ಸಂಬಳ ವಿಳಂಭ, ಕೆಲಸದಲ್ಲಿ ತಾರತಮ್ಯಕ್ಕೆ ವಿರೋಧ: ಡಿ'ಗ್ರೂಪ್ ನೌಕರರಿಂದ ಪ್ರತಿಭಟನೆ

Update: 2018-12-15 15:36 GMT

ಪುತ್ತೂರು, ಡಿ. 15: ನಿಗದಿತ ದಿನದೊಳಗೆ ಸರಿಯಾಗಿ ಸಂಬಳ ನೀಡುತ್ತಿಲ್ಲ. ಕೆಲಸದ ವಿಚಾರದಲ್ಲಿ ತಾರತಮ್ಯ ಧೋರಣೆ ಅನುಸರಿಸಲಾಗುತ್ತಿದೆ. ತಿಂಗಳಲ್ಲಿ 4 ರಜೆಗಿಂತ ಜಾಸ್ತಿ ಮಾಡಿದಲ್ಲಿ ಸಂಬಳ ಕಡಿತ ಮಾಡಲಾಗುತ್ತಿದೆ ಎಂದು ಆರೋಪಿಸಿ ಪುತ್ತೂರಿನ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಡಿ ಗ್ರೂಪ್ ದಿನಗೂಲಿ ನೌಕರರು ಶನಿವಾರ ಕೆಲಸಕ್ಕೆ ಹಾಜರಾಗದೆ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ದ.ಕ.ಜಿಲ್ಲಾ ದಲಿತ್ ಸೇವಾ ಸಮಿತಿಯ ಪುತ್ತೂರು ತಾಲೂಕು ಸಮಿತಿಯ ಅಧ್ಯಕ್ಷ ರಾಜು ಹೊಸ್ಮಠ ಅವರು ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಡಿ.ಗ್ರೂಪ್ ದಿನಗೂಲಿ ನೌಕರರಿಗೆ ಸರಿಯಾಗಿ ಸಂಬಳ ನೀಡುತ್ತಿಲ್ಲ. ತಿಂಗಳಲ್ಲಿ 4 ರಜೆ ಇದ್ದು, ಒಂದು ರಜೆ ಜಾಸ್ತಿ ಯಾದರೂ ಸಂಬಳ ಕಡಿತಗೊಳಿಸಲಾಗುತ್ತಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡದ ಪಿಯುಸಿ ಮತ್ತು ಪದವಿ ಶಿಕ್ಷಣ ಪಡೆದವರು ಕಳೆದ 5 ವರ್ಷಗಳಿಂದ ಕೆಲಸ ಮಾಡುತ್ತಿದ್ದರೂ ಸತ್ಕಾರ (ರಿಷೆಪ್ಸಕ್ಷನ್) ಹುದ್ದೆಗೆ ಅವರನ್ನು ನೇಮಿಸಿಕೊಳ್ಳದೆ ಮೇಲ್ಜಾತಿಯವರನ್ನು ನೇಮಕ ಮಾಡುವ ಮೂಲಕ ತಾರತಮ್ಯ ಧೋರಣೆ ಅನುಸರಿಸಲಾಗುತ್ತಿದೆ' ಎಂದು ಆರೋಪಿಸಿದರು. 

ಹಾಸನದ ಶ್ರೀಕಾಂತ್ ಮತ್ತು ಉಡುಪಿಯ ಮಹಾಲಸ ಸಂಸ್ಥೆಯ ರಮೇಶ್ ಪೈ ಅವರು ಪುತ್ತೂರು ಸರ್ಕಾರಿ ಆಸ್ಪತ್ರೆಯ ಡಿಗ್ರೂಪ್ ನೌಕರರ ಗುತ್ತಿಗೆ ವಹಿಸಿಕೊಂಡಿದ್ದು, ನೌಕರರು ತಮ್ಮ ಬೇಡಿಕೆಗಳನ್ನು ಮುಂದಿಟ್ಟು ಪ್ರತಿಭಟನೆಗಳಿದರೆ ಕೆಲಸದಿಂದ ತೆಗೆದು ಹಾಕುವುದಾಗಿ ಗುತ್ತಿಗೆದಾರರು ಬೆದರಿಕೆಯೊಡ್ಡುತ್ತಿದ್ದಾರೆ. ಅವರಿಗೆ ತಾಖತ್ತಿದ್ದರೆ ಕೆಲಸದಿಂದ ತೆಗದು ಹಾಕಿ ನೋಡಲಿ ಎಂದು ಸವಾಲು ಹಾಕಿದರು. 

ಡಿ ಗ್ರೂಪ್ ನೌಕರರಿಗೆ ಸಂಬಳ ಜಾಸ್ತಿ ಮಾಡಬೇಕು. ಇಎಸ್‍ಐ,ಪಿಎಫ್ ನೀಡಬೇಕು,ನೌಕರಿಯನ್ನು ಖಾಯಂಗೊಳಿಸಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಹಾಗೂ ಸರ್ಕಾರಕ್ಕೆ ಮನವಿ ಮಾಡಿದರೂ ಏನೂ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದ ಅವರು ಡಿ.ಗ್ರೂಪ್ ನೌಕರರಿಗೆ ನ್ಯಾಯ ಸಿಗದಿದ್ದರೆ ಸಾವಿರ ಮಂದಿಯನ್ನು ಸೇರಿಸಿ ಆಸ್ಪತ್ರೆಯ ಎದುರು ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಡಿ ಗ್ರೂಪ್ ನೌಕರರ ಸಂಘದ ಅಧ್ಯಕ್ಷ ಸುಧಾಕರ್ ಕರ್ಕುಂಜ,ಡಿ.ಗ್ರೂಪ್ ನೌಕರರಾದ ಅಕ್ಕಮ್ಮ,ಲಕ್ಷ್ಮೀ,ಹೇಮ,ತಿಮ್ಮಪ್ಪ,ಹುಕ್ರಪ್ಪ,ಬೇಬಿ, ಸುಶೀಲ,ಆಶಾಲತಾ,ಸುಶೀಲಾ ಆನಂದ್,ಸಂಜೀವ ಅವರು ಕರ್ತವ್ಯಕ್ಕೆ ಹಾಜರಾಗದೆ ಪ್ರತಿಭಟನೆ ನಡೆಸಿದರು. ದಲಿತ್ ಸೇವಾ ಸಮಿತಿಯ ಪುತ್ತೂರು ತಾಲೂಕು ಸಮಿತಿಯ ಉಪಾಧ್ಯಕ್ಷ ಮನೋಹರ್ ಕೋಡಿಜಾಲು ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News