ಬೇಬಿ ಪೌಡರ್‌ನಲ್ಲಿ ಅಸ್ಬೆಸ್ಟೊಸ್ ಇತ್ತೆಂದು ಜಾನ್ಸನ್ & ಜಾನ್ಸನ್ ಕಂಪೆನಿಗೆ ದಶಕಗಳ ಹಿಂದೆಯೇ ತಿಳಿದಿತ್ತು: ವರದಿ

Update: 2018-12-15 11:40 GMT

ಲಾಸ್ ಏಂಜಲಿಸ್, ಡಿ.15: ಅಮೆರಿಕದ ಖ್ಯಾತ ಜಾನ್ಸನ್ ಆ್ಯಂಡ್ ಜಾನ್ಸನ್ ಕಂಪೆನಿಗೆ ತನ್ನ ಬೇಬಿ ಪೌಡರ್ ಉತ್ಪನ್ನದಲ್ಲಿ ಹಾನಿಕಾರಕ ಅಸ್ಬೆಸ್ಟೋಸ್ ಅಂಶವಿತ್ತೆಂಬುದು ದಶಕಗಳಿಂದ ತಿಳಿದಿತ್ತು ಎಂದು ಸುದ್ದಿ ಸಂಸ್ಥೆ ರಾಯ್ಟರ್ಸ್ ವರದಿ ಮಾಡಿರುವುದು ಸಾಕಷ್ಟು ಆಘಾತ ಸೃಷ್ಟಿಸಿದೆ. ಈ ಬೆಳವಣಿಗೆಯ ಬೆನ್ನಲ್ಲೇ ಕಂಪೆನಿಯ ಷೇರು ಮೌಲ್ಯ ಶುಕ್ರವಾರ ಶೇ.10ರಷ್ಟು ಕುಸಿದಿದೆ.

ಜಾನ್ಸನ್ ಆ್ಯಂಡ್ ಜಾನ್ಸನ್ ಟಾಲ್ಕ್ ಉತ್ಪನ್ನಗಳು ಕ್ಯಾನ್ಸರ್ ಉಂಟು ಮಾಡಿದೆ ಎಂದು ದೂರಿ ಜಗತ್ತಿನ ವಿವಿಧೆಡೆಯ ಸಾವಿರಾರು ಮಹಿಳೆಯರು ಕಂಪೆನಿಯ ವಿರುದ್ಧ ಈಗಾಗಲೇ ಕೋರ್ಟ್ ಮೆಟ್ಟಿಲೇರಿರುವ ಹಿನ್ನೆಲೆಯುಲ್ಲಿ ರಾಯ್ಟರ್ಸ್ ಸುದ್ದಿ ಸಂಸ್ಥೆಯ ಈ ವರದಿ ಮಹತ್ವ ಪಡೆದಿದೆ.

ಕನಿಷ್ಠ 1971ರಿಂದ ಕಂಪೆನಿಗೆ ತನ್ನ ಪೌಡರ್ ಉತ್ಪನ್ನಗಳಲ್ಲಿ ಅಸ್ಬೆಸ್ಟೋಸ್ ಇತ್ತೆಂದು ತಿಳಿದಿತ್ತು ಎಂದು ಹಲವಾರು ದಾಖಲೆಗಳನ್ನು ಪರೀಶೀಲಿಸಿ ರಾಯ್ಟರ್ಸ್ ವರದಿ ಮಾಡಿದೆ.

ಆದರೆ ಕಂಪೆನಿಯ ವಕೀಲರು ಮಾತ್ರ ತಮ್ಮ ಸಂಸ್ಥೆಯ ಬೇಬಿ ಪೌಡರ್ ಸುರಕ್ಷಿತವಾಗಿದೆ ಹಾಗೂ ಅಸ್ಬೆಸ್ಟೋಸ್ ಮುಕ್ತವಾಗಿದೆ ಎಂದು ವಾದಿಸುತ್ತಿದ್ದಾರೆ. ‘‘ರಾಯ್ಟರ್ಸ್ ವರದಿ ಏಕಪಕ್ಷೀಯವಾಗಿದೆ, ಸುಳ್ಳು ಹಾಗೂ ಪ್ರಚೋದನಾತ್ಮಕವಾಗಿದೆ’’ ಎಂದು ಅವರು ಆರೋಪಿಸಿದ್ದಾರೆ.

