ಉತ್ತಮ ಸಂಸ್ಕಾರದೊಂದಿಗೆ ಮೌಲ್ಯಯುತ ಶಿಕ್ಷಣ ಅಗತ್ಯ: ವೈ. ಮುಹಮ್ಮದ್ ಬ್ಯಾರಿ

Update: 2018-12-15 16:55 GMT

ಆತೂರು, ಡಿ.15: ಉತ್ತಮ ಸಂಸ್ಕಾರದೊಂದಿಗೆ ಮೌಲ್ಯಗಳನ್ನೊಳಗೊಂಡ ಶಿಕ್ಷಣ ಇಂದಿನ ಮಕ್ಕಳಿಗೆ ದೊರೆಯಬೇಕಾಗಿದೆ ಎಂದು ದಕ್ಷಿಣ ಕನ್ನಡ ಎಂ.ಇ.ಐ.ಎಫ್ ಅಧ್ಯಕ್ಷ ವೈ.ಮುಹಮ್ಮದ್ ಬ್ಯಾರಿ ತಿಳಿಸಿದ್ದಾರೆ.

ಅವರು ರಾಮಕುಂಜ ಗ್ರಾಮದ ಆತೂರಿನ ಆಯಿಶಾ ಶಿಕ್ಷಣ ಸಂಸ್ಥೆಗಳ ವಾರ್ಷಿಕ ದಿನಾಚರಣೆ ಅಂಗವಾಗಿ ಹಮ್ಮಿಕೊಂಡ ಸಭಾ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಮಕ್ಕಳನ್ನು ಉತ್ತಮ ನಾಗರಿಕರನ್ನಾಗಿ ಮಾಡುವಲ್ಲಿ ಹೆತ್ತವರ ಪಾತ್ರ ಹೆಚ್ಚಿದೆ. ಜೊತೆಗೆ ಶಿಕ್ಷಕರ ಪಾತ್ರವೂ ಇದೆ. ಉತ್ತಮ ಶಿಕ್ಷಕ ಉತ್ತಮ ವಿದ್ಯಾರ್ಥಿಯೂ ಆಗಿರಬೇಕು. ತನ್ನ ಮಗುವಿನ ಸಾಮರ್ಥ್ಯವನ್ನು ಚೆನ್ನಾಗಿ ತಿಳಿದುಕೊಂಡವರು ಅವರ ತಾಯಿ ತಂದೆ ಆಗಿರುತ್ತಾರೆ. ಥಾಮಸ್ ಆಲ್ವಾ ಎಡಿಸನ್‌ನಂತಹ ವಿಜ್ಞಾನಿಯ ಸಾಧನೆಯ ಹಿಂದೆ ಆತನ ತಾಯಿಯ ಪರಿಶ್ರಮ ಇತ್ತು ಎನ್ನುವುದು ನಮಗೆ ಮಾದರಿಯಾಗಬೇಕು ಎಂದು ಮುಹಮ್ಮದ್ ಬ್ಯಾರಿ ತಿಳಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಆಯೆಶಾ ಶಿಕ್ಷಣ ಸಂಸ್ಥೆಗಳ ಗೌರವಾಧ್ಯಕ್ಷ ಡಾ. ಅಬ್ದುಲ್ ಮಜೀದ್ ಮಾತನಾಡುತ್ತಾ, ಗುಣಮಟ್ಟದ ಶಿಕ್ಷಣ ಇಂದಿನ ಅಗತ್ಯ. ವಿದ್ಯಾರ್ಥಿಗಳಿಗೆ ಅವರ ಹೆತ್ತವರು ಪ್ರಥಮ ಮಾರ್ಗದರ್ಶಕರು. ಆಯೆಶಾ ಶಿಕ್ಷಣ ಸಂಸ್ಥೆ ನಿರ್ದಿಷ್ಟ ಗುರಿಯೊಂದಿಗೆ ಸಾಗುತ್ತಿರುವುದು ತೃಪ್ತಿ ತಂದಿದೆ ಎಂದರು.

ದ.ಕ.ಉಡುಪಿ ಜಮೀಯತುಲ್ ಫಲಾಹ್ ಅಧ್ಯಕ್ಷ ಶಾಹುಲ್ ಹಮೀದ್ .ಕೆ.ಕೆ ಮಾತನಾಡುತ್ತಾ, ಆಯೆಶಾ ಶಿಕ್ಷಣ ಸಂಸ್ಥೆ ರಾಜ್ಯದ ಉತ್ತಮ ಸಂಸ್ಥೆಯಾಗಿ ಗುರುತಿಸಲ್ಪಟ್ಟಿರುವುದು ಉತ್ತಮ ಬೆಳವಣಿಗೆ ಶೈಕ್ಷಣಿಕವಾದ ಜಾಗೃತಿ ನಮ್ಮೆಲ್ಲರನ್ನು ಒಂದು ಗೂಡಿಸಬೇಕಾಗಿದೆ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಬಿನ್.ಎನ್.ಪುಷ್ಪರಾಜ್, ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಮನೆಯಲ್ಲಿ ಹಾಗೂ ಪರಿಸರದಲ್ಲಿ ಉತ್ತಮ ಶೈಕ್ಷಣಿಕ ವಾತಾವರಣ ಜೊತೆಗೆ ಓದುವ ಹವ್ಯಾಸ ಇರಬೇಕು ಎಂದರು. ಆಯೆಶಾ ಶಿಕ್ಷಣ ಸಂಸ್ಥೆಗಳ ಚಟುವಟಿಕೆಗಳ ವರದಿಯನ್ನು ಸಂಸ್ಥೆಯ ಪ್ರಾಂಶುಪಾಲರಾದ ಆಯಿಶಾ ಪರ್ಝಾನಾ ವಾಚಿಸಿದರು. ಆಯಿಶಾ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಅಮಿನ್ ಹಸನ್, ಟ್ರಸ್ಟಿಗಳಾದ ಅಬ್ದುಲ್ ಸಲಾಂ, ಸಲಹೆಗಾರರಾದ ನಿಯಾಝ್ ಅಹಮ್ಮದ್, ಅಝೀಝ್ ಬಸ್ತಿಕಾರ್, ಪಿಟಿಎ ಅಧ್ಯಕ್ಷ ಇಸ್ಮಾಯೀಲ್.ಎ, ಸಂಸ್ಥೆಯ ಕಾರ್ಯದರ್ಶಿ ಜಲೀಲ್ ಮುಕ್ರಿ ಮೊದಲಾದವರು ಉಪಸ್ಥಿತರಿದ್ದರು.

ಸಮಾರಂಭದಲ್ಲಿ ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಅತಿಥಿಗಳು ಬಹುಮಾನ ವಿತರಿಸಿದರು. ಶಾಲಾ ಶಿಕ್ಷಕಿಯರು ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News