ಹಿಂದೂ ರಾಷ್ಟ್ರ ಹೇಳಿಕೆ: ಮೇಘಾಲಯ ನ್ಯಾಯಾಧೀಶರ ವಜಾಕ್ಕೆ ಸಿಪಿಎಂ ಆಗ್ರಹ

Update: 2018-12-14 17:18 GMT

ಹೊಸದಿಲ್ಲಿ, ಡಿ. 14: ಇತ್ತೀಚೆಗೆ ತೀರ್ಪಿನ ರೂಪದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ ಮೇಘಾಲಯ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಎಸ್.ಸಿ. ಸೇನ್ ಅವರನ್ನು ನ್ಯಾಯಾಂಗ ಕರ್ತವ್ಯದಿಂದ ಕೂಡಲೇ ವಜಾಗೊಳಿಸುವಂತೆ ಸಿಪಿಎಂ ಆಗ್ರಹಿಸಿದೆ.

 ಅವರನ್ನು ಕರ್ತವ್ಯದಿಂದ ವಜಾಗೊಳಿಸಲು ವಾಗ್ದಂಡನೆ ಮಂಡಿಸಲು ಸಂಸತ್ತಿನಲ್ಲಿ ಇತರ ಪಕ್ಷಗಳೊಂದಿಗೆ ಸಮಾಲೋಚನೆ ನಡೆಸಲಾಗುವುದು ಎಂದು ಅದು ಹೇಳಿದೆ. ಮೇಘಾಲಯ ಸರಕಾರ ವಲಸೆ ಪ್ರಮಾಣ ಪತ್ರ ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಅಮೋನ್ ರಾಣಾ ಸಲ್ಲಿಸಿದ ಮನವಿಯನ್ನು ಡಿಸೆಂಬರ್ 12ರಂದು ವಿಲೇವಾರಿ ನಡೆಸಿದ ನ್ಯಾಯಮೂರ್ತಿ ಸೇನ್, ವಿಭಜನೆಯ ಸಂದರ್ಭ ಭಾರತವನ್ನು ಹಿಂದೂ ರಾಷ್ಟ್ರ ಎಂದು ಘೋಷಿಸಬೇಕಾಗಿತ್ತು ಎಂದಿದ್ದರು. “ಭಾರತವನ್ನು ಇಸ್ಲಾಮಿಕ್ ರಾಷ್ಟ್ರವಾಗಿ ಮಾಡಬೇಡಿ ಎಂದು ನಾನು ಸ್ಪಷ್ಟವಾಗಿ ಹೇಳುತ್ತೇನೆ. ಒಂದು ವೇಳೆ ಹಾಗೆ ಮಾಡಿದರೆ, ಭಾರತ ಹಾಗೂ ಜಗತ್ತಿನ ವಿನಾಶ ಸಂಭವಿಸಲಿದೆ. ಇದರ ಪ್ರಾಮುಖ್ಯತೆ ನರೇಂದ್ರ ಮೋದಿ, ಕೇಂದ್ರ ಸರಕಾರ ಅರ್ಥ ಮಾಡಿಕೊಳ್ಳುತ್ತದೆ ಎಂಬ ಬಗ್ಗೆ ನನಗೆ ಭರವಸೆ ಇದೆ. ನಮ್ಮ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರಾಷ್ಟ್ರೀಯ ಹಿತಾಸಕ್ತಿಗೆ ಬೆಂಬಲ ನೀಡಲಿದ್ದಾರೆ” ಎಂದು ಅವರು ಹೇಳಿದ್ದರು.

ನ್ಯಾಯಮೂರ್ತಿ ಸೇನ್ ಅವರ ಈ ಹೇಳಿಕೆಯನ್ನು ಹೊಸದಿಲ್ಲಿಯ ಅಧಿವೇಶದನಲ್ಲಿ ಸಿಪಿಎಂ ಪಾಲಿಟ್ ಬ್ಯೂರೊ ಡಿಸೆಂಬರ್ 14ರಂದು ನೀಡಿದ ಹೇಳಿಕೆಯಲ್ಲಿ ಖಂಡಿಸಿದೆ ಹಾಗೂ ಇದು ನಮ್ಮ ಸಂವಿಧಾನ ಮೂಲಭೂತ ವಿನ್ಯಾಸದ ವಿರುದ್ಧವಾಗಿದೆ ಎಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News