ಜಾನ್ಸನ್ ಆ್ಯಂಡ್ ಜಾನ್ಸನ್ ಕಂಪೆನಿ ವಿವಿಧ ಕೋರ್ಟ್ ವಿಚಾರಣೆಗಳ ವೇಳೆ ಸಲ್ಲಿಸಿದ್ದ ದಾಖಲೆಗಳನ್ನು ರಾಯ್ಟರ್ಸ್ ಪರಿಶೀಲಿಸಿತ್ತು. ಆದರೆ ಈ ಹಲವು ದಾಖಲೆಗಳನ್ನು ಕೋರ್ಟ್ ಆದೇಶಗಳ ಮುಖಾಂತರ ಜನರಿಗೆ ಲಭ್ಯವಾಗದಂತೆ ಮಾಡಲಾಗಿತ್ತೆಂದು ತಿಳಿದು ಬಂದಿದೆ.

ಈ ದಾಖಲೆಗಳಿಂದ ತಿಳಿದು ಬಂದಂತೆ ಕನಿಷ್ಠ 1971ರಿಂದ 2000ರ ಆರಂಭದ ವರ್ಷಗಳ ತನಕ ಕಂಪೆನಿ ನಡೆಸಿದ ಆಂತರಿಕ ಪರೀಕ್ಷೆಗಳಲ್ಲಿ ಕಚ್ಛಾ ಟಾಲ್ಕ್ ಮತ್ತು ಅದರಿಂದ ತಯಾರಿಸಲ್ಪಟ್ಟ ಪೌಡರ್‌ನಲ್ಲಿ ಸಣ್ಣ ಪ್ರಮಾಣದ ಅಸ್ಬೆಸ್ಟೋಸ್ ಇದೆ ಎಂದು ಪತ್ತೆ ಹಚ್ಚಲಾಗಿತ್ತು.

ಹಲವಾರು ಪರೀಕ್ಷೆಗಳಲ್ಲಿ ಅಸ್ಬೆಸ್ಟೋಸ್ ಪತ್ತೆಯಾಗದೇ ಇದ್ದರೂ, ಈ ಹಾನಿಕಾರಕ ಪತ್ತೆಯಾದ ಪರೀಕ್ಷೆಗಳ ಬಗ್ಗೆ ಕಂಪೆನಿ ಸೂಕ್ತ ಪ್ರಾಧಿಕಾರಗಳಿಗೆ ತಿಳಿಸಿರಲಿಲ್ಲ ಎಂದು ರಾಯ್ಟರ್ಸ್ ವರದಿ ಹೇಳಿದೆ

ಆದರೆ ಕೆಲವೊಂದು ಪ್ರಕರಣಗಳ ಕೋರ್ಟ್ ವಿಚಾರಣೆ ವೇಲೆ ಕಂಪೆನಿಯು ಅಸ್ಬೆಸ್ಟೊಸ್ ಇದೆಯೆಂದು ಹೇಳಲಾದ ಟಾಲ್ಕ್ ಇಂಡಸ್ಟ್ರಿಯಲ್ ಟಾಲ್ಕ್ ಉತ್ಪನ್ನವಾಗಿತ್ತೆಂದು ವಾದಿಸಿತ್ತು.

ಜುಲೈಯಲ್ಲಿ ಕಂಪೆನಿಗೆ ಸೈಂಟ್ ಲೂಯಿಸ್ ನ್ಯಾಯಾಲಯವೊಂದು ಕಂಪೆನಿಯ ಬೇಬಿ ಪೌಡರ್ ಹಾಗೂ ಶವರ್ ಟು ಶವರ್ ಟಾಲ್ಕ್ ಉಪಯೋಗದಿಂದ ತಮಗೆ ಅಂಡಾಶಯದ ಕ್ಯಾನ್ಸರ್ ಉಂಟಾಗಿದೆ ಎಂದು ಆರೋಪಿಸಿದ್ದ 22 ಮಹಿಳೆಯರಿಗೆ 4.7 ಬಿಲಿಯನ್ ಡಾಲರ್ ಪರಿಹಾರ ನೀಡುವಂತೆ ಆದೇಶಿಸಿತ್ತು. ಇದು ಕಂಪೆನಿ ನೀಡಬೇಕಾಗಿ ಬಂದಿರುವ ಅತ್ಯಂತ ದೊಡ್ಡ ಪರಿಹಾರ ಮೊತ್ತವಾಗಿದ್ದು ಕಂಪೆನಿ ಈ ತೀರ್ಪಿನ ವಿರುದ್ಧ ಅಪೀಲು ಸಲ್ಲಿಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News