‘ಆರ್ಸೊ’ ವಿಶೇಷ ಸಂಚಿಕೆ ಬಿಡುಗಡೆ

Update: 2018-12-16 14:35 GMT

ಮಂಗಳೂರು, ಡಿ.16: ಎಲ್ಲಾ ಸಮಾಜಗಳಲ್ಲಿರುವಂತೆ ಕೊಂಕಣಿ ಸಮಾಜದಲ್ಲೂ ಸಾಕಷ್ಟು ಮೂಢನಂಬಿಕೆಗಳು ಚಾಲ್ತಿಯಲ್ಲಿವೆ. ಆದರೆ ದೇಶಕ್ಕೆ ಡಿ.ಡಿ. ಕೋಸಂಬಿಯಂತ ವಿಚಾರವಾದಿಯನ್ನೂ, ಕುದ್ಮಲ್ ರಂಗರಾಯರಂತಹ ಸಮಾಜ ಸುಧಾರಕರನ್ನೂ ಕೊಟ್ಟದ್ದು ಕೊಂಕಣಿ ಸಮಾಜವೇ. ಕೊಂಕಣಿ ಮಾತೃಭಾಷಿಕರಲ್ಲಿ ಶೇ.78 ಜನ ಬಹುಭಾಷಿಕರು. ಸರಾಸರಿ ನಾಲ್ಕೈದು ಭಾಷೆಗಳನ್ನು ಮಾತಾಡಬಲ್ಲವರು. ಸಾಹಿತ್ಯ, ವಿಚಾರ ಮತ್ತು ವಿಜ್ಞಾನಕ್ಕೆ ಕೊಂಕಣಿ ಭಾಷಿಕರ ಕೊಡುಗೆ ಅನನ್ಯವಾದುದು ಎಂದು ವಿಚಾರವಾದಿ ಪ್ರೊ. ನರೇಂದ್ರ ನಾಯಕ್ ಅಭಿಪ್ರಾಯಪಟ್ಟರು.

ಸಹೋದಯ ಸಭಾಂಗಣದಲ್ಲಿ ‘ಆರ್ಸೊ’ ಕೊಂಕಣಿ ಪತ್ರಿಕೆಯ ವಿಶೇಷ ಸಂಚಿಕೆಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡುತ್ತಿದ್ದರು.
ಈ ಸಂದರ್ಭ ವಿಶ್ವ ಕೊಂಕಣಿ ಕೇಂದ್ರ - ಪೊಯೆಟಿಕ್ಸ್ ಕೊಂಕಣಿ ಕವಿತಾ ಸ್ಪರ್ಧೆಯ ವಿಜೇತರಿಗೆ ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ ಬಸ್ತಿ ವಾಮನ್ ಶೆಣೈ ಬಹುಮಾನಗಳನ್ನು ವಿತರಿಸಿದರು. ರೋಹನ್ ಅಡ್ಕಬಾರೆ ಅವರ ‘ಗ್ರಾಸ್’ ಕವಿತೆಗೆ ಮೊದಲ ಬಹುಮಾನ (5,000 ರೂ), ತಾರಾ ಲವೀನಾ ಫೆರ್ನಾಂಡಿಸ್ ಕಿನ್ನಿಕಂಬ್ಳ ಅವರ ‘ಜಿಯೆಂವ್ಕ್ ಆಶೆತಾಂ ಅಪ್ಲೆಂಪಣ್’ ಕವಿತೆಗೆ ದ್ವಿತೀಯ (ರೂ.3,000)ಬಹುಮಾನ ಹಾಗೂ ಜೈಸನ್ ಜೆ. ಸಿಕ್ವೇರಾ ಗುರುಪುರ ಅವರ ‘ಕಚ್ಯಾ ಪಾತ್ಕಾಂಚಿ ಪಟ್ಟಿ’ ಕವಿತೆಗೆ ತೃತೀಯ (2,000 ರೂ.) ಬಹುಮಾನ ವಿತರಿಸಲಾಯಿತು.

ಶಕುಂತಲಾ ಆರ್. ಕಿಣಿ ಮತ್ತು ಫಾ. ಜೊ.ಸಿ.ಸಿದ್ದಕಟ್ಟೆ ಈ ಸ್ಪರ್ಧೆಯ ತೀರ್ಪುಗಾರರಾಗಿದ್ದರು. ಆರ್ಸೊ ಪತ್ರಿಕೆಯ ಸಂಪಾದಕ ವಿಲ್ಸನ್ ಕಟೀಲ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಹ ಸಂಪಾದಕ ರೋಶು ಬಜ್ಪೆಸ್ವಾಗತಿಸಿದರು. ಮೆಲ್ವಿನ್, ಕೊಳಲ್‌ಗಿರಿ ಕವಿತಾ ಸ್ಪರ್ಧೆಯ ಕುರಿತು ಮಾಹಿತಿ ನೀಡಿದರು. ಸ್ಟ್ಯಾನಿ ಬೆಳಾ ವಂದಿಸಿದರು. ಪ್ರಕಾಶಕ ಎಚ್ಚೆಮ್ ಪೆರ್ನಾಲ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News