ತಪ್ಪು ಮಾಹಿತಿ ನೀಡಿ ಸರಕಾರ ಸುಪ್ರೀಂ ಕೋರ್ಟ್ ದಾರಿ ತಪ್ಪಿಸಿದೆ: ಖರ್ಗೆ

Update: 2018-12-15 16:06 GMT

ಹೊಸದಿಲ್ಲಿ, ಡಿ. 15: ರಫೇಲ್ ಒಪ್ಪಂದ ಕುರಿತು ಸುಪ್ರೀಂ ಕೋರ್ಟ್ ತೀರ್ಪು ನೀಡಿದ ಒಂದು ದಿನದ ಬಳಿಕ ಸಾರ್ವಜನಿಕ ಲೆಕ್ಕಪತ್ರ ಸಮಿತಿ (ಪಿಎಸಿ) ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಶನಿವಾರ, ಅಟಾರ್ನಿ ಜನರಲ್ ಹಾಗೂ ಸಿಎಜಿ ಅವರನ್ನು ಭೇಟಿಯಾಗಿ ಸಂಸತ್ತಿನಲ್ಲಿ ಸಾರ್ವಜನಿಕ ಲೆಕ್ಕಪತ್ರ ವರದಿಯನ್ನು ಯಾವಾಗ ಮಂಡಿಸಲಾಯಿತು ಎಂದು ಪ್ರಶ್ನಿಸುವಂತೆ ಸಮಿತಿಯ ಎಲ್ಲ ಸದಸ್ಯರಲ್ಲಿ ಮನವಿ ಮಾಡಲಿದ್ದೇನೆ ಎಂದಿದ್ದಾರೆ.

ರಫೇಲ್ ಒಪ್ಪಂದದ ಸಿಎಜಿ ವರದಿ ಬಗ್ಗೆ ತಪ್ಪು ಮಾಹಿತಿ ನೀಡುವ ಮೂಲಕ ಸರಕಾರ ಸುಪ್ರೀಂ ಕೋರ್ಟ್ ಅನ್ನು ದಾರಿ ತಪ್ಪಿಸಿದೆ. ಆದುದರಿಂದ ಸರಕಾರ ಕ್ಷಮೆ ಕೋರಬೇಕು ಎಂದು ಖರ್ಗೆ ಆಗ್ರಹಿಸಿದರು. ನಾವು ಸುಪ್ರೀಂ ಕೋರ್ಟ್‌ಗೆ ಗೌರವ ನೀಡುತ್ತೇವೆ. ಆದರೆ, ಅದು ತನಿಖಾ ಸಂಸ್ಥೆ ಅಲ್ಲ. ರಫೇಲ್ ಒಪ್ಪಂದದಲ್ಲಿನ ಭ್ರಷ್ಟಾಚಾರದ ಕುರಿತು ಜಂಟಿ ಸಂಸದೀಯ ಸಮಿತಿ ಮಾತ್ರ ತನಿಖೆ ನಡೆಸಲು ಸಾಧ್ಯ ಎಂದು ಅವರು ಹೇಳಿದರು. ಅಟಾರ್ನಿ ಜನರಲ್ ಹಾಗೂ ಮಹಾಲೇಖಪಾಲರನ್ನು ಭೇಟಿಯಾಗಿ ಸಂಸತ್ತಿನಲ್ಲಿ ರಫೇಲ್ ಒಪ್ಪಂದದ ಸಿಎಜಿ ವರದಿಯನ್ನು ಯಾವಾಗ ಸಲ್ಲಿಸಲಾಯಿತು ಎಂದು ಪ್ರಶ್ನಿಸುವಂತೆ ತಾನು ಸಾರ್ವಜನಿಕ ಲೆಕ್ಕಪತ್ರ ಸಮಿತಿ ಸದಸ್ಯರಲ್ಲಿ ವಿನಂತಿಸಲಿದ್ದೇನೆ ಎಂದು ಖರ್ಗೆ ಹೇಳಿದರು. ರಫೇಲ್ ಬೆಲೆ ಕುರಿತು ಸಿಎಜಿ ವರದಿ ಸಂಸತ್ತಿನಲ್ಲಿ ಮಂಡಿಸಿರುವ ಬಗ್ಗೆ ಹಾಗೂ ಪಿಎಸಿಯಲ್ಲಿ ಚರ್ಚೆ ನಡೆದಿರುವುದನ್ನು ಸುಪ್ರೀಂ ಕೋರ್ಟ್ ತೀರ್ಪು ಪ್ರಸ್ತಾಪಿಸಿರುವುದನ್ನು ಖರ್ಗೆ ಉಲ್ಲೇಖಿಸಿದರು. ಪಿಎಸಿ ವರದಿ ಬಗ್ಗೆ ಸಿಎಜಿ ಯಾವಾಗ ಚರ್ಚೆ ನಡೆಸಿತು ? ಅದು ಇಲ್ಲಿಯವರೆಗೆ ಸಲ್ಲಿಸಿಲ್ಲ. ಸುಪ್ರೀಂ ಕೋರ್ಟ್‌ಗೆ ತಪ್ಪು ಮಾಹಿತಿ ನೀಡಲಾಗಿದೆ. ಇದು ಆಘಾತಕಾರಿ ವಿಚಾರ. ಸಿಎಜಿ ವರದಿ ಬಗ್ಗೆ ತಪ್ಪು ಮಾಹಿತಿ ಸಲ್ಲಿಸುವ ಮೂಲಕ ಸರಕಾರ ಸುಪ್ರೀಂ ಕೋರ್ಟ್ ಅನ್ನು ದಾರಿ ತಪ್ಪಿಸಿದೆ. ಆದುದರಿಂದ ಅದು ಕ್ಷಮೆ ಕೋರಬೇಕು ಎಂದು ಖರ್ಗೆ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News