ರಫೇಲ್ ಒಪ್ಪಂದವನ್ನು ಪರಾಮರ್ಶೆಗಾಗಿ ಜಂಟಿ ಸದನ ಸಮಿತಿಗೆ ಒಪ್ಪಿಸುವುದಿಲ್ಲ: ಅರುಣ್ ಜೇಟ್ಲಿ

Update: 2018-12-16 14:46 GMT

ಹೊಸದಿಲ್ಲಿ, ಡಿ.16: ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದವನ್ನು ಪರಾಮರ್ಶೆಗಾಗಿ ಜಂಟಿ ಸದನ ಸಮಿತಿಗೆ ಒಪ್ಪಿಸುವ ಸಾಧ್ಯತೆಯನ್ನು ಹಣಕಾಸು ಸಚಿವ ಅರುಣ್ ಜೇಟ್ಲೆ ಸ್ಪಷ್ಟವಾಗಿ ತಳ್ಳಿ ಹಾಕಿದ್ದಾರೆ.

ಕಾಂಗ್ರೆಸ್ ಮೇಲೆ ವಾಗ್ದಾಳಿ ನಡೆಸಿದ ಅವರು, ಒಪ್ಪಂದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಕ್ಲೀನ್ ಚಿಟ್ ನೀಡಿದ ಬಳಿಕ ಸಿಎಜಿಯವರ ಅಭಿಪ್ರಾಯ ಪ್ರಸ್ತುತವಲ್ಲ ಎಂದು ಪ್ರತಿಪಾದಿಸಿದರು.

ಚಳಿಗಾಲ ಅಧಿವೇಶನದ ಮೊದಲ ನಾಲ್ಕು ದಿನ ವಿವಿಧ ಪ್ರತಿಭಟನೆಗಳ ಕಾರಣ ಕಲಾಪಕ್ಕೆ ಅಡ್ಡಿಯಾದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ತರಾಟೆಗೆ ತೆಗೆದುಕೊಂಡ ಅವರು, ಉಳಿದ ಅಧಿವೇಶನ ಅವಧಿಯಲ್ಲಿ ಕಾಂಗ್ರೆಸ್ ಪಕ್ಷ ಕಲಾಪಕ್ಕೆ ಅಡ್ಡಿಪಡಿಸಲು ಆದ್ಯತೆ ನೀಡುತ್ತದೆಯೇ ವಿನಃ ರಫೇಲ್ ಬಗ್ಗೆ ಚರ್ಚೆ ನಡೆಯುವುದು ಆ ಪಕ್ಷಕ್ಕೆ ಬೇಕಾಗಿಲ್ಲ ಎಂದರು.

ಕಾಂಗ್ರೆಸ್ ಪಕ್ಷ ಸುಪ್ರೀಂ ಕೋರ್ಟ್ ‍ನಲ್ಲಿ ರಫೇಲ್ ಸಂಬಂಧ ಅರ್ಜಿ ಸಲ್ಲಿಸಿಲ್ಲ. ಜಂಟಿ ಸದನ ಸಮಿತಿಯ ಪರಾಮರ್ಶೆಗೆ ಒಪ್ಪಿಸಬೇಕು ಎಂಬ ಆಗ್ರಹಿಸುತ್ತಿದೆ. ಬಿಜೆಪಿ ಆಡಳಿತಾವಧಿಯಲ್ಲಿ ನಿಗದಿಪಡಿಸಿದ ಬೆಲೆ ಮತ್ತು ಯುಪಿಎ ಆಡಳಿತಾವಧಿಯಲ್ಲಿ ನಿಗದಿಪಡಿಸಿದ ಬೆಲೆಗಳ ತುಲನೆಯಾಗಬೇಕು ಎಂದು ಕೇಳುತ್ತಿದೆ. ಜತೆಗೆ ಈ ವಿಮಾನ ಉತ್ಪಾದನೆ ಕ್ಷೇತ್ರದಲ್ಲಿ ಅನುಭವ ಇಲ್ಲದ ಅನಿಲ್ ಅಂಬಾನಿ ಸಮೂಹವನ್ನು ಆಫ್‍ಸೆಟ್ ಪಾಲುದಾರನಾಗಿ ಆಯ್ಕೆ ಮಾಡಿರುವ ಬಗ್ಗೆಯೂ ತಗಾದೆ ತೆಗೆದಿದೆ.

“ಒಂದು ರಾಜಕೀಯ ಪಕ್ಷ ಎಂದೂ ಕೋರ್ಟ್ ನೀಡಿದ ಅಭಿಪ್ರಾಯದ ತದ್ವಿರುದ್ಧ ಅಭಿಪ್ರಾಯಕ್ಕೆ ಬರಲು ಸಾಧ್ಯವಿಲ್ಲ" ಎಂದು ಫೇಸ್‍ಬುಕ್ ನಲ್ಲಿ ಜೇಟ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News