ಮಂಗಳೂರು: ವಿಕಲಚೇತನರ ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಚಾಲನೆ

Update: 2018-12-15 17:06 GMT

ಮಂಗಳೂರು, ಡಿ.15: ಸವಾಲೊಡ್ಡುವ ಕ್ರೀಡೆಯಾಗಿರುವ ಕಬಡ್ಡಿಯಲ್ಲಿ ದಾಳಿ ನಡೆಸಲು, ಎದುರಾಳಿಯನ್ನು ಹಿಡಿಯಲು ಬಲಿಷ್ಠ ದೈಹಿಕ ಸಾಮರ್ಥ್ಯ ಮುಖ್ಯ. ಆದರೆ ನಗರದಲ್ಲಿ ಶನಿವಾರ ಆರಂಭಗೊಂಡ ತೀರಾ ಭಿನ್ನವಾದ ಕಬಡ್ಡಿಯು ಪ್ರೇಕ್ಷಕರ ಗಮನ ಸೆಳೆಯಿತು. ಅಲ್ಲದೆ ಮೂಕವೀಕ್ಷಕರನ್ನಾಗಿಸಿತು. ಅಂದರೆ ದೈಹಿಕವಾಗಿ ಸ್ವಲ್ಪ ನ್ಯೂನತೆ ಇದ್ದ ಆಟಗಾರರು ಕಬಡ್ಡಿಯಲ್ಲಿ ತಮ್ಮ ಸಾಮರ್ಥ್ಯ ಪ್ರದರ್ಶಿಸುವ ಮೂಲಕ ಅಚ್ಚರಿ ಮೂಡಿಸಿದರು. ಒಂದು ಕೈ ಇಲ್ಲದವರು, ಒಂದು ಕಾಲು ಇಲ್ಲದವರು ಕೂಡಾ ಕಬಡ್ಡಿ ಆಡುವ ಮೂಲಕ ಎಲ್ಲರನ್ನೂ ನಿಬ್ಬೆರಗಾಗಿಸಿದರು.

ನಗರದ ಕರಾವಳಿ ಉತ್ಸವ ಮೈದಾನದಲ್ಲಿ ಮಾತೃ ಪ್ರತಿಷ್ಠಾನ ಸಂಸ್ಥೆಯು ರಾಜ್ಯ ವಿಕಲಚೇತನ ಕಬಡ್ಡಿ ಸಂಸ್ಥೆ ಮತ್ತು ಯುವಜನ ಕ್ರೀಡಾ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ ಅಂಗವಿಕಲರ ರಾಷ್ಟ್ರಮಟ್ಟದ ಕಬಡ್ಡಿಯಲ್ಲಿ ಇಂತಹ ದೃಶ್ಯಗಳು ಕಂಡು ಬಂದವು. ಇದೇ ಪ್ರಪ್ರಥಮ ಬಾರಿಗೆ ಮಾತೃ ಪ್ರತಿಷ್ಠಾನ ಸಂಸ್ಥೆ ಈ ವಿಶಿಷ್ಟ ಕಬಡ್ಡಿ ಪಂದ್ಯವನ್ನು ಆಯೋಜಿಸಿ ವಿಕಲಚೇತನರು ಇತರರಿಗಿಂತ ಕಡಿಮೆ ಇಲ್ಲ ಎನ್ನುವುದನ್ನು ಸಾಬೀತು ಪಡಿಸಲು ಅವಕಾಶ ನೀಡಿತು.

12 ತಂಡಗಳು : ಕರ್ನಾಟಕ, ಆಂಧ್ರಪ್ರದೇಶ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ತೆಲಂಗಾಣ, ಗೋವಾ, ಜಾರ್ಖಂಡ್, ತಮಿಳುನಾಡು, ಮಧ್ಯಪ್ರದೇಶ, ಪಾಂಡಿಚೇರಿ, ರಾಜಸ್ಥಾನ, ಕೇರಳ ಹೀಗೆ 12 ತಂಡಗಳು ಪಂದ್ಯದಲ್ಲಿ ಭಾಗವಹಿಸಿದ್ದವು. ಗೋವಾ ಮತ್ತು ಜಾರ್ಖಂಡ್ ತಂಡಗಳ ನಡುವೆ ಮೊದಲ ಪಂದ್ಯ ನಡೆಯಿತು. ಶನಿವಾರ ಲೀಗ್ ಪಂದ್ಯಗಳು ನಡೆದಿದ್ದು, ರವಿವಾರ ನಾಕೌಟ್ ಪಂದ್ಯಗಳು ಜರುಗಲಿವೆ.

ದ.ಕ.ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಪಂದ್ಯ ಉದ್ಘಾಟಿಸಿ ಶುಭ ಹಾರೈಸಿದರು. ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಮಾತನಾಡಿ ‘ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಸವಾಲುಗಳನ್ನು ಎದುರಿಸಲು ಶಕ್ತಿ ಸಿಗುತ್ತದೆ. ಬದುಕಿನ ಯಶಸ್ವಿಗೆ ಇದು ಸ್ಪೂರ್ತಿಯಾಗಲಿ’ ಎಂದರು.

ಮಾಜಿ ಶಾಸಕ ಜೆ.ಆರ್.ಲೋಬೊ ಮಾತನಾಡಿ ‘ ವಿಕಲ ಚೇತನರಲ್ಲಿ ಆತ್ಮ ವಿಶ್ವಾಸ ಮೂಡಿಸುವ ಮಾತೃ ಪ್ರತಿಷ್ಠಾನ ಸಂಸ್ಥೆಯ ಕಾರ್ಯ ಸಮಾಜಕ್ಕೆ ಮಾದರಿಯಾಗಿದೆ ಎಂದರು. ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿಯ ಕರ್ನಾಟಕ ಘಟಕದ ಅಧ್ಯಕ್ಷ ಬಸೂರು ರಾಜೀವ್ ಶೆಟ್ಟಿ, ದ.ಕ.ಘಟಕದ ಅಧ್ಯಕ್ಷ ಶಾಂತರಾಮ ಶೆಟ್ಟಿ, ದಾಯ್ಜಿವಲ್ಡ್‌ನ ಮುಖ್ಯಸ್ಥ ವಾಲ್ಟರ್ ಡಿಸೋಜ ಮುಖ್ಯ ಅತಿಥಿಗಳಾಗಿದ್ದರು. 

ಯುವಜನ ಕ್ರೀಡಾ ಇಲಾಖೆಯ ಉಪ ನಿರ್ದೇಶಕ ಪ್ರದೀಪ್ ಡಿಸೋಜ, ಮಾತೃ ಪ್ರತಿಷ್ಠಾನದ ಅಧ್ಯಕ್ಷ ಎಂ.ಆರ್.ಮಹೇಶ್ ಗೌಡ , ಸಂಘಟನಾ ಕಾರ್ಯದರ್ಶಿ ಡೆನ್ಸಿಲ್ ಫೆರ್ನಾಂಡಿಸ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News