ಆಕ್ಸಿಟೋಸಿನ್ ಉತ್ಪಾದನೆ, ಮಾರಾಟ ಮೇಲಿನ ನಿರ್ಬಂಧ ಹಿಂದೆ ತೆಗೆದ ದಿಲ್ಲಿ ಉಚ್ಚ ನ್ಯಾಯಾಲಯ

Update: 2018-12-14 16:57 GMT

ಹೊಸದಿಲ್ಲಿ, ಡಿ. 14: ಖಾಸಗಿ ಕಂಪೆನಿಗಳು ಆಕ್ಸಿಟೋಸಿನ್ ಔಷಧ ಉತ್ಪಾದನೆ ಹಾಗೂ ಮಾರಾಟ ನಿಷೇಧಿಸುವ ಕೇಂದ್ರ ಸರಕಾರದ ನಿರ್ಧಾರವನ್ನು ದಿಲ್ಲಿ ಉಚ್ಚ ನ್ಯಾಯಾಲಯ ಶುಕ್ರವಾರ ತಳ್ಳಿ ಹಾಕಿದೆ.

ನಿರ್ಧಾರ ನಿರಂಕುಶ ಹಾಗೂ ಕಾರಣ ರಹಿತ ಎಂದು ಹೇಳಿರುವ ನ್ಯಾಯಮೂರ್ತಿ ಎಸ್. ರವೀಂದ್ರ ಭಟ್ ಹಾಗೂ ಎ.ಕೆ. ಚಾವ್ಲಾ ಅವರನ್ನು ಒಳಗೊಂಡ ಪೀಠ, ನಿಷೇಧಕ್ಕೆ ಯಾವುದೇ ವೈಜ್ಞಾನಿಕ ಕಾರಣ ಇಲ್ಲ ಎಂದಿದೆ.

 ಆಕ್ಸಿಟೋಸಿನ್ ಔಷಧವನ್ನು ಗೃಹ ಬಳಕೆಗೆ ನಿರ್ಬಂಧಿಸಿ ಹಾಗೂ ಆಮದು ನಿಷೇಧಿಸಿ ಎಪ್ರಿಲ್‌ನಲ್ಲಿ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವಾಲಯ ಎಪ್ರಿಲ್‌ನಲ್ಲಿ ಆದೇಶ ಜಾರಿ ಮಾಡಿತ್ತು. ಈ ಔಷಧ ಉತ್ಪಾದಿಸಲು ಕರ್ನಾಟಕದ ಒಂದು ಕಂಪೆನಿಗೆ ಮಾತ್ರ ಅವಕಾಶ ಇತ್ತು.

 ಆಗಸ್ಟ್ 31ರಂದು ದಿಲ್ಲಿ ಉಚ್ಚ ನ್ಯಾಯಾಲಯ ನಿರ್ಬಂಧವನ್ನು ತಿಂಗಳ ವರೆಗೆ ಎತ್ತಿ ಹಿಡಿದಿತ್ತು ಹಾಗೂ ಅನಂತರ ಡಿಸೆಂಬರ್ 15ರ ವರೆಗೆ ನಿಷೇಧವನ್ನು ವಿಸ್ತರಿಸಿತ್ತು. ಡೈರಿ ಕೈಗಾರಿಕೆಯಲ್ಲಿ ಈ ಔಷಧವನ್ನು ದುರ್ಬಳಕೆ ಮಾಡಲಾಗುತ್ತಿದೆ ಎಂದು 2016ರಲ್ಲಿ ಹಿಮಾಚಲ ಪ್ರದೇಶ ಹೈಕೋರ್ಟ್ ಪ್ರತಿಪಾದಿಸಿದ ಬಳಿಕ ಕೇಂದ್ರ ಸರಕಾರ ಈ ನಿಷೇಧ ಹೇರಿತ್ತು. ಮಾನವನ ದೇಹದಿಂದಲೇ ಸಹಜವಾಗಿ ಉತ್ಪಾದಿಸಲಾಗುವ ಹಾರ್ಮೋನ್ ಆಕ್ಸಿಟಟೋಸಿನ್ ಮೇಲಿನ ನಿಷೇಧ ಹಲವು ಸ್ತ್ರೀರೋಗತಜ್ಞರಿಗೆ ಅಸಮಾಧಾನ ಉಂಟು ಮಾಡಿತ್ತು. ಯಾಕೆಂದರೆ, ಹೆರಿಗೆಯ ಮೂರನೇ ಹಂತದಲ್ಲಿ ಹೆಚ್ಚುವರಿ ರಕ್ತಸ್ರಾವವನ್ನು ತಡೆಗಟ್ಟಲು ಈ ಔಷಧ ಬಳಸಲಾಗುತ್ತಿತ್ತು.

ಜೀವ ರಕ್ಷಕ ಈ ಔಷಧವನ್ನು ಜಾಗತಿಕ ಆರೋಗ್ಯ ಸಂಘಟನೆ ಅತ್ಯಗತ್ಯದ ಔಷಧ ಎಂದು ಗುರುತಿಸಿತ್ತು. ಭಾರತದ ರಾಷ್ಟ್ರೀಯ ಅತ್ಯಗತ್ಯದ ಔಷಧಗಳ ಪಟ್ಟಿಯಲ್ಲಿ ಕೂಡ ಇದು ಸ್ಥಾನ ಪಡೆದುಕೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News