​ಕುಂದಾಪುರ ತಾಪಂ ಇಒ ವರ್ಗಾವಣೆ: ಜಾರಿಯಾಗದ ಆದೇಶ

Update: 2018-12-15 13:59 GMT

ಕುಂದಾಪುರ, ಡಿ.15: ಕುಂದಾಪುರ ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ಕಿರಣ್ ಫಡ್ನೇಕರ್ ಅವರನ್ನು ಸರಕಾರ ವರ್ಗಾವಣೆಗೊಳಿಸಿ ಆದೇಶ ನೀಡಿ 15 ದಿನ ಕಳೆದರೂ ಆದೇಶ ಇನ್ನೂ ಜಾರಿಯಾಗಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ.

ಕಿರಣ್ ಫಡ್ನೇಕರ್ ಗ್ರಾಪಂ ಪಿಡಿಓ ಮತ್ತು ಕಾರ್ಯದರ್ಶಿಗಳನ್ನು ಮೂಲ ಸ್ಥಾನದಿಂದ ಪದೇ ಪದೇ ಇತರ ಪಂಚಾಯತ್‌ಗಳಿಗೆ ನಿಯೋಜನೆ ಮಾಡುತ್ತಿರುವು ದರಿಂದ ಸಾರ್ವಜನಿಕರು ತೊಂದರೆಗೆ ಒಳಗಾಗುತ್ತಿದ್ದಾರೆ. ಈ ಕುರಿತು ಜಿಲ್ಲಾಧಿಕಾರಿ, ಜಿಪಂ ಮುಖ್ಯಕಾರ್ಯನಿರ್ವಹಣಾಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಜೆಡಿಎಸ್ ಉಡುಪಿ ಜಿಲ್ಲಾ ಅಲ್ಪಸಂಖ್ಯಾತ ಘಟಕವು ಮುಖ್ಯಮಂತ್ರಿಗೆ ದೂರು ಸಲ್ಲಿಸಿತ್ತು.

ನ.30ರಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಕಾರ್ಯದರ್ಶಿ ತಕ್ಷಣದಿಂದ ಜಾರಿಗೆ ಬರುವಂತೆ ಕುಂದಾಪುರ ತಾಪಂ ಕಾರ್ಯ ನಿರ್ವಾಹಣಾಧಿಕಾರಿ ಕಿರಣ್ ಫಡ್ನೇಕರ್ ಅವರನ್ನು ಉಡುಪಿ ಜಿಪಂ ಸಹಾಯಕ ಯೋಜನಾಧಿಕಾರಿಯಾಗಿ ಮತ್ತು ಜಿಪಂ ಸಹಾಯಕ ಯೋಜನಾಧಿಕಾರಿ ಯಾಗಿ ರುವ ಜೇಮ್ಸ್ ಡಿಸಿಲ್ವ ಅವರನ್ನು ಕುಂದಾಪುರ ತಾಪಂ ಕಾರ್ಯನಿರ್ವಾಹಣಾ ಧಿಕಾರಿ ಹುದ್ದೆಗೆ ವರ್ಗಾವಣೆಗೊಳಿಸಿ ಆದೇಶ ನೀಡಿದ್ದರು.

ಆದರೆ ಈ ಆದೇಶ ಜಾರಿಯಾಗಿ 15 ದಿನಗಳಾದರೂ ಕಿರಣ್ ಫಡ್ನೇಕರ್ ತಾಪಂ ಕಾರ್ಯನಿರ್ವಹಣಾಧಿಕಾರಿಯಾಗಿಯೇ ಮುಂದುವರಿದಿದ್ದು, ಅವರನ್ನು ವರ್ಗಾವಣೆ ಮಾಡಲು ಮೀನಮೇಷ ಎಣಿಸಲಾಗುತ್ತಿದೆ ಎಂಬ ದೂರುಗಳು ಕೇಳಿಬಂದಿವೆ. ‘ಇದು ಆಂತರಿಕ ವಿಚಾರವಾಗಿದ್ದು, ಈ ಬಗ್ಗೆ ಪರಿಶೀಲನೆಗಳು ನಡೆಯುತ್ತಿವೆ’ ಎಂದು ಉಡುಪಿ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿಂಧು ಬಿ. ರೂಪೇಶ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News