ಬಿಜೆಪಿಯಿಂದ ಕೇರಳ ಬಂದ್: ಜನಜೀವನ ಅಸ್ತವ್ಯಸ್ತ

Update: 2018-12-14 16:55 GMT

ತಿರುವನಂತಪುರ, ಡಿ. 14: ಶಬರಿಮಲೆ ಕುರಿತಂತೆ ರಾಜ್ಯ ಸರಕಾರದ ಕ್ರಮ ಖಂಡಿಸಿ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಹಿನ್ನೆಲೆಯಲ್ಲಿ ಬಿಜೆಪಿ ಶುಕ್ರವಾರ ಕರೆ ನೀಡಿದ್ದ ಬಂದ್‌ನಿಂದಾಗಿ ರಾಜ್ಯದಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿತು.

ಕೇರಳದಾದ್ಯಂತದ ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ ಹಾಗೂ ವಿಮಾನ ನಿಲ್ದಾಣಗಳಲ್ಲಿ ಶುಕ್ರವಾರ ಸಿಲುಕಿಕೊಂಡ ಜನರು ತೊಂದರೆಗೆ ಒಳಗಾದರು.

ಕೇರಳ ವಿಶ್ವವಿದ್ಯಾನಿಲಯ ಹಾಗೂ ರಾಜ್ಯ ಸಾರ್ವಜನಿಕ ಸೇವಾ ಆಯೋಗ ತನ್ನ ಪರೀಕ್ಷೆಗಳನ್ನು ರದ್ದುಪಡಿಸಿತು. ವಿವಿಧ ವೈದ್ಯಕೀಯ ಕೋರ್ಸ್‌ನ ನೀಟ್ ಪರೀಕ್ಷೆಗೆ ಹಾಜರಾಗುವ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ತೀವ್ರತರದ ತೊಂದರೆ ಉಂಟಾಯಿತು.

ಸುಲಭ ಸಾರಿಗೆ ಲಭ್ಯವಿರದೇ ಇರುವುದರಿಂದ ಹಾಗೂ ಮುಷ್ಕರ ಬೆಂಬಲಿಗರ ದಾಳಿಯ ಬೆದರಿಕೆ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗೆ ಎದುರಿಸಲು ಸರಿಯಾದ ಸಮಯಕ್ಕೆ ತಲುಪಲು ಸಾಧ್ಯವಾಗಲಿಲ್ಲ.

ತಿರುವನಂತಪುರದ ಪಾಂಗೋಡೆಯಲ್ಲಿ ಅಂಗಡಿಗಳನ್ನು ಬಲವಂತವಾಗಿ ಮುಚ್ಚಿಸಲು ಯತ್ನಿಸುತ್ತಿದ್ದ ಬಿಜೆಪಿ ಕಾರ್ಯಕರ್ತರನ್ನು ಸ್ಥಳೀಯ ವ್ಯಾಪಾರಿಗಳು ತಡೆದರು. ಅನಗತ್ಯ ಬಂದ್ ವಿರೋಧಿಸಿ ಕಾಂಗ್ರೆಸ್ ಶಾಸಕ ಅನಿಲ್ ಅಕ್ಕರಾ ತ್ರಿಶೂರ್ ರೈಲ್ವೆ ನಿಲ್ದಾಣದಿಂದ 13 ಕಿ.ಮೀ. ನಡೆದುಕೊಂಡು ಮನೆಗೆ ಹಿಂದಿರುಗಿದರು. ಅಕ್ಟೋಬರ್‌ನಂತರ ಬಿಜೆಪಿ ಕನಿಷ್ಠ 7 ಬಂದ್‌ಗಳನ್ನು ನಡೆಸಿದೆ ಎಂದು ಅವರು ಹೇಳಿದ್ದಾರೆ.

ಸರಿಯಾದ ಕಾರಣ ಇಲ್ಲದೆ ನಡೆಸಿದ ಮುಷ್ಕರವನ್ನು ದೇವಸ್ವಂ ಸಚಿವ ಕಡಕಂಪಲ್ಲಿ ಸುರೇಂದ್ರನ್ ಖಂಡಿಸಿದ್ದಾರೆ. ವೇಣುಗೋಪಾಲ್ ನಾಯರ್ ಆತ್ಮಾಹುತಿ ಶಬರಿಮಲೆಗೆ ಯಾವುದೇ ಲಾಭ ಇಲ್ಲ ಎಂದು ಅವರು ಹೇಳಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಪಿ.ಎಸ್. ಶ್ರೀಧರನ್ ಪಿಳ್ಳೆ ಇದನ್ನು ನಿರಾಕರಿಸಿದ್ದಾರೆ ಹಾಗೂ ಸಾವಿನ ಬಗ್ಗೆ ನ್ಯಾಯಾಂಗ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.

ಖಾಸಗಿ ಕಾರು ಹಾಗೂ ಮೋಟಾರ್ ಸೈಕಲ್‌ಗಳು ಎಂದಿನಂತೆ ಸಂಚಾರ ನಡೆಸಿದವು. ಟ್ಯಾಕ್ಸಿ, ಆಟೊ, ಸರಕಾರಿ ಬಸ್‌ಗಳು ರಸ್ತೆಗೆ ಇಳಿಯರಿಲ್ಲ. ಕೆಎಸ್‌ಆರ್‌ಟಿಸಿ ತನ್ನ ವೇಳಪಟ್ಟಿ ಬದಲಾಯಿಸಿತು. ಅಯ್ಯಪ್ಪ ಭಕ್ತರಿಗೆ ಶಬರಿಮಲೆ ಸೇವೆಗೆ ವಾಹನಗಳ ಸಂಖ್ಯೆ ತುಂಬಾ ಕಡಿಮೆ ಇತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News