ಉಡುಪಿಗೆ ರಾಷ್ಟ್ರಪತಿ: ಡಿ.16ರಂದು ಪೂರ್ವಭಾವಿ ಸಭೆ

Update: 2018-12-15 15:30 GMT

ಉಡುಪಿ, ಡಿ.15: ಪೇಜಾವರ ಮಠದ ಶ್ರೀವಿಶ್ವೇಶತೀರ್ಥರು ಸನ್ಯಾಸಾಶ್ರಮ ಸ್ವೀಕರಿಸಿ 80 ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ಅವರ ಶಿಷ್ಯರು ಹಾಗೂ ಅಭಿಮಾನಿಗಳು ಕೇಂದ್ರ ಸಚಿವೆ ಸಾಧ್ವಿ ಉಮಾಭಾರತಿ ನೇತೃತ್ವದಲ್ಲಿ ಡಿ.27ರಂದು ಉಡುಪಿಯಲ್ಲಿ ಹಮ್ಮಿಕೊಂಡಿರುವ ಅಭಿನಂದನಾ ಸಮಾರಂಭದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಪಾಲ್ಗೊಳ್ಳಲಿದ್ದಾರೆ.

ಪರ್ಯಾಯ ಪಲಿಮಾರು ಮಠದ ಶ್ರೀವಿದ್ಯಾಧೀಶ ತೀರ್ಥರು ಹಾಗೂ ಅಷ್ಟಮಠಾಧೀಶರ ಉಪಸ್ಥಿತಿಯಲ್ಲಿ ನಡೆಯುವ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯುವ ಈ ಅಭಿನಂದನೆ ಹಾಗೂ ಗುರುವಂದನಾ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್, ಕರ್ನಾಟಕದ ರಾಜ್ಯಪಾಲ ವಾಜುಬಾಯಿ ವಾಲಾ ಹಾಗೂ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭಾಗವಹಿಸಲಿದ್ದಾರೆ.

ಈ ಸಂಬಂಧ ಪೂರ್ವಭಾವಿ ಸಮಾಲೋಚನಾ ಸಭೆಯೊಂದು ಡಿ.16ರಂದು ಸಂಜೆ 4:30ಕ್ಕೆ ಉಡುಪಿ ಪೇಜಾವರ ಮಠದ ಶ್ರೀರಾಮವಿಠಲ ಸಭಾಭವನದಲ್ಲಿ ನಡೆಯಲಿದೆ.

ಜಿಲ್ಲಾಡಳಿತವೂ ರಾಷ್ಟ್ರಪತಿ ಕೋವಿಂದ ಅವರ ಮೊದಲ ಉಡುಪಿ ಭೇಟಿಗೆ ಭರ್ಜರಿ ಸಿದ್ಧತೆಯನ್ನು ನಡೆಸುತ್ತಿದೆ. ಈ ಸಂಬಂಧ ಈಗಾಗಲೇ ಅಧಿಕಾರಿಗಳ ಸಭೆಯೊಂದನ್ನು ಕರೆದು ಭದ್ರತೆ, ಉಟೋಪಚಾರ, ವಸತಿ ವ್ಯವಸ್ಥೆ ಹಾಗೂ ಸಾರಿಗೆ ವ್ಯವಸ್ಥೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸೂಕ್ತ ಮಾರ್ಗದರ್ಶನಗಳನ್ನು ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News