ಡಿ. 19: ಎಸ್‌ಎಂಎಸ್ ಆಂಗ್ಲ ಮಾಧ್ಯಮ ಶಾಲೆ ಬೆಳ್ಳಿಹಬ್ಬ ಸಮಾರೋಪ

Update: 2018-12-15 16:51 GMT

ಉಡುಪಿ, ಡಿ.15: ಸೈಂಟ್ ಮೇರೀಸ್ ಕೆಥಡ್ರಲ್‌ನ ಶತಮಾನೋತ್ಸವದ ಸವಿನೆನಪಿಗಾಗಿ ಒಎಸ್‌ಸಿ ಎಜುಕೇಶನಲ್ ಟ್ರಸ್ಟ್ 1993ರಲ್ಲಿ ಪ್ರಾರಂಭಿಸಿದ ಎಸ್.ಎಂ.ಎಸ್.ಆಂಗ್ಲ ಮಾಧ್ಯಮ ಶಾಲೆ (ಸಿಬಿಎಸ್‌ಸಿ) 25 ವರ್ಷಗಳನ್ನು ಪೂರ್ಣಗೊಳಿಸಿದ್ದು, ಇದೇ ಡಿ.19ರ ಬುಧವಾರ ತನ್ನ ಬೆಳ್ಳಿಹಬ್ಬ ಸಂಭ್ರಮವನ್ನು ಆಚರಿಸಲಿದೆ ಎಂದು ಶಾಲೆಯ ಪ್ರಾಂಶುಪಾಲೆ ಅಭಿಲಾಷಾ ಎಸ್. ಹೇಳಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮೀಣ ಭಾಗದ ಎಲ್ಲಾ ವರ್ಗದ ಜನರಿಗೂ ಗುಣಮಟ್ಟದ ಇಂಗ್ಲೀಷ್ ಮಾಧ್ಯಮದ ಶಿಕ್ಷಣ ಸಿಗುವಂತಾಗಬೇಕೆಂದು ಟ್ರಸ್ಟ್‌ನ ಆಗಿನ ಸಂಚಾಲಕರಾದ ಅ.ವಂ.ಡಾ.ಎನ್.ಜೆ.ಥಾಮಸ್ ರಂಬಾನ್ ಅವರು ಈ ಶಾಲೆಯನ್ನು ಪ್ರಾರಂಭಿಸಿದ್ದು,ತನ್ನ ಮೂಲ ಉದ್ದೇಶವನ್ನು ಪೂರೈಸಿದ ತೃಪ್ತಿಯನ್ನು ಹೊಂದಿದೆ ಎಂದರು.

2002ರಲ್ಲಿ ಇದು ಸಿಬಿಎಸ್‌ಇ ಕೇಂದ್ರೀಯ ಪಠ್ಯಕ್ರಮಕ್ಕೆ ಸಂಯೋಜನೆಗೊಂಡಿದ್ದು, 2004ರಲ್ಲಿ 10ನೇ ತರಗತಿ ಮಕ್ಕಳು ಮೊದಲ ಬಾರಿಗೆ ಮಂಡಳಿ ಪರೀಕ್ಷೆ ಬರೆದು ಶೇ.100 ಫಲಿತಾಂಶ ಪಡೆದಿದ್ದಾರೆ. ಅಂದಿನಿಂದ ಇಂದಿನವರೆಗೆ ಶಾಲೆ ಉತ್ತಮ ಫಲಿತಾಂಶವನ್ನು ದಾಖಲಿಸುತ್ತಾ ಬಂದಿದೆ. 2013ರಲ್ಲಿ 11ನೇ ಹಾಗ 2014ರಲ್ಲಿ 12ನೇ ತರಗತಿಯ ಶಿಕ್ಷಣವನ್ನು ಕೇಂದ್ರೀಯ ಮಂಡಳಿಯ ಪರೀಕ್ಷೆಯಡಿ ತೆರೆಯಲಾಗಿದೆ ಎಂದು ಅಭಿಲಾಷಾ ನುಡಿದರು.

20ಮಕ್ಕಳೊಂದಿಗೆ ಪ್ರಾರಂಭಗೊಂಡ ಶಾಲೆಯಲ್ಲಿ ಇಂದು 2486 ವಿದ್ಯಾರ್ಥಿಗಳು ಕಲಿಯುತಿದ್ದಾರೆ.104 ಮಂದಿ ಶಿಕ್ಷಕರು, 93ಶಿಕ್ಷಕೇತರ ಸಿಬ್ಬಂದಿ ಗಳಿದ್ದಾರೆ. 16,000 ಪುಸ್ತಕಗಳ ಸಂಗ್ರಹದ ಮೂರು ಗ್ರಂಥಾಲಯಗಳಿವೆ. ಶಾಲೆಯು ಸುಸಜ್ಜಿತವಾದ ಪ್ರಯೋಗಾಲಯಗಳನ್ನು ಹೊಂದಿದೆ. ಸಾಹಿತ್ಯ, ಕಲೆ, ವಿಜ್ಞಾನ, ಕ್ರೀಡೆ ಎಲ್ಲದರಲ್ಲೂ ಶಾಲೆಯ ವಿದ್ಯಾರ್ಥಿಗಳು ಮುಂಚೂಣಿಯಲ್ಲಿದ್ದಾರೆ ಎಂದವರು ತಿಳಿಸಿದರು.

ಶಾಲೆಯ ಬೆಳ್ಳಿಹಬ್ಬ ಮಹೋತ್ಸವದ ಉದ್ಘಾಟನೆ ಕಳೆದ ವರ್ಷ ಡಿ.11ರಂದು ನಡೆದಿದ್ದು, ಇದೀಗ ಡಿ.19ರಂದು ಇದರ ಸಮಾರೋಪ ಸಂಜೆ 5:00ಕ್ಕೆ ನಡೆಯಲಿದೆ. ಕಾರ್ಯಕ್ರಮದಲ್ಲಿ ಮೂಡಬಿದರೆಯ ಡಾ.ಮೋಹನ ಆಳ್ವ, ಯೆನಪೋಯ ವಿವಿಯ ಪ್ರೊ ವಿಸಿ ಡಾ.ಸಿ.ವಿ.ರಘುವೀರ್, ಶಾಸಕ ರಘುಪತಿ ಭಟ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಶಾಲೆಯ ಸಂಚಾಲಕ ವಂ.ಎಲ್ಡೊ ಎಂ.ಪಾಲ್, ಪ್ರಧಾನ ಕಾರ್ಯದರ್ಶಿ ಅನಿಲ್ ರಾಡ್ರಿಗಸ್, ಶಾಲಾ ಕಾರ್ಯದರ್ಶಿ ಅಲನ ರೋಹನ್ ವಾಜ್, ಶಾಲೆಯ ಉಪಪ್ರಾಂಶುಪಾಲೆ ಪ್ರಮೀಳಾ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News