊಟ್ಟರು. ಮನುಷ್ಯರು ಪರಸ್ಪರ ಪ್ರೀತಿಸುವ ವರೆಗೆ ದೇವರ ಸಂಪ್ರೀತಿ ದೊರೆಯಲು ಸಾಧ್ಯವಿಲ್ಲ. ಪ್ರವಾದಿಯವರ ಈ ಚಿಂತನೆಗಳ ಮೂಲಕ ಆಧುನಿಕ ಸಮಾಜವನ್ನು ಸುಧಾರಿಸಲು ಸಾಧ್ಯ ಎಂದು ಅವರು ಅಭಿಪ್ರಾಯ ಪಟ್ಟರು.

ಕವಯತ್ರಿ ಜ್ಯೋತಿ ಗುರುಪ್ರಸಾದ್, ಎಸ್‌ಐಓ ರಾಜ್ಯಾಧ್ಯಕ್ಷ ಕಿದಿಯೂರು ನಿಹಾಲ್, ದಸಂಸ ಮುಖಂಡ ಸುಂದರ್ ಮಾಸ್ತರ್, ಜಿಲ್ಲಾ ಮುಸ್ಲಿಮ್ ಒಕ್ಕೂಟದ ಉಪಾಧ್ಯಕ್ಷ ಹಾಜಿ ಅಬ್ದುಲ್ಲಾ ಪರ್ಕಳ, ಜಮೀಯ್ಯತುಲ್ ಫಲಾಹ್ ಕಾಪು ಘಟಕದ ಅಧ್ಯಕ್ಷ ಶಭೀ ಅಹ್ಮದ್ ಕಾಝಿ, ಸಮಾಜ ಸೇವಕ ಅಬ್ದುಲ್ ಜಲೀಲ್ ಸಾಹೇಬ್ ಮುಖ್ಯ ಅತಿಥಿಗಳಾಗಿದ್ದರು.

ಅಧ್ಯಕ್ಷತೆಯನ್ನು ಸದ್ಭಾವನಾ ಮಂಚ್‌ನ ಪ್ರಧಾನ ಕಾರ್ಯದರ್ಶಿ ಅಕ್ಬರ್ ಅಲಿ ವಹಿಸಿದ್ದರು. ಜಮಾಅತೆ ಇಸ್ಲಾಮೀ ಹಿಂದ್ ವಲಯ ಸಂಚಾಲಕ ಅಬ್ದುಸ್ಸಲಾಂ ಉಪ್ಪಿನಂಗಡಿ, ಜಿಲ್ಲಾ ಸಂಚಾಲಕ ಶಬ್ಬೀರ್ ಮಲ್ಪೆ, ಮಹಿಳಾ ವಿಭಾಗದ ಜಿಲ್ಲಾ ಸಂಚಾಲಕಿ ಜಮೀಲಾ, ಜಿಐಓ ಸಂಘಟನೆಯ ಸುಹಾ, ಎಸ್‌ಐಓ ಜಿಲ್ಲಾಧ್ಯಕ್ಷ ಯಾಸೀನ್ ಕೋಡಿಬೆಂಗ್ರೆ ಉಪಸ್ಥಿತರಿದ್ದರು.

ಇದ್ರೀಸ್ ಹೂಡೆ ಸ್ವಾಗತಿಸಿದರು. ಶುಹೈಬ್ ಮಲ್ಪೆ ವಂದಿಸಿದರು. ಜಿ.ಎಂ. ಶರೀಫ್ ಹೂಡೆ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News