ಸಾಮೂಹಿಕ ಅತ್ಯಾಚಾರಕ್ಕೊಳಗಾದ ಯುವತಿಗೆ ನ್ಯಾಯ ಕಲ್ಪಿಸಲು ಆಗ್ರಹ: ಮಾಸಿಕ ಎಸ್ಸಿ-ಎಸ್ಟಿ ಸಭೆ

Update: 2018-12-16 14:26 GMT

ಮಂಗಳೂರು, ಡಿ.16: ತೋಟ ಬೆಂಗ್ರೆಯಲ್ಲಿ ಸಾಮೂಹಿಕ ಅತ್ಯಾಚಾರಕ್ಕೆ ಒಳಾಗದ ಸಂತ್ರಸ್ತ ಯುವತಿಗೆ ಪುನರ್ವಸತಿ ಕಲ್ಪಿಸಲು ಹಾಗೂ ಅತಿ ಶೀಘ್ರದಲ್ಲಿ ಆಕೆಗೆ ನ್ಯಾಯ ದೊರಕಿಸಲು ಪೊಲೀಸರು ಪ್ರಯತ್ನಿಸಬೇಕು ಎಂದು ದಲಿತ ನಾಯಕರು ಮಂಗಳೂರು ಪೊಲೀಸ್ ಕಮಿಷನರ್ ಕಚೇರಿಯಲ್ಲಿ ರವಿವಾರ ನಡೆದ ದಲಿತ ಕುಂದುಕೊರತೆ ಮಾಸಿಕ ಸಭೆಯಲ್ಲಿ ಆಗ್ರಹಿಸಿದರು.

ದಲಿತ ಸಂಘಟನೆಯ ನಾಯಕರ ಆಗ್ರಹಕ್ಕೆ ಪ್ರತಿಕ್ರಿಯಿಸಿದ ಸಭಾಧ್ಯಕ್ಷತೆ ವಹಿಸಿದ್ದ ಡಿಸಿಪಿ ಉಮಾ ಪ್ರಶಾಂತ್ ತಣ್ಣೀರುಬಾವಿ-ಬೆಂಗ್ರೆ ಪ್ರದೇಶದಲ್ಲಿ ಮಾದಕ ವ್ಯಸನಿಗಳನ್ನು ಮಟ್ಟ ಹಾಕಲು ಇಲಾಖೆ ಸೂಕ್ತ ಕ್ರಮಕೈಗೊಳ್ಳುತ್ತಲಿವೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆದಷ್ಟು ಬೇಗನೆ ಚಾರ್ಜ್‌ಶೀಟ್ ಸಲ್ಲಿಸುವಂತೆ ತನಿಖಾಧಿಕಾರಿಗೆ ಸೂಚಿಸಲಾಗಿದೆ. ಸಂತ್ರಸ್ತ ಯುವತಿ 7ನೇ ತರಗತಿ ಮಾತ್ರ ಓದಿದ್ದು, ಆಕೆಯ ವಿದ್ಯಾರ್ಹತೆಗೆ ಸೂಕ್ತವಾದ ಉದ್ಯೋಗಾವಕಾಶ ಕಲ್ಪಿಸಲು ಪ್ರಯತ್ನಿಸಲಾಗುವುದು ಎಂದರು.

ಸಾಮೂಹಿಕ ಅತ್ಯಾಚಾರ ಪ್ರಕರಣದ ಬಗ್ಗೆ ವರದಿ ಬಂದಿಲ್ಲ. ವರದಿ ಬಂದ ತಕ್ಷಣ ಆರೋಪ ಪಟ್ಟಿ ತಯಾರಿಸಿ ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು. ಪೊಲೀಸ್ ಇಲಾಖೆಯ ಕಡೆಯಿಂದ ಯಾವುದೇ ವಿಳಂಬ ಮಾಡಲಾಗುತ್ತಿಲ್ಲ. ಆಕೆಗೆ ಈಗಾಗಲೇ ಪರಿಹಾರವಾಗಿ 4.12 ಲಕ್ಷ ರೂ. ದೊರೆತಿದ್ದು, ಚಾರ್ಜ್‌ಶೀಟ್ ಸಲ್ಲಿಕೆಯಾದ ಬಳಿಕ ಇನ್ನಷ್ಟು ಪರಿಹಾರ ಸಿಗುವ ನಿರೀಕ್ಷೆ ಇದೆ ಎಂದು ನಾಗರಿಕ ಹಕ್ಕುಗಳ ಜಾರಿ ಘಟಕದ (ಸಿಆರ್‌ಇಸಿ) ಪೊಲೀಸ್ ವರಿಷ್ಠಾಧಿಕಾರಿ ಡಾ. ಸಿ.ಬಿ. ವೇದಮೂರ್ತಿ ತಿಳಿಸಿದರು.

ದಲಿತ ಮುಖಂಡ ಸದಾಶಿವ ಪಣಂಬೂರು ಮಾತನಾಡಿ ಬೆಂಗ್ರೆ ಸೂಕ್ಷ್ಮ ಪ್ರದೇಶವಾಗಿದೆ. ಅಲ್ಲಿ ಹುಡುಗರು ಗಾಂಜಾ ವ್ಯಸನಿಗಳಾಗಿ ಮಾರ್ಪಟ್ಟಿದ್ದು, ಹಾಗಾಗಿ ಅಹಿತಕರ ಘಟನೆಗಳು ನಡೆಯುತ್ತಿವೆ. ಪ್ರವಾಸಿಗರು ಅಲ್ಲಿಗೆ ಭೇಟಿ ನೀಡಲು ಭಯಪಡುತ್ತಿದ್ದಾರೆ. ಪೊಲೀಸರು ರಸ್ತೆಯಲ್ಲಿ ಮಾತ್ರ ಗಸ್ತು ಕಾರ್ಯಾಚರಣೆ ನಡೆಸುತ್ತಿದ್ದು, ಬೀಚ್ ಪ್ರದೇಶಕ್ಕೆ ಹೋಗುತ್ತಿಲ್ಲ. ಪೊಲೀಸರ ನಿರ್ಲಕ್ಷೂ ಸಾಮೂಹಿಕ ಅತ್ಯಾಚಾರದಂತದ ಘಟನೆಗಳಿಗೆ ಕಾರಣ ಎಂದು ಆರೋಪಿಸಿದರಲ್ಲದೆ, ಸಂತ್ರಸ್ತೆಯ ಆಕೆಯ ಪ್ರಿಯಕರ ಎನ್ನಲಾದ ಯುವಕ ಉತ್ತರ ಭಾರತದವನಾಗಿದ್ದು, ಆತ ಯುವತಿಗೆ ಕೈಕೊಡದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಮನವಿ ಮಾಡಿದರು.

ತೋಟ ಬೆಂಗ್ರೆ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಪೊಲೀಸರು ಸ್ವಯಂ ಪ್ರೇರಣೆಯಿಂದ ಹೆಚ್ಚು ಮುತುವರ್ಜಿ ವಹಿಸಿ ಕ್ರಮ ಜರುಗಿಸಿದ್ದಾರೆ. ಅದಕ್ಕಾಗಿ ಪೊಲೀಸರನ್ನು ಅಭಿನಂದಿಸುತ್ತೇನೆ ಎಂದು ದಲಿತ ನಾಯಕ ಅಶೋಕ್ ಕೊಂಚಾಡಿ ಹೇಳಿದರು.

ತೊಕ್ಕೊಟ್ಟಿನ ಗಿರೀಶ್ ಕುಮಾರ್ ಮಾತನಾಡಿ, ತೊಕ್ಕೊಟ್ಟು ಓವರ್ ಬ್ರಿಡ್ಜ್ ಬಳಿ ದಲಿತ ಕಾಲನಿಯಲ್ಲಿ ಸುಮಾರು 100 ರಷ್ಟು ಮನೆಗಳಿವೆ. ಕಾಲನಿಯ ರಸ್ತೆಯು ಹೆದ್ದಾರಿಗೆ ಸಂಪರ್ಕಿಸುವಲ್ಲಿ ವಾಹನ ದಟ್ಟಣೆಯ ಸಮಸ್ಯೆಯಿದ್ದು, ಬ್ಯಾರಿಕೇಡ್ ಅಳವಡಿಸಬೇಕು. ಈ ಕಾಲನಿಯಲ್ಲಿ ಹಾದು ಹೋಗುವ ರಸ್ತೆಯಲ್ಲಿ ರಾತ್ರಿ ವೇಳೆ ಹಲವರು ಮದ್ಯಸೇವನೆ ಮಾಡಿ ಬಾಟಲಿಗಳನ್ನು ಎಸೆಯುತ್ತಾರೆ. ಗಾಂಜಾ ಹಾವಳಿ ಕೂಡ ತಲೆಯೆತ್ತಿದೆ. ಕೆಲವು ಮಂದಿ ರಸ್ತೆಯಲ್ಲಿ ವಾಹನ ನಿಲುಗಡೆ ಮಾಡುತ್ತಾರೆ ಎಂದು ದೂರಿದರು. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಡಿಸಿಪಿ ಹೇಳಿದರು.

ನನ್ನ ಪತಿ ಕಟ್ಟಡದಿಂದ ಬಿದ್ದು ಸಾವನ್ನಪ್ಪಿ 5 ವರ್ಷಗಳಾಯಿತು. ನಾಲ್ಕು ಮಕ್ಕಳಿವೆ. ಸಂಸಾರ ಸಾಗಿಸುವುದೇ ದುಸ್ತರವಾಗಿದ್ದು, ಇತ್ತೀಚೆಗೆ ಕಣ್ಣಿನ ಶಸ್ತ್ರಚಿಕಿತ್ಸೆಯೂ ಆಗಿ ಬದುಕು ನರಕವಾಗಿದೆ. 5 ವರ್ಷಗಳಿಂದ ಅಲೆದಾಟ ನಡೆಸುತ್ತಿದ್ದರೂ ಸಿಗಬೇಕಾದ ಪರಿಹಾರಧನ ಸಿಕ್ಕಿಲ್ಲ ಎಂದು ಎಲ್ಲಮ್ಮ ಎಂಬವರು ದೂರಿದರು.

ಈ ಪ್ರಕರಣದ ಕುರಿತು ಗಮನಹರಿಸಿ ಸೂಕ್ತ ಕ್ರಮ ವಹಿಸುವಂತೆ ಕಂಕನಾಡಿ ನಗರ ಪೊಲೀಸ್ ಇನ್ಸ್‌ಪೆಕ್ಟರ್‌ಗೆ ಡಿಸಿಪಿ ಸೂಚಿಸಿದರು. ಸೂಟರ್‌ಪೇಟೆ 5ನೇ ಕ್ರಾಸ್‌ನಲ್ಲಿ ರಸ್ತೆ ಬದಿಯಲ್ಲೇ ಮದ್ಯಸೇವನೆ ಮಾಡುತ್ತಿದ್ದು, ಇದರಿಂದ ಸ್ಥಳೀಯ ಹೆಣ್ಮ್ಮಕ್ಕಳು ನಡೆದಾಡಲು ಅಸಾಧ್ಯವಾಗಿದೆ ಎಂದು ಸ್ಥಳೀಯರೊಬ್ಬರು ದೂರಿದರು. ದಲಿತ ಮುಖಂಡರಾದ ಉಮೇಶ್, ಮಾಧವ, ಗುಣಪಾಲ ವಿವಿಧ ವಿಷಯಗಳ ಬಗ್ಗೆ ಗಮನ ಸೆಳೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News