ಸ್ಥಳೀಯ ಆಡಳಿತದಲ್ಲಿ ಜನರ ಸಹಭಾಗಿತ್ವ ಇರಲಿ: ಕಾತ್ಯಾಯಿನಿ

Update: 2018-12-15 17:39 GMT

ಮಂಗಳೂರು, ಡಿ.15: ಸಾರ್ವಜನಿಕರ ಮೂಲಭೂತ ಆವಶ್ಯಕತೆಗಳನ್ನು ಪೂರೈಸುವ ನಿಟ್ಟಿನಲ್ಲಿ ಸಂವಿಧಾನವು ಸ್ಥಳೀಯ ಚುನಾಯಿತ ಆಡಳಿತದಲ್ಲಿ ಜನರ ಸಹಭಾಗಿತ್ವಕ್ಕೆ ಅವಕಾಶ ಕಲ್ಪಿಸಿಕೊಟ್ಟಿದೆ. ಆದರೆ ಇದು ಇಲ್ಲಿಯವರೆಗೆ ಕಾರ್ಯಗತವಾಗಿಲ್ಲ ಎಂದು ಬೆಂಗಳೂರು ಸಿವಿಕ್ ಸಂಸ್ಥೆಯ ನಿರ್ದೇಶಕಿ ಕಾತ್ಯಾಯಿನಿ ಚಾಮರಾಜ್ ಹೇಳಿದರು.

ಎಂಸಿಸಿ ಸಿವಿಕ್ ಗ್ರೂಪ್‌ನಿಂದ ನಗರದ ಸಂತ ಅಲೋಶಿಯಸ್ ಕಾಲೇಜು ಸಭಾಂಗಣದಲ್ಲಿ ಶನಿವಾರ ನಡೆದ ‘ಮಂಗಳೂರು ಆಡಳಿತದಲ್ಲಿ ಸಮುದಾಯದ ಭಾಗವಹಿಸುವಿಕೆ’ ಕಾರ್ಯಕ್ರಮದಲ್ಲಿ ಮುಖ್ಯಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಸಂವಿಧಾನದ 74ನೇ ಪರಿಚ್ಛೇದ ತಿದ್ದುಪಡಿ ಪ್ರಕಾರ ನಗರ ಯೋಜನೆ, ಶುದ್ಧ ನೀರು ಪೂರೈಕೆ, ಸೂಕ್ತ ಕಸ ವಿಲೇವಾರಿ, ಬಡತನ ನಿರ್ಮೂಲನೆ, ಆರ್ಥಿಕ ಮತ್ತು ಸಾಮಾಜಿಕ ನ್ಯಾಯ ಸೇರಿದಂತೆ ಸುಮಾರು 18 ಅಂಶಗಳನ್ನು ಸ್ಥಳೀಯ ಸರಕಾರಗಳು ನಿರ್ವಹಣೆ ಮಾಡಬೇಕು ಎಂದು ಸ್ಪಷ್ಟವಾಗಿ ತಿಳಿಸಿದೆ.

ಆದರೆ ಯಾವುದೂ ಯಶಸ್ವಿಯಾಗಿ ನಿರ್ವಹಣೆಯಾಗುತ್ತಿಲ್ಲ. ತಿದ್ದುಪಡಿ ಪ್ರಕಾರ ಸರಕಾರಿ ಆಸ್ಪತ್ರೆ ಮತ್ತು ಸರಕಾರಿ ಶಾಲೆಗಳನ್ನೂ ಸ್ಥಳೀಯ ಚುನಾಯಿತ ಆಡಳಿತ ನಿಭಾಯಿಸಬೇಕು ಎಂದಿದೆ. ಆದರೆ ರಾಜ್ಯದಲ್ಲಿ ಅವೆಲ್ಲವೂ ರಾಜ್ಯ ಸರಕಾರದ ಅಡಿಯಲ್ಲೇ ನಿರ್ವಹಿಸಲ್ಪಡುತ್ತಿವೆ ಎಂದವರು ಖೇದ ವ್ಯಕ್ತಪಡಿಸಿದರು.
ಜನರಿಗೆ ಆವಶ್ಯವಿರುವ ಯಾವುದೇ ಕಾಮಗಾರಿಯನ್ನು ನಡೆಸುವಾಗ ಅದಕ್ಕೆ ತಗಲಿದ ಒಟ್ಟು ವೆಚ್ಚ ಸೇರಿದಂತೆ ಸಮಗ್ರ ವಿವರವನ್ನು ಜನರಿಗೆ ತಿಳಿಸಬೇಕು. ಆದರೆ ನಮ್ಮ ವ್ಯವಸ್ಥೆಯಲ್ಲಿ ಇದು ಯಾವುದೂ ನಡೆಯುತ್ತಿಲ್ಲ ಎಂದು ಅವರು ವಿಷಾದ ವ್ಯಕ್ತಪಡಿಸಿದರು.

ಲಂಚ ಮುಕ್ತ ಕರ್ನಾಟಕ ವೇದಿಕೆಯ ಜತೆ ಕಾರ್ಯದರ್ಶಿ ನರೇಂದ್ರ ಕುಮಾರ್, ಪದ್ಮನಾಭ ಉಳ್ಳಾಲ್ ಮುಂತಾದವರು ಉಪಸ್ಥಿತರಿದ್ದರು. ಎಂಸಿಸಿ ಸಿವಿಕ್ ಗ್ರೂಪ್‌ನ ಪದಾಧಿಕಾರಿ ನೈಝಿಲ್ ಅಲ್ಬುಕರ್ಕ್ ಸ್ವಾಗತಿಸಿದರು. ಹರಿಣಿ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News