ಹೆದ್ದಾರಿ ಅಗಲೀಕರಣದಲ್ಲಿ ಕಣ್ಣಾಮುಚ್ಚಾಲೆ ಆಡುತ್ತಿರುವ ಪ್ರಾಧಿಕಾರ: ಆರೋಪ

Update: 2018-12-16 12:07 GMT

ಭಟ್ಕಳ, ಡಿ. 16: ರಾ.ಹೆ.66 ರ ಅಗಲೀಕರಣ ಕಾಮಗಾರಿಯೂ ಪ್ರಗತಿಯಲ್ಲಿದ್ದು ಅಗಲೀಕರಣಕ್ಕೆ ಸಂಬಂಧಿಸಿದಂತೆ ಸಂಬಂಧಪಟ್ಟ ಪ್ರಾಧಿಕಾರದ ಅಧಿಕಾರಿಗಳು ಕಣ್ಣಾಮುಚ್ಚಾಲೆ ಆಟ ಆಡುತ್ತಿದ್ದು ಸಾರ್ವಜನಿಕರಿಗೆ ಸರಿಯಾದ ಮಾಹಿತಿ ನೀಡುತ್ತಿಲ್ಲವೆಂದು ಮಣ್ಕುಳಿ ಮತ್ತು ಮೂಡಭಟ್ಕಳದ ಸಾರ್ವಜನಿಕರು ರವಿವಾರ ಇಲ್ಲಿನ ರಾಘವೇಂದ್ರ ಮಠದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

ಈ ಸಂದರ್ಭ ಮಾತನಾಡಿದ ಅಂಜುಮನ್ ಕಾಲೇಜಿನ ಪ್ರಾಧ್ಯಾಪಕ ಮಂಜುನಾಥ್ ಪ್ರಭು, ಇಲ್ಲಿನ ಡಾ.ಚಿತ್ತರಂಜನ್ ವೃತ್ತದಿಂದ ಪುಷ್ಪಾಂಜಲಿ ಚಿತ್ರಮಂದಿರದ ವರೆಗೆ ಸರ್ವಿಸ್ ರಸ್ತೆ ನಿರ್ಮಾಣ ಮಾಡಲಾಗುತ್ತದೆ ಇಲ್ಲವೋ ತಿಳಿಯದು. ಒಂದು ವೇಳೆ ಇದ್ದರೆ ಅದರ ರೂಪುರೇಷೆ ಹೇಗಿರುತ್ತದೆ ಎನ್ನುವುದು ಇದುವರೆಗೂ ಅಧಿಕಾರಿಗಳು ಬಹಿರಂಗಗೊಳಿಸುತ್ತಿಲ್ಲ. ಹೆದ್ದಾರಿ ನಿರ್ಮಾಣದ ನಂತರ ಒಳಚರಂಡಿ ವ್ಯವಸ್ಥೆ ಸಂಪೂರ್ಣವಾಗಿ ಹದಗೆಡುತ್ತಿದ್ದು ಚರಂಡಿ ನೀರು ಕುಡಿಯುವ ನೀರಿನ ಬಾವಿಗೆ ನುಗ್ಗಿ ನೀರು ಕಲುಷಿತಗೊಳ್ಳುತ್ತದೆ. ಹೆದ್ದಾರಿಯನ್ನು ನೆಲಮಟ್ಟದಿಂದ ಐದಾರು ಅಡಿ ಎತ್ತರಕ್ಕೆ ನಿರ್ಮಿಸುತ್ತಿದ್ದು ಹೆದ್ದಾರಿ ಪಕ್ಕದಲ್ಲಿರುವ ಮನೆಗಳಿಗೆ ಮಳೆಗಾಲದಲ್ಲಿ ನೀರು ನುಗ್ಗುವ ಸಾಧ್ಯತಗಳಿವೆ. ಈ ಎಲ್ಲ ಪ್ರಶ್ನೆಗಳಿಗೆ ಹೆದ್ದಾರಿ ಪ್ರಾಧಿಕಾರ ಯಾವುದೇ ರೀತಿಯ ಉತ್ತರ ನೀಡುತ್ತಿಲ್ಲ. ಒಬ್ಬರು ಮತ್ತೊಬ್ಬರನ್ನು ತೋರಿಸುತ್ತ ಇದು ನಮಗೆ ಸಂಬಂಧಿಸಿದ್ದಲ್ಲ ಪುರಸಭೆಯವರಿಗೆ ಕೇಳಿ ಎಂಬ ಹಾರೈಕೆಯ ಉತ್ತರ ನೀಡುತ್ತಿದ್ದಾರೆ. ಪುರಸಭೆಯವರಿಗೆ ಕೇಳದರೆ ಇದು ಹೆದ್ದಾರಿ ಪ್ರಾಧಿಕಾರಕ್ಕೆ ಸಂಬಂಧಿಸಿದ್ದ ಎನ್ನುತ್ತಿದ್ದಾರೆ ಹೀಗಾಗಿ ಸಾರ್ವಜನಿಕರು ಮಾತ್ರ ಇದರಿಂದ ತುಂಬಾ ತೊಂದರೆಗೊಳಗಾಗುತ್ತಿದ್ದಾರೆ ಎಂದು ಅವರು ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದ್ದಾರೆ. 

ಹೆದ್ದಾರಿ ಅಧಿಕಾರಿಗಳು ಯಾವುದೇ ಗುಟ್ಟನ್ನು ಬಿಟ್ಟುಕೊಡದೆ ಸಾರ್ವಜನಿಕರೊಂದಿಗೆ ಕಣ್ಣಾಮುಚ್ಚಾಲೆ ಆಟ ಆಡುತ್ತಿದ್ದು ಜನರಲ್ಲಿ ಆತಂಕವನ್ನು ಸೃಷ್ಟಿಸುತ್ತಿ ದ್ದಾರೆ ಎಂದು ಆರೋಪಿಸಿರುವ ಅವರು, ಸಾರ್ವಜನಿಕರು ಪುರಸಭೆಯವರನ್ನು ಪ್ರಶ್ನಿಸಿದರೆ, ಹೆದ್ದಾರಿ ಅಧಿಕಾರಿಗಳನ್ನು ಸಂಪರ್ಕಿಸಲು ತಿಳಿಸುತ್ತಾರೆ. ಹೆದ್ದಾರಿ ಪ್ರಾಧಿಕಾರದವರು ಇದು ನಮಗೆ ಸಂಬಂಧಿಸಿದ್ದಲ್ಲ ಎಂಬ ಉತ್ತರ ನೀಡುತ್ತಿದ್ದು ಇದರಿಂದಾಗಿ ಸಾರ್ವಜನಿಕರು ರೂಸಿ ಹೋಗಿದ್ದಾರೆ ಎಂದು ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತ ಸಾರ್ವಜನಿಕ ಮುಖಂಡರು ಆರೋಪಿಸಿದ್ದಾರೆ.

ಈ ಸಂದರ್ಭದಲ್ಲಿ ಪ್ರಮುಖರಾದ ನಾಗಪ್ಪ ಪೈ, ಗಣಪತಿ ಪ್ರಭು, ಶ್ರೀನಿವಾಸ ಪಡಿಯಾರ, ಅಶೋಕ ಹೆಗಡೆ, ಗಜಾನಂದ ಯಾಜಿ, ಗಿರಿಧರ್ ನಾಯ್ಕ, ಎಂ.ಎಂ.ಲೀಮಾ, ವಿಠಲ್ ಬಾಲೇರಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News