ಬ್ಯಾಂಕಿನಿಂದ 84 ಲಕ್ಷ ರೂ. ಮೊತ್ತದ ನಾಣ್ಯ ಕದ್ದ ಮ್ಯಾನೇಜರ್ !

Update: 2018-12-16 14:01 GMT

 ಕೋಲ್ಕತಾ, ಡಿ.16: ಲಾಟರಿ ಟಿಕೇಟು ಖರೀದಿಯ ಖಯಾಲಿಯಿದ್ದ ಬ್ಯಾಂಕ್ ಮ್ಯಾನೇಜರ್ 17 ತಿಂಗಳಲ್ಲಿ 84 ಲಕ್ಷ ರೂ. ಮೊತ್ತದ ನಾಣ್ಯವನ್ನು ಬ್ಯಾಂಕಿನಿಂದ ಕದ್ದಿರುವ ಪ್ರಕರಣ ಪಶ್ಚಿಮ ಬಂಗಾಳದಲ್ಲಿ ಬೆಳಕಿಗೆ ಬಂದಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಪೂರ್ವ ಬುರ್ದ್ವಾನ್ ಜಿಲ್ಲೆಯ ಮೆಮರಿ ಶಾಖೆಯಲ್ಲಿ ಹಿರಿಯ ಸಹಾಯಕ ವ್ಯವಸ್ಥಾಪಕನಾಗಿರುವ ತಾರಕ್ ಜೈಸ್ವಾಲ್(35 ವರ್ಷ) ಕಳೆದ 17 ತಿಂಗಳಲ್ಲಿ ಬ್ಯಾಂಕಿನಿಂದ 84 ಲಕ್ಷ ರೂ. ಮೊತ್ತದ ಹಣ ಕದ್ದಿರುವುದು ಕಳೆದ ತಿಂಗಳು ನಡೆದ ಬ್ಯಾಂಕಿನ ಆಡಿಟ್(ಲೆಕ್ಕಪತ್ರ ತಪಾಸಣೆ) ಸಂದರ್ಭ ತಿಳಿದು ಬಂದಿದೆ. 17 ತಿಂಗಳಲ್ಲಿ 84 ಲಕ್ಷ ರೂ. ಹಣ, ಅದೂ ನಾಣ್ಯಗಳಲ್ಲಿ ಕದ್ದಿರುವುದು ಗಮನಾರ್ಹವಾಗಿದೆ. ಈತನಿಗೆ ಲಾಟರಿ ಟಿಕೇಟು ಖರೀದಿಸುವ ಖಯಾಲಿಯಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

  ಆಡಿಟಿಂಗ್ ನಡೆಸುವ ಸಂದರ್ಭ ಬ್ಯಾಂಕಿನ ಖಜಾನೆಯಲ್ಲಿ ಭಾರೀ ಮೊತ್ತದ ಕರೆನ್ಸಿ ನೋಟುಗಳು ಹಾಗೂ ನಾಣ್ಯಗಳಿರುವ ಬಗ್ಗೆ ಆಡಿಟರ್ ಪ್ರಶ್ನಿಸಿದ್ದಾರೆ. ತನ್ನ ಕಳ್ಳಾಟ ಬೆಳಕಿಗೆ ಬರುತ್ತದೆ ಎಂಬುದು ಅರಿವಾದೊಡನೆ ಜೈಸ್ವಾಲ್, ರಜೆ ಪಡೆಯದೆ ಅನಧಿಕೃತವಾಗಿ ಗೈರು ಹಾಜರಾಗಿದ್ದಾನೆ. ಬ್ಯಾಂಕಿನ ಖಜಾನೆಯ ಉಸ್ತುವಾರಿ ಹೊಂದಿದ್ದ ಜೈಸ್ವಾಲ್‌ರನ್ನು ಕರೆಸಬೇಕೆಂದು ಆಡಿಟರ್ ತಿಳಿಸಿದಾಗ ಜೈಸ್ವಾಲ್ ತನ್ನ ಪತ್ನಿಯ ಮೂಲಕ ಖಜಾನೆಯ ಕೀಲಿ ಕೈ ಕೊಟ್ಟು ಕಳಿಸಿದ್ದಾನೆ. ಆದರೆ ಪೊಲೀಸರು ಸಮನ್ಸ್ ಜಾರಿಗೊಳಿಸಿದ ನಂತರ ಬ್ಯಾಂಕಿಗೆ ಬಂದ ಜೈಸ್ವಾಲ್ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಈ ಪ್ರಕರಣದಲ್ಲಿ ಇತರರು ಶಾಮೀಲಾಗಿದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕಿದೆ . ಅಲ್ಲದೆ ಅಷ್ಟು ಪ್ರಮಾಣದ ನಾಣ್ಯಗಳನ್ನು ರಿಸರ್ವ್ ಬ್ಯಾಂಕಿನ ಪ್ರಾದೇಶಿಕ ಕಚೇರಿಗೆ ಕಳಿಸದಿರುವ ಬಗ್ಗೆ ಎಸ್‌ಬಿಐಯಿಂದ ವಿವರಣೆ ಕೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News