ಕನ್ನಡ ಶಾಲೆ ಉಳಿಸುವ ಕೆಲಸವಾಗಲಿ: ಹರಿಕೃಷ್ಣ ಪುನರೂರು

Update: 2018-12-15 17:29 GMT

ಉಳ್ಳಾಲ, ಡಿ.15: ಸರಕಾರದ ಇಚ್ಛಾಶಕ್ತಿಯ ಕೊರತೆಯಿಂದಾಗಿ ಕನ್ನಡ ಶಾಲೆಗಳನ್ನು ಉಳಿಸುವ ಕೆಲಸವಾಗಬೇಕು. ಜನಪ್ರತಿನಿಧಿಗಳ ಆಶ್ವಾಸನೆಗಳು, ಭಾಷಣಗಳಿಗೆ ಮಾತ್ರ ಸೀಮಿತವಾಗಿದೆ. ಅಧಿಕಾರಿಗಳಿಂದ ಏನೂ ಮಾಡಲು ಅಸಾಧ್ಯವಾದ ಸ್ಥಿತಿಯಿದ್ದು ಕನ್ನಡ ಶಾಲೆಗಳು ಮುಚ್ಚದಂತೆ ಸರಕಾರ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಅಭಿಪ್ರಾಯಪಟ್ಟರು.

ದೇರಳಕಟ್ಟೆಯ ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆಯ ವತಿಯಿಂದ ದೇರಳಕಟ್ಟೆಯ ಗ್ರೀನ್ ಗ್ರೌಂಡಿನಲ್ಲಿ ಶನಿವಾರ ನಡೆದ ನಾಡು ನುಡಿ ವೈಭವದ ರತ್ನೋತ್ಸವ -2018 ಕರಾವಳಿ ಕರ್ನಾಟಕದ ಸಾಹಿತ್ಯ-ಸಾಂಸ್ಕತಿಕ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕನ್ನಡ ಶಾಲೆಗಳ ಇಂದಿನ ಸ್ಥಿತಿ ಮರುಕ ಹುಟ್ಟಿಸುವಂತಿದೆ. ಒಂದು ಹಂತದಲ್ಲಿ ಮುಂದಿನ ಐದು ವರ್ಷಗಳಲ್ಲಿ ಕನ್ನಡ ಶಾಲೆಗಳೇ ಇಲ್ಲದ ಸ್ಥಿತಿ ನಿರ್ಮಾಣವಾಗುವ ಆತಂಕ ಇದ್ದು ಪೋಷಕರು ಅಸಹಾಯಕರಾಗಿದ್ದಾರೆ. ಶಿಕ್ಷಕರಿಲ್ಲದೆ, ಮೂಲ ಸೌಕರ್ಯಗಳಿಲ್ಲದ ಸರಕಾರಿ ಶಾಲೆಗಳಿಗೆ ಯಾವ ಪೋಷಕರೂ ಮಕ್ಕಳನ್ನು ಕಳುಹಿಸಲು ಒಪ್ಪಲಾರರು. ಹಾಗಿದ್ದರೂ ವ್ಯವಸ್ಥೆ ಸರಿಪಡಿಸಬೇಕಾದ ಜನಪ್ರತಿನಿಧಿಗಳ ಆಶ್ವಾಸನೆಗಳು ಕೇವಲ ವೇದಿಕೆಗಳಿಗೆ ಮಾತ್ರ ಸೀಮಿತವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಅಧಿಕಾರಿಗಳಿಗೆ ಸರಕಾರದಿಂದ ಅನುದಾನಗಳು ಬಾರದೇ ಅವ್ಯವಸ್ಥೆಗಳನ್ನು ಸರಿಪಡಿಸುವಂತಿಲ್ಲ. ಖಾಸಗಿ ಶಾಲೆಗಳಂತೆ ಕನ್ನಡ ಶಾಲೆಗಳಲ್ಲೂ ವ್ಯವಸ್ಥೆಯನ್ನು ಕಲ್ಪಿಸುವ ಮೂಲಕ ಕನ್ನಡ ಶಾಲೆಗಳನ್ನು ಉಳಿಸುವ ಕಾರ್ಯ ಆಗಬೇಕು ಎಂದರು.

ರಾಜ್ಯದ ರಾಜಧಾನಿಯಲ್ಲೂ ಶೇ.30-40ರಷ್ಟು ಮಾತ್ರ ಕನ್ನಡಿಗರಿದ್ದಾರೆ. ಉಳಿದವರು ತಮ್ಮ ವ್ಯವಹಾರಕ್ಕಾಗಿ ಪ್ರದೇಶವನ್ನು ಬಳಸಿ ಹಿಂತಿರುಗುತ್ತಿದ್ದಾರೆ. ಆಯಾಯ ರಾಜ್ಯಗಳಲ್ಲಿ ತಮ್ಮ ಭಾಷೆಯನ್ನು ಬಿಟ್ಟುಕೊಡುತ್ತಿಲ್ಲ, ಆದರೆ ನಮ್ಮ ರಾಜ್ಯದಲ್ಲಿ ಕನ್ನಡ ಭಾಷೆಯನ್ನು ಬಿಟ್ಟು ಅವರ ಭಾಷೆಗಳಿಗೆ ಹೊಂದಾಣಿಕೆ ಮಾಡಿಕೊಂಡು ಹೋಗುವ ಪರಿಪಾಠಗಳಿಗೆ ಕಡಿವಾಣ ಹಾಕಬೇಕಿದೆ ಎಂದರು.

ಪೆರ್ಮನ್ನೂರು ಸಂತ ಸೆಬೆಸ್ತಿಯನ್ನರ ಚರ್ಚ್‌ನ ಧರ್ಮಗುರು ಫಾ.ಜೆ.ಬಿ. ಸಲ್ದಾನ ಮಾತನಾಡಿ, ವಾಟ್ಸ್‌ಆ್ಯಪ್ ಸಂಸ್ಕತಿಯಿಂದಾಗಿ ಮಕ್ಕಳು ಓದುವ ಕಲೆಯನ್ನೇ ಮರೆತಿದ್ದಾರೆ. ಕನ್ನಡ ಪುಸ್ತಕವಾಗಲಿ, ಪತ್ರಿಕೆಯಾಗಲಿ ಓದುವ ಅಭ್ಯಾಸವೇ ಈಗಿನ ಮಕ್ಕಳಲ್ಲಿ ಇಲ್ಲ. ತಮ್ಮ ಸಂಸ್ಥೆಯಲ್ಲಿ ಮಕ್ಕಳ ಹುಟ್ಟುಹಬ್ಬದ ದಿನದಂದು ನೀಡುವ ಸಿಹಿತಿಂಡಿಯ ಬದಲಾಗಿ ಅವರ ಹೆತ್ತವರಲ್ಲಿ ಸಂಸ್ಥೆಯ ಗ್ರಂಥಾಲಯಕ್ಕೆ ಕನ್ನಡ ಪುಸ್ತಕಗಳನ್ನು ಕೊಡುಗೆಯಾಗಿ ನೀಡುವ ನಿಯಮವನ್ನು ತರಲಾಗಿದೆ. ಅದನ್ನು ಪ್ರತಿ ಶನಿವಾರ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಓದಿಸುವಂತಹ ಕಾರ್ಯವನ್ನು ಸಂಸ್ಥೆಯಲ್ಲಿ ಮಾಡಲಾಗುತ್ತಿದೆ. ಇಂತಹ ಪರಿಣಾಮಕಾರಿ ಕ್ರಮಗಳನ್ನು ಸಂಸ್ಥೆಗಳಲ್ಲಿ ಅಳವಡಿಸಿದಲ್ಲಿ ಮಕ್ಕಳಲ್ಲಿ ಓದುವ ಕಲೆಯನ್ನು ಬೆಳೆಸಬಹುದು ಎಂದರು.

ದೇರಳಕಟ್ಟೆ ರತ್ನ ಎಜ್ಯುಕೇಷನ್ ಟ್ರಸ್ಟ್ ಕೋಶಾಧಿಕಾರಿ ರತ್ನಾವತಿ ಕೆ.ಶೆಟ್ಟಿ ಧ್ವಜಾರೋಹಣಗೈದರು. ಹಿರಿಯ ಸಾಹಿತಿ 80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಡಾ. ನಾ.ಡಿ.ಸೋಜ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಜಿಪಂ ಸದಸ್ಯೆ ಧನಲಕ್ಷ್ಮೀ ಗಟ್ಟಿ, ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್, ಬೆಳ್ಮ ಗ್ರಾಮ ಪಂಚಾಯತ್ ಅಧ್ಯಕ್ಷೆ ವಿಜಯ ಕೃಷ್ಣಪ್ಪಪೂಜಾರಿ ಹಾಗೂ ಬೆಂಗಳೂರಿನ ಹಿಂದೂಸ್ತಾನ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಉಪಾಧ್ಯಕ್ಷ ಸೂಡಿ ಸುರೇಶ್ ಉಪಸ್ಥಿತರಿದ್ದರು.

ರತ್ನ ಎಜ್ಯುಕೇಷನ್ ಟ್ರಸ್ಟ್ ಅಧ್ಯಕ್ಷ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು ಸ್ವಾಗತಿಸಿದರು. ರಮೇಶ್ ಪೆರಾಡಿ ಮತ್ತು ನವೀನ್ ರಾವ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಸೌಮ್ಯ.ಆರ್. ಶೆಟ್ಟಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News