ತುಳು ಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರಿಸಿ: ಸಂಸತ್ ನಲ್ಲಿ ಧ್ವನಿಯೆತ್ತಿದ ಕಾಸರಗೋಡು ಸಂಸದ ಕರುಣಾಕರನ್

Update: 2018-12-14 17:15 GMT

ಕಾಸರಗೋಡು, ಡಿ.14: ತುಳು ಭಾಷೆಯನ್ನು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸಲು ಒತ್ತಾಯಿಸಿ ಕಾಸರಗೋಡು ಸಂಸದ ಪಿ.ಕರುಣಾಕರನ್ ಲೋಕಸಭೆಯಲ್ಲಿ ಧ್ವನಿಯೆತ್ತಿದ್ದಾರೆ.

ಕಾಸರಗೋಡು ಜಿಲ್ಲೆ ಮತ್ತು ಕರ್ನಾಟಕದ ಬಹುತೇಕ ಪ್ರದೇಶಗಳಲ್ಲಿ ಲಕ್ಷಾಂತರ ಮಂದಿ ತುಳುವರಿದ್ದಾರೆ. 2006ರ ಜನಗಣತಿಯಂತೆ 18 ಲಕ್ಷ ಹಾಗೂ 2011ರ ಗಣತಿಯಂತೆ 19 ಲಕ್ಷ ತುಳು ಭಾಷಿಕರಿದ್ದಾರೆ ಎಂದು ಅಂಕಿ ಅಂಶ ತಿಳಿಸುತ್ತಿದೆ. ನೆರೆ ರಾಜ್ಯಗಳು ಸೇರಿದಂತೆ ಸುಮಾರು 75 ಲಕ್ಷ ತುಳು ಭಾಷೆ ಮಾತನಾಡುವವರು ಇದ್ದಾರೆ. ದಶಕಗಳ ಹಿಂದೆ ಸಾಂಸ್ಕೃತಿಕ, ಸಾಮಾಜಿಕ, ಸಾಹಿತ್ಯ ವಲಯದಲ್ಲಿ ಸಂಪನ್ನವಾಗಿದ್ದ ತುಳು ಭಾಷೆ ಇದೀಗ ಇತರ ಭಾಷೆಗಳ ಪ್ರಭಾವಕ್ಕೆ ಸಿಲುಕಿದ್ದು, ಅದರ ಅಸ್ತಿತ್ವಕ್ಕೆ ಧಕ್ಕೆ ಉಂಟಾಗುವ ಭೀತಿ ಎದುರಾಗಿದೆ ಎಂದವರು ಕಳವಳ ವ್ಯಕ್ತಪಡಿಸಿದರು.

ತುಳು ಭಾಷೆಯ ಉಳಿವಿಗೆ ಹಾಗೂ ಪರಿಪಾಲನೆಗೆ ಕೇರಳ-ಕರ್ನಾಟಕ ಸರಕಾರ ತುಳು ಅಕಾಡಮಿಗಳನ್ನು ಸ್ಥಾಪಿಸಿದೆ. ಆದರೆ ತುಳುಭಾಷೆಗೆ ಸಂವಿಧಾನಬದ್ಧವಾದ ವಿಶೇಷ ಪ್ರಾಧಾನ್ಯತೆ ಲಭಿಸಿಲ್ಲ. ಈ ಹಿನ್ನೆಲೆಯಲ್ಲಿ ಶೀಘ್ರವೇ ತುಳು ಭಾಷೆಯನ್ನು ಎಂಟನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸುವಂತೆ ಕರುಣಾಕರನ್ ಕೇಂದ್ರ ಸರಕಾರವನ್ನು ಒತ್ತಾಯಿಸಿದ್ದಾರೆ.

ಈ ಹಿಂದೆಯೂ ಈ ಬಗ್ಗೆ ಕೇಂದ್ರ ಸರಕಾರದ ಗಮನ ಸೆಳೆದರೂ ಈ ಬಗ್ಗೆ ಗಮನಹರಿಸಿಲ್ಲ. ಇದೀಗ ತುಳು ಭಾಷೆಯ ಸಂರಕ್ಷಣೆ ನಿಟ್ಟಿನಲ್ಲಿ ಕೂಡಲೇ ಎಂಟನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸುವಂತೆ ಸಂಸದರು ಸಂಸತ್ ‌ನಲ್ಲಿ ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News