'ವಿದೇಶಿ ಪ್ರವಾಸ, ಜಾಹೀರಾತು, ಮೂರ್ತಿ ನಿರ್ಮಾಣದ ಹಣದಿಂದ ಕನಿಷ್ಠ ಕೂಲಿ ನೀಡಿ'

Update: 2018-12-16 15:27 GMT

ಉಡುಪಿ, ಡಿ. 16: ನರೇಂದ್ರ ಮೋದಿ ಸರಕಾರ ವಿದೇಶಿ ಪ್ರವಾಸ, ಜಾಹೀರಾತು ಹಾಗೂ ಮೂರ್ತಿ ನಿರ್ಮಾಣಕ್ಕೆ ವ್ಯಯ ಮಾಡುವ ಹಣದಿಂದ ಬಿಸಿ ಯೂಟ ನೌಕರರಿಗೆ ಕನಿಷ್ಠ ಕೂಲಿ ನೀಡಬಹುದಾಗಿದೆ ಎಂದು ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಸಂಘದ ಮುಖಂಡೆ ಯಮುನಾ ಗಾಂವ್ಕರ್ ಕಾರವಾರ ಹೇಳಿದ್ದಾರೆ.

ಅಕ್ಷರ ದಾಸೋಹ ನೌಕರರನ್ನು ಸರಕಾರಿ ನೌಕರರೆಂದು ಪರಿಗಣಿಸಲು ಮತ್ತು ನೌಕರರಿಗೆ ಕೇಂದ್ರ ಸರಕಾರದ ಕನಿಷ್ಠ ವೇತನ 18 ಸಾವಿರ ರೂ. ನೀಡು ವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಸಂಘ (ಸಿಐಟಿಯು) ಉಡುಪಿ ಜಿಲ್ಲಾ ಸಮಿತಿಯ ವತಿಯಿಂದ ರವಿವಾರ ಬನ್ನಂಜೆ ನಾರಾಯಣ ಗುರು ಸಭಾಭವನದಲ್ಲಿ ಆಯೋಜಿಸಲಾದ ನಾಲ್ಕನೆ ಜಿಲ್ಲಾ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಎಲ್ಲ ಯೋಜನೆಯ ಕಾರ್ಮಿಕರನ್ನು ಕಾರ್ಮಿಕರೆಂದು ಪರಿಗಣಿಸಿ, ಇವರಿಗೆ ಶಾಸನಬದ್ಧವಾಗಿ ಕನಿಷ್ಟ ಕೂಲಿ, ಪಿಂಚಣಿ, ಸೇವಾ ನಿಯಮಾವಳಿ, ಸಾಮಾಜಿಕ ಸುರಕ್ಷೆ ನೀಡಬೇಕೆಂದು 2012ರಲ್ಲಿ ಇಂಡಿಯನ್ ಲೇಬರ್ ಕಾನ್ಫರೆನ್ಸ್ ಶಿಫಾರಸ್ಸು ಮಾಡಿತ್ತು. ನಂತರ ಬಂದ ಮೋದಿ ಸರಕಾರ ಇದನ್ನು ಈವರೆಗೆ ಜಾರಿ ಮಾಡಿಲ್ಲ. ವಿದೇಶ ಪ್ರವಾಸಕ್ಕೆ 2010 ಕೋಟಿ ರೂ., ಜಾಹೀರಾತುಗೆ 5 ಸಾವಿರ ಕೋಟಿ ರೂ., ಮೂರ್ತಿ ನಿರ್ಮಾಣಕ್ಕೆ 3 ಸಾವಿರ ಕೋಟಿ ರೂ. ವ್ಯಯಿಸುವ ಸರಕಾರಕ್ಕೆ ದೇಶದ ಜೀವಾಳ ಆಗಿರುವ ಬಿಸಿಯೂಟ ನೌಕರರಿಗೆ ಒಂದು ಸಾವಿರ ರೂ. ನೀಡಲು ಸಾಧ್ಯ ಇಲ್ಲವಾಗಿದೆ ಎಂದು ಅವರು ಟೀಕಿಸಿದರು.

ದೇಶದಲ್ಲಿನ ಬಡತನ, ಹಸಿವು, ಅಪೌಷ್ಠಿಕತೆಯನ್ನು ತಡೆಯುವುದಕ್ಕಾಗಿ ಸುಪ್ರೀಂ ಕೋರ್ಟ್ ಆದೇಶದಂತೆ ಬಿಸಿಯೂಟ ಯೋಜನೆ ಜಾರಿಗೆ ಬಂದಿದ್ದು, 2