4759 ಕೋ. ರೂ. ತೆರಿಗೆ ವಾಪಸು ಕೋರಿದ್ದ ವೊಡಾಪೋನ್ ಅರ್ಜಿ ವಜಾಗೊಳಿಸಿದ ಹೈಕೋರ್ಟ್

Update: 2018-12-16 14:09 GMT

ಹೊಸದಿಲ್ಲಿ, ಡಿ.16: 2014-15ರಿಂದ 2017-18ರ ಅವಧಿಗೆ ಸಂಬಂಧಿಸಿ ತನಗೆ ವಾಪಸು ಸಿಗಬೇಕಿರುವ (ರಿಫಂಡ್) 4,759 ಕೋಟಿ ರೂ.ಗೂ ಹೆಚ್ಚಿನ ಮೊತ್ತವನ್ನು ಪಾವತಿಸುವ ಪ್ರಕ್ರಿಯೆಯನ್ನು ತ್ವರಿತವಾಗಿ ನಡೆಸುವಂತೆ ಆದಾಯ ತೆರಿಗೆ ಇಲಾಖೆಗೆ ಸೂಚಿಸುವಂತೆ ಕೋರಿ ವೊಡಾಫೋನ್ ಸಂಸ್ಥೆ ಸಲ್ಲಿಸಿದ್ದ ಅರ್ಜಿಯನ್ನು ದಿಲ್ಲಿ ಹೈಕೋರ್ಟ್ ವಜಾಗೊಳಿಸಿದೆ.

ಸಂಸ್ಥೆ ಪಾವತಿಸಬೇಕಿರುವ ತೆರಿಗೆ ಮೊತ್ತ ಬಹಳಷ್ಟಿದೆ. ಅಲ್ಲದೆ 2014-15ರಿಂದ 2017-18ರ ಅವಧಿಯ ತೆರಿಗೆ ಪರಿಷ್ಕರಿಸಿದ ಬಳಿಕ ಬರಬೇಕಿರುವ ತೆರಿಗೆ ಮೊತ್ತದ ಪ್ರಮಾಣ ಮತ್ತಷ್ಟು ಹೆಚ್ಚಬಹುದು. ಈ ಕಾರಣದಿಂದ ತೆರಿಗೆ ವಾಪಸು ಸಾಧ್ಯವಿಲ್ಲ ಎಂದು ಆದಾಯ ಇಲಾಖೆ ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿತು. ತೆರಿಗೆ ಇಲಾಖೆಯ ಹೇಳಿಕೆಯಲ್ಲಿ ವಾಸ್ತವಾಂಶವಿದೆ ಎಂದು ತಿಳಿಸಿದ ನ್ಯಾಯಾಧೀಶರಾದ ಎಸ್.ರವೀಂದ್ರ ಭಟ್ ಮತ್ತು ಪ್ರತೀಕ್ ಜಲನ್ ಅವರಿದ್ದ ನ್ಯಾಯಪೀಠ, ಬರಬೇಕಿರುವ ತೆರಿಗೆ ಮೊತ್ತಕ್ಕೆ ರಿಫಂಡ್ ಮೊತ್ತವನ್ನು ಹೊಂದಾಣಿಕೆ ಮಾಡಿಕೊಳ್ಳುವ ಹಕ್ಕು ತೆರಿಗೆ ಇಲಾಖೆಗೆ ಇದೆ ಎಂದು ತಿಳಿಸಿ ವೊಡಾಫೋನ್‌ನ ಅರ್ಜಿಯನ್ನು ವಜಾಗೊಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News