ವಿಮಾನ, ಹಡಗು ಪ್ರಯಾಣದ ಸಂದರ್ಭ ಮೊಬೈಲ್ ಫೋನ್ ಬಳಕೆ: ಕಾಯ್ದೆ ಜಾರಿಗೆ ನಿರ್ಧಾರ

Update: 2018-12-16 14:11 GMT

ಹೊಸದಿಲ್ಲಿ, ಡಿ.16: ಭಾರತದ ಭೂಪ್ರದೇಶದಲ್ಲಿ ವಿಮಾನ ಅಥವಾ ಹಡಗಿನಲ್ಲಿ ಪ್ರಯಾಣಿಸುವ ಸಂದರ್ಭ ಮೊಬೈಲ್ ಫೋನ್‌ನಲ್ಲಿ ಕರೆ ಮಾಡುವುದು ಅಥವಾ ಇಂಟರ್‌ನೆಟ್ ಸೌಲಭ್ಯ ಬಳಸಿಕೊಳ್ಳಲು ಅನುಕೂಲವಾಗುವ ಕಾಯ್ದೆಯನ್ನು ಜಾರಿಗೊಳಿಸಲು ಸರಕಾರ ನಿರ್ಧರಿಸಿದೆ.

‘ದಿ ಫ್ಲೈಟ್ ಆ್ಯಂಡ್ ಮೆರಿಟೈಮ್ ಕನೆಕ್ಟಿವಿಟಿ ರೂಲ್ಸ್ , 2018’ ಎಂಬ ಹೆಸರಿನ ಈ ಕಾಯ್ದೆಯನ್ನು ಅಧಿಕೃತ ಗೆಜೆಟ್‌ನಲ್ಲಿ ಪ್ರಕಟಿಸಿದ ದಿನದಂದು ಜಾರಿಗೆ ಬರುತ್ತದೆ ಎಂದು ಸರಕಾರ ಡಿ.14ರಂದು ಪ್ರಕಟಿಸಿದ ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಭಾರತದಲ್ಲಿ ಕಾರ್ಯನಿರ್ವಹಿಸುವ ದೇಶೀಯ ಮತ್ತು ವಿದೇಶಿ ವಾಯುಯಾನ ಮತ್ತು ಸಮುದ್ರಯಾನ ಸಂಸ್ಥೆಗಳು , ಭಾರತದ ಲೈಸೆನ್ಸ್ ಪಡೆದಿರುವ ಟೆಲಿಕಾಂ ಸಂಸ್ಥೆಗಳ ಸಹಯೋಗದಿಂದ ಈ ಸೇವೆಯನ್ನು ಒದಗಿಸಬಹುದಾಗಿದೆ. ನೆಲದ ಮೇಲೆ ಅಥವಾ ಉಪಗ್ರಹವನ್ನು ಬಳಸಿಕೊಂಡು ಸಂಪರ್ಕ ವ್ಯವಸ್ಥೆಯನ್ನು ಕಲ್ಪಿಸಬಹುದಾಗಿದೆ.

‘ಇನ್‌ಫ್ಲೈಟ್ ಆ್ಯಂಡ್ ಮೆರಿಟೈಮ್ ಕನೆಕ್ಟಿವಿಟಿ(ಐಎಫ್‌ಎಂಸಿ) ಸೇವೆಗೆ ಉಪಗ್ರಹ ವ್ಯವಸ್ಥೆಯನ್ನು ಬಳಸುವ ಸಂದರ್ಭ ಟೆಲಿಗ್ರಾಫ್ ಸಂದೇಶವು ಭಾರತದಲ್ಲಿ ಸ್ಥಾಪಿಸಲಾಗಿರುವ ‘ಸೆಟಿಲೈಟ್ ಗೇಟ್‌ವೇ ಅರ್ಥ್ ಸ್ಟೇಷನ್’ ಮೂಲಕ ಹಾದು ಬರುತ್ತದೆ. ಈ ಕೇಂದ್ರಗಳು ಎನ್‌ಎಲ್‌ಡಿ(ನ್ಯಾಷನಲ್ ಲಾಂಗ್ ಡಿಸ್ಟೆನ್ಸ್)ನೊಂದಿಗೆ ಅಂತರ್ ಸಂಪರ್ಕ ಹೊಂದಿರುತ್ತವೆ. ಭಾರತೀಯ ವಾಯುಪ್ರದೇಶದೊಳಗೆ 3,000 ಕಿ.ಮೀ. ಎತ್ತರಕ್ಕೆ ಏರಿದ ಬಳಿಕ ಐಎಫ್‌ಎಂಸಿ ಸೇವೆಗೆ ಚಾಲನೆ ದೊರಕುತ್ತದೆ. ವಾರ್ಷಿಕ 1 ರೂಪಾಯಿ ಶುಲ್ಕ ವಿಧಿಸಿ ಐಎಫ್‌ಎಂಸಿ ಲೈಸೆನ್ಸ್ ನೀಡಲಾಗುತ್ತದೆ. ಲೈಸೆನ್ಸ್‌ನ ಅವಧಿ 10 ವರ್ಷ. ಸೇವೆಯಿಂದ ಒದಗಿದ ಆದಾಯದ ಆಧಾರದಲ್ಲಿ ಲೈಸೆನ್ಸ್ ಶುಲ್ಕ ಹಾಗೂ ತರಂಗಾಂತರ ಶುಲ್ಕವನ್ನು ಲೈಸೆನ್ಸ್‌ದಾರರು ಪಾವತಿಸಬೇಕು ಎಂದು ಅಧಿಸೂಚನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News