ದೇಶಕ್ಕೆ ಸೇನಾ ಮುಖ್ಯಸ್ಥರಿಂದ ಅವಮಾನ: ಮಹಿಳೆಯರ ಬಗ್ಗೆ ಹೇಳಿಕೆ ನೀಡಿದ ಜ.ರಾವತ್ ವಿರುದ್ಧ ಟ್ವಿಟರಿಗರ ಆಕ್ರೋಶ

Update: 2018-12-16 10:27 GMT

ಹೊಸದಿಲ್ಲಿ, ಡಿ.16: ಮಹಿಳೆಯರು ಸೇನೆಗೆ ಸೇರಲು ಹಿಂದೇಟು ಹಾಕಲು ಕಾರಣ ಎಂದು ಲಿಂಗ ಬೇಧ-ಭಾವದ ಅಂಶಗಳನ್ನು ಪಟ್ಟಿ ಮಾಡಿದ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಹೊಸ ವಿವಾದದಲ್ಲಿ ಸಿಲುಕಿದ್ದಾರೆ. ಸೇನಾ ಮುಖ್ಯಸ್ಥರ ಹೇಳಿಕೆಗೆ ಟ್ವಿಟರ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ನ್ಯೂಸ್ 18ಗೆ ನೀಡಿದ ಸಂದರ್ಶನದಲ್ಲಿ ಜನರಲ್ ರಾವತ್, ಯುದ್ಧ ಹೊಣೆಗಾರಿಕೆಗೆ ಮಹಿಳೆಯರು ಬಾರದಿರಲು ಮುಖ್ಯ ಕಾರಣವೆಂದರೆ, ಸೈನಿಕರು ಬಹುತೇಕ ಹಳ್ಳಿಗಳಿಂದ ಬಂದವರಾಗಿದ್ದು, ಇವರು ಮಹಿಳಾ ಕಮಾಂಡರ್ ‍ಗಳನ್ನು ಸ್ವೀಕರಿಸಲು ಇಚ್ಛಿಸುವುದಿಲ್ಲ. ಮಹಿಳೆಯರು ಯುದ್ಧದಲ್ಲಿ ಜೀವ ಕಳೆದುಕೊಳ್ಳುವ ಸಾಧ್ಯತೆಯೂ ಇರುತ್ತದೆ. ಯುದ್ಧ ಭೂಮಿಯಿಂದ ಮಹಿಳೆಯರ ಶವ ತರುವ ಪರಿಸ್ಥಿತಿಯನ್ನು ಸಹಿಸುವ ಶಕ್ತಿಯಲ್ಲಿ ಭಾರತೀಯ ಕುಟುಂಬಗಳು ಇಲ್ಲ ಎಂದಿದ್ದರು. ಜತೆಗೆ ಮಹಿಳೆಯರ ಮುಖ್ಯ ಹೊಣೆ ಮಕ್ಕಳ ಆರೈಕೆ ಎಂಬ ಅರ್ಥದಲ್ಲಿ ಮಾತನಾಡಿ, ಸೇನೆ ಮಹಿಳಾ ಕಮಾಂಡಿಂಗ್ ಆಫೀಸರ್ ‍ಗಳಿಗೆ ಆರು ತಿಂಗಳು ಹೆರಿಗೆ ರಜೆ ನೀಡುವ ಸ್ಥಿತಿಯಲ್ಲಿಲ್ಲ. ಹೆರಿಗೆ ರಜೆ ನಿರಾಕರಿಸಿದರೆ ರಾದ್ಧಾಂತವಾಗುತ್ತದೆ ಎಂದು ಹೇಳಿದ್ದರು.

ನೂರು ಮಂದಿ ಜವಾನರಿಂದ ಸುತ್ತುವರಿಯಲ್ಪಟ್ಟ ಮಹಿಳಾ ಯೋಧರು, "ನಾವು ಬಟ್ಟೆ ಬದಲಿಸುವಾಗ ಇಣುಕುತ್ತಾರೆ" ಎಂಬ ದೂರು ನೀಡುವ ಸಾಧ್ಯತೆಯೂ ಇದೆ. ಆಗ ಆಕೆಗೆ ನಾವು ಪರದೆಯನ್ನೂ ಒದಗಿಸಬೇಕಾಗುತ್ತದೆ" ಎಂದು ಹಗುರವಾಗಿ ಮಾತನಾಡಿದ್ದರು ಎಂದು ವರದಿಯಾಗಿದೆ.

ರಾವತ್ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಇದು ದೇಶಕ್ಕೆ ಸೇನಾ ಮುಖ್ಯಸ್ಥರು ಮಾಡಿದ ಅವಮಾನ ಎಂದು ಟ್ವಿಟರಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸೇನಾ ಮುಖ್ಯಸ್ಥರು ಹೇಳುವಂತೆ ಇಣುಕಿ ನೋಡುವ ಜವಾನರನ್ನು ಕಿತ್ತೆಸೆಯುವ ಬದಲು, ಮಹಿಳೆಯರನ್ನು ಸೇರಿಸಿಕೊಳ್ಳದಿರುವುದು ಪರಿಹಾರವೇ ಎಂದು ಕೆಲವರು ಪ್ರಶ್ನಿಸಿದ್ದಾರೆ.

ಮಹಿಳೆಯರ ಖಾಸಗಿತನಕ್ಕೆ ಪುರುಷ ಸೈನಿಕರಿಂದ ಧಕ್ಕೆಯಾಗುವ ಸಾಧ್ಯತೆ ಇದೆ ಎಂಬ ಹೇಳಿಕೆಯಿಂದ, ಯಾವುದೇ ಶಿಕ್ಷಣ ಅಥವಾ ಬುದ್ಧಿ ಇಲ್ಲದವರು ಸೇನೆ ಸೇರುತ್ತಾರೆ ಎಂಬ ಅರ್ಥ ಬರುತ್ತದೆ ಎಂದು ಮತ್ತೆ ಕೆಲವರು ರಾವತ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News