ವಿವಾದ ಜನರ ನ್ಯಾಯಾಲಯದ ಮುಂದಿದೆ: ಕಾಂಗ್ರೆಸ್ ಪ್ರತಿಕ್ರಿಯೆ

Update: 2018-12-14 17:15 GMT

ಹೊಸದಿಲ್ಲಿ, ಡಿ.14: ಸುಪ್ರೀಂಕೋರ್ಟ್‌ನ ಆದೇಶದ ಬಗ್ಗೆ ಬಿಜೆಪಿ ಮತ್ತು ಪ್ರಧಾನಿ ಮೋದಿ ಸಂಭ್ರಮಿಸಲು ಯಾವುದೇ ಕಾರಣಗಳಿಲ್ಲ. ಒಪ್ಪಂದದ ಯಾವುದೇ ಪ್ರಮುಖ ಅಂಶಗಳ ಬಗ್ಗೆ ಸುಪ್ರೀಂ ಪ್ರತಿಕ್ರಿಯಿಸಿಲ್ಲ. ಒಪ್ಪಂದದಲ್ಲಿ ತಾನು ಮಧ್ಯಪ್ರವೇಶಿಸುವುದಿಲ್ಲ ಎಂದಷ್ಟೇ ನ್ಯಾಯಾಲಯ ತಿಳಿಸಿದೆ.

ಆದ್ದರಿಂದ ಒಪ್ಪಂದದ ಬಗ್ಗೆ ಜಂಟಿ ಸಂಸದೀಯ ಸಮಿತಿ ತನಿಖೆಗೆ ನಮ್ಮ ಆಗ್ರಹ ಮುಂದುವರಿಯಲಿದೆ . ಜಂಟಿ ಸಂಸದೀಯ ಸಮಿತಿಗೆ ಎಲ್ಲಾ ದಾಖಲೆಗಳನ್ನೂ ತರಿಸಿಕೊಳ್ಳುವ ಅಧಿಕಾರವಿದೆ ಎಂದು ಕಾಂಗ್ರೆಸ್ ಮುಖಂಡ ಆನಂದ್ ಶರ್ಮ ಹೇಳಿದ್ದಾರೆ.

ರಫೇಲ್ ಒಪ್ಪಂದದ ವಿವಾದ ಈಗ ಜನತೆಯ ನ್ಯಾಯಾಲಯದ ಮುಂದಿದೆ. ಸಂಸತ್ತಿನಲ್ಲಿ ಈ ವಿಷಯವನ್ನು ಪ್ರಸ್ತಾಪಿಸುವುದನ್ನು ಕಾಂಗ್ರೆಸ್ ಮುಂದುವರಿಸುತ್ತದೆ ಎಂದು ಕಾಂಗ್ರೆಸ್ ಮುಖಂಡ ಜ್ಯೋತಿರಾದಿತ್ಯ ಸಿಂದಿಯಾ ಹೇಳಿದ್ದಾರೆ.

ರಫೇಲ್ ಒಪ್ಪಂದದಂತಹ ಮಹತ್ವದ ರಕ್ಷಣಾ ಒಪ್ಪಂದದ ಬಗ್ಗೆ ನಿರ್ಧರಿಸಲು ಸುಪ್ರೀಂಕೋರ್ಟ್ ಸೂಕ್ತ ವೇದಿಕೆಯಲ್ಲ ಎಂದು ತಿಂಗಳ ಹಿಂದೆಯೇ ಕಾಂಗ್ರೆಸ್ ಪಕ್ಷ ಹೇಳಿತ್ತು. ಈ ಹೇಳಿಕೆಯನ್ನು ನ್ಯಾಯಾಲಯದ ತೀರ್ಪು ಊರ್ಜಿತಗೊಳಿಸಿದೆ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೆವಾಲಾ ಹೇಳಿದ್ದಾರೆ. ಈ ಬಗ್ಗೆ ನಿರ್ಧರಿಸಲು ಸೂಕ್ತ ವೇದಿಕೆಯೆಂದರೆ ಜಂಟಿ ಸಂಸದೀಯ ಸಮಿತಿ. ಆದ್ದರಿಂದ ಈ ಒಪ್ಪಂದದಲ್ಲಿ ಭ್ರಷ್ಟಾಚಾರ ನಡೆದಿಲ್ಲ ಎಂಬ ವಿಶ್ವಾಸವಿದ್ದರೆ ಜಂಟಿ ಸಂಸದೀಯ ಸಮಿತಿ ರಚಿಸಬೇಕೆಂದು ಪ್ರಧಾನಿ ಮೋದಿಗೆ ಕಾಂಗ್ರೆಸ್ ಸವಾಲೆಸೆಯುತ್ತದೆ ಎಂದವರು ಹೇಳಿದರು.

ಇದು ಸಂಪೂರ್ಣ ತಪ್ಪು ತೀರ್ಪು ಎಂದು ಅರ್ಜಿದಾರರಲ್ಲಿ ಒಬ್ಬರಾದ ಪ್ರಶಾಂತ್ ಭೂಷಣ್ ಪ್ರತಿಕ್ರಿಯಿಸಿದ್ದಾರೆ. ಈ ತೀರ್ಪಿನ ಬಗ್ಗೆ ಮೇಲ್ಮನವಿ ಸಲ್ಲಿಸುವ ಬಗ್ಗೆ ಇನ್ನೂ ನಿರ್ಧರಿಸಿಲ್ಲ ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News