ಡಿ. 23: ಕ್ರಿಸ್ಮಸ್ ಪ್ರಯುಕ್ತ ಉಡುಪಿ ಧರ್ಮಪ್ರಾಂತ ಮಟ್ಟದ ಕ್ರೀಡಾಕೂಟ

Update: 2018-12-15 16:47 GMT

ಉಡುಪಿ, ಡಿ.15: ಭಾರತೀಯ ಕೆಥೋಲಿಕ್ ಯುವ ಸಂಚಾಲನದ ಕೊಳಲಗಿರಿ ಘಟಕವು ಕರಾವಳಿ ಮಿಲನ್ ಉಡುಪಿ ಸಂಘಟನೆಯ ಸಹಯೋಗ ದೊಂದಿಗೆ ಉಡುಪಿ ಜಿಲ್ಲೆಯ ಆಹ್ವಾನಿತ ಕ್ರೈಸ್ತ ಚರ್ಚುಗಳ ಸದಸ್ಯರಿಗೆ ಒಂದು ದಿನದ ಕ್ರೀಡಾಕೂಟ ‘ಸ್ಪೋರ್ಟ್ಸ್ ಫಿಯೆಸ್ಟಾ-2018’ನ್ನು ಡಿ. 23ರಂದು ಆಯೋಜಿಸಿದೆ.

ಜಿಲ್ಲೆಯ 40ಕ್ಕೂ ಅಧಿಕ ಆಹ್ವಾನಿತ ಚರ್ಚ್ ತಂಡಗಳ 800ಕ್ಕೂ ಅಧಿಕ ಕ್ರೀಡಾಪಟುಗಳು ಈ ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ. ಪುರುಷ ಮತ್ತು ಮಹಿಳಾ ವಿಭಾಗಗಳಲ್ಲಿ ಪ್ರತ್ಯೇಕವಾಗಿ ಒಟ್ಟು 12 ಕ್ರೀಡಾಸ್ಪರ್ಧೆಗಳು ನಡೆಯಲಿವೆ ಎಂದು ಕೊಳಲಗಿರಿ ಸೇಕ್ರೆಡ್ ಹಾರ್ಟ್ ಚರ್ಚ್‌ನ ಧರ್ಮಗುರು ಗಳಾದ ವಂ. ಡಾ.ಪ್ರಕಾಶ್ ಅನಿಲ್ ಕಾಸ್ತಲಿನೊ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕ್ರಿಸ್ಮಸ್ ಸಂಭ್ರಮದ ವೇಳೆ ಜಿಲ್ಲೆಯ ಎಲ್ಲಾ ಕ್ರೈಸ್ತ ಬಾಂಧವರನ್ನು ಒಂದೇ ಸೂರಿನಡಿ ಒಂದುಗೂಡಿಸಿ ಕ್ರೀಡಾಹಬ್ಬದ ಮೂಲಕ ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವುದು ಇದರ ಉದ್ದೇಶವಾಗಿದೆ. ಮುಂದಿನ ವರ್ಷದಿಂದ ಜಿಲ್ಲೆಯ ಎಲ್ಲಾ ಸಮುದಾಯಗಳನ್ನು ಸೇರಿಸಿ ಈ ಕ್ರೀಡಾಕೂಟ ನಡೆಸುವ ಚಿಂತನೆಯಿದೆ ಎಂದವರು ಹೇಳಿದರು.

ಕ್ರೀಡಾಕೂಟದಲ್ಲಿ ಪುರುಷ ಮತ್ತು ಮಹಿಳೆಯರಿಗೆ 100ಮೀ., 200ಮೀ, 400ಮೀ, 800ಮೀ, 100ಮೀ. ರಿಲೇ ಹಾಗೂ 100ಮೀ. ಮಿಕ್ಸೆಡ್ ರಿಲೇ ನಡೆಯಲಿದೆ. ಅಲ್ಲದೇ ಶಾಟ್‌ಪುಟ್, ಡಿಸ್ಕಸ್, ಹೈಜಂಪ್, ಲಾಂಗ್‌ಜಂಪ್ ಸ್ಪರ್ಧೆಗಳೊಂದಿಗೆ ಹಗ್ಗ-ಜಗ್ಗಾಟ ಸ್ಪರ್ಧೆ ನಡೆಯಲಿದೆ. ಪ್ರತಿ ಸ್ಪರ್ಧೆಯಲ್ಲಿ ಮೊದಲ ಮೂರು ಸ್ಥಾನ ಪಡೆದವರಿಗೆ ಪದಕ, ನಗದು ಹಾಗೂ ಪ್ರಮಾಣ ಪತ್ರ ನೀಡಲಾಗುತ್ತದೆ. ಪುರುಷ ಮತ್ತು ಮಹಿಳಾ ಚಾಂಪಿಯನ್‌ಗಳಿಗೂ ವಿಶೇಷ ಪ್ರಶಸ್ತಿಗಳಿವೆ.

ಒಟ್ಟಾರೆಯಾಗಿ ಅತ್ಯಧಿಕ ಅಂಕಗಳನ್ನು ಸಂಗ್ರಹಿಸಿದ ಮೂರು ಚರ್ಚ್ ತಂಡಗಳಿಗೆ ಸಮಗ್ರ ತಂಡ ಪ್ರಶಸ್ತಿಯೊಂದಿಗೆ 15,000ರೂ, 10,000ರೂ. ಹಾಗೂ 5,000ರೂ.ನಗದು ಬಹುಮಾನಗಳಿವೆ ಎಂದು ಡಾ.ಕಾಸ್ತಲಿನೊ ವಿವರಿಸಿದರು.

ಕ್ರೀಡಾಕೂಟದ ಉದ್ಘಾಟನಾ ಸಮಾರಂಭ ಡಿ.23ರ ಬೆಳಗ್ಗೆ 8 ಗಂಟೆಗೆ ನಡೆಯಲಿದೆ. ಸಮಾರೋಪ ಹಾಗೂ ಬಹುಮಾನ ವಿತರಣಾ ಸಮಾರಂಭ ಸಂಜೆ 5 ಗಂಟೆಗೆ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News