ಅನಧಿಕೃತ ಕಲ್ಲುಕೋರೆಗಳ ವಿರುದ್ಧ ಕ್ರಮ: ಉಡುಪಿ ಕೆಡಿಪಿ ಸಭೆ ಸೂಚನೆ

Update: 2018-12-15 15:07 GMT

ಉಡುಪಿ, ಡಿ.15: ಜಿಲ್ಲೆಯಲ್ಲಿರುವ ಎಲ್ಲಾ ಅನಧಿಕೃತ ಕಲ್ಲುಕೋರೆಗಳ ವಿರುದ್ಧ ಕೂಡಲೇ ಕ್ರಮ ಜರುಗಿಸಿ, ಅವುಗಳ ಕಾರ್ಯಾಚರಣೆಯನ್ನು ನಿಲ್ಲಿಸು ವಂತೆ ಶನಿವಾರ ಮಣಿಪಾಲದಲ್ಲಿ ನಡೆದ ಜಿಲ್ಲಾ ಕೆಡಿಪಿ ಸಭೆ ಸೂಚಿಸಿದೆ.

ಉಡುಪಿ ಜಿಪಂ ಅಧ್ಯಕ್ಷ ದಿನಕರ ಬಾಬು ಅಧ್ಯಕ್ಷತೆಯಲ್ಲಿ ಶನಿವಾರ ಜಿಪಂ ಸಭಾಂಗಣದಲ್ಲಿ ನಡೆದ ಸಬೆಯಲ್ಲಿ ಈ ಬಗ್ಗೆ ಸೂಚನೆ ನೀಡಲಾಯಿತು. ವಿಷಯ ಪ್ರಸ್ತಾಪಿಸಿದ ಜಿಪಂ ಸ್ಥಾಯೀ ಸಮಿತಿ ಅಧ್ಯಕ್ಷ ಬಾಬು ಶೆಟ್ಟಿ, ಕುಂದಾಪುರ ತಾಲೂಕಿನಲ್ಲಿ ಹಲವು ಕಲ್ಲುಕೋರೆಗಳು ಅನಧಿಕೃತವಾಗಿ ಕಾರ್ಯಾಚರಿಸುತ್ತಿವೆ. ಇದರಿಂದ ಸರಕಾರಕ್ಕೆ ಬರಬೇಕಾದ ಕೋಟ್ಯಂತರ ರೂ. ರಾಜಧನ ತಪ್ಪಿ ಹೋಗುತ್ತಿದೆ. ಕೆಲವು ಕೋರೆಗಳು ಅರಣ್ಯಭೂಮಿಯಲ್ಲಿ ಇವೆ. ಯಾವುದೇ ಮುನ್ನೆಚ್ಚರಿಕಾ ಕ್ರಮ ವಹಿಸದೆ ಈ ಕಲ್ಲುಕೋರೆಗಳು ಇದ್ದು, ಕೂಡಲೇ ಈ ಬಗ್ಗೆ ಕ್ರಮ ಜರುಗಿಸಬೇಕು ಎಂದು ಅವರು ಒತ್ತಾಯಿಸಿದರು.

ಗಂಗಾ ಕಲ್ಯಾಣ ಯೋಜನೆಯಲ್ಲಿ ಬೋರ್‌ವೆಲ್ ಕೊರೆದರೂ ಅವುಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ವಿಳಂಬವಾಗುತ್ತಿದೆ. ಇದರಿಂದ ಫಲಾನುಭವಿ ಗಳಿಗೆ ತೊಂದರೆಯಾಗುತಿದ್ದು, ಸಂಬಂಧಪಟ್ಟ ನಿಗಮಗಳು ಮತ್ತು ಮೆಸ್ಕಾಂ ಇಲಾಖೆ ಜಂಟಿಯಾಗಿ ಈ ಬಗ್ಗೆ ಕ್ರಮ ಜರುಗಿಸಲು ಜಿಪಂ ಅಧ್ಯಕ್ಷ ದಿನಕರ ಬಾಬು ಸೂಚಿಸಿದರು.

ಸಣ್ಣ ನೀರಾವರಿ ಇಲಾಖೆಯಿಂದ ನಿರ್ಮಿಸಲಾದ ಕಿಂಡಿ ಅಣೆಕಟ್ಟುಗಳಿಗೆ ನಿರ್ವಹಣೆ ಇಲ್ಲದೇ ಅವುಗಳು ವ್ಯರ್ಥವಾಗುತ್ತಿವೆ. ಇದನ್ನು ತಪ್ಪಿಸಲು ಕಿಂಡಿ ಅಣೆಕಟ್ಟು ವ್ಯಾಪ್ತಿಯಲ್ಲಿ ಬಳಕೆದಾರರ ಸಮಿತಿಗಳನ್ನು ರಚಿಸಿ ಅವುಗಳಿಗೆ ನಿರ್ವಹಣೆಯನ್ನು ಹಸ್ತಾಂತರಿಸಬೇಕು ಎಂದು ಅಧ್ಯಕ್ಷರು ಹೇಳಿದರು.

ಸರಕಾರಿ ಶಾಲೆಗಳಲ್ಲಿ ಶಿಕ್ಷಕರು ದೀರ್ಘಾವಧಿ ರಜೆ ತೆರಳಿದ ಸಂದರ್ಭದಲ್ಲಿ ಅಲ್ಲಿಗೆ ಪ್ರಭಾರದಲ್ಲಿ ಇಡಲಾದ ಬೇರೆ ಶಾಲೆಗಳ ಶಿಕ್ಷಕರು ಹಾಜರಾಗದೆ ಪಠ್ಯ ಪ್ರವಚನಗಳಿಗೆ ತೊಂದರೆಯಾಗುತ್ತಿದೆ. ಇದನ್ನು ತಪ್ಪಿಸಿ ಶಿಕ್ಷಣ ಇಲಾಖೆ ಸೂಕ್ತ ನಿಯೋಜನೆ ವ್ಯವಸ್ಥೆ ಕಲ್ಪಿಸಬೇಕು ಎಂದು ಜಿಪಂ ಸ್ಥಾಯೀ ಸಮಿತಿ ಅ್ಯಕ್ಷ ಉದಯ ಕೋಟ್ಯಾನ್ ತಿಳಿಸಿದರು.

ಜಿಲ್ಲೆಯಲ್ಲಿರುವ ಎಲ್ಲಾ ಅತಿಥಿ ಶಿಕ್ಷಕರಿಗೆ ಬಾಕಿ ಇರುವ ವೇತನವನ್ನು ಈಗಾಗಲೇ ಪಾವತಿಸಲಾಗಿದೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ಸಭೆಗೆ ತಿಳಿಸಿದರು. ಪಶ್ಚಿಮ ವಾಹಿನಿ ಯೋಜನೆಯಲ್ಲಿ ಉಡುಪಿ ಜಿಲ್ಲೆಯಲ್ಲಿ 14 ಕಾಮಗಾರಿಗಳಿಗೆ ಟೆಂಡರ್ ಕರೆಯಲಾಗಿದೆ ಎಂದು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಸಭೆಗೆ ತಿಳಿಸಿದರು.

ಹಿಂದುಳಿದ ವರ್ಗಗಳ, ಅಲ್ಪಸಂಖ್ಯಾತರ ಮತ್ತು ಸಮಾಜಕಲ್ಯಾಣ ಇಲಾಖೆ ವ್ಯಾಪ್ತಿಯ ಹಾಸ್ಟೆಲ್‌ಗಳಲ್ಲಿ ಆಗಿಂದಾಗ್ಗೆ ವಿದ್ಯಾರ್ಥಿಗಳ ಸಭೆ ನಡೆಸಿ ಅಲ್ಲಿನ ಕುಂದುಕೊರತೆಗಳನ್ನು ನಿವಾರಿಸಲು ಕ್ರಮ ಕೈಗೊಳ್ಳಬೇಕು ಎಂದು ಅಧ್ಯಕ್ಷ ದಿನಕರ ಬಾಬು ಸೂಚಿಸಿದರು. ಜಿಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ಸಿಂಧು ಬಿ.ರೂಪೇಶ್ ಮಾತನಾಡಿ, ವಿಶೇಷ ಘಟಕ ಹಾಗೂ ಗಿರಿಜನ ಉಪಯೋಜನೆಯಡಿ ಎಲ್ಲಾ ಕಾರ್ಯಕ್ರಮಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಬೇಕು. ಅಲ್ಲದೇ ಈ ಬಗ್ಗೆ ಸಮಾಜ ಕಲ್ಯಾಣ ಇಲಾಖೆಗೆ ಪ್ರತೀ ತಿಂಗಳು ವರದಿ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಗ್ರಾಪಂಗಳ ಕಂಪ್ಯೂಟರೀಕರಣ ಮತ್ತು ಇ-ಸೇವೆ ವ್ಯವಸ್ಥೆಯನ್ನು ಉತ್ತಮ ಪಡಿಸಲು ಪ್ರತೀ ಗ್ರಾಪಂಗೆ ರೂ. 25 ಸಾವಿರ ಅನುದಾನ ಬಂದಿದ್ದು, ಈ ಬಗ್ಗೆ ಕೂಡಲೇ ಗ್ರಾಪಂಗಳು ಕಾರ್ಯಪ್ರವೃತ್ತವಾಗಬೇಕು. ಗ್ರಾಪಂ ಸದಸ್ಯರ ಗೌರವಧನವನ್ನು ನೇರವಾಗಿ ಸದಸ್ಯರ ಬ್ಯಾಂಕ್ ಖಾತೆಗೆ ಜಮಾ ಮಾಡಲು ಖಜಾನೆ-2 ವ್ಯವಸ್ಥೆಯಡಿ ಕ್ರಮ ಕೈಗೊಳ್ಳಲು ಜಿಪಂ ಮುಖ್ಯ ಯೋಜನಾಧಿಕಾರಿ ನಾಗೇಶ್ ರಾಯ್ಕರ್ ತಿಳಿಸಿದರು.

ಸಭೆಯಲ್ಲಿ ಜಿಪಂ ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ, ಸ್ಥಾಯೀ ಸಮಿತಿ ಅಧ್ಯಕ್ಷ ಶಶಿಕಾಂತ್ ಪಡುಬಿದ್ರೆ, ವಿವಿಧ ಇಲಾಖೆಗಳ ಅದಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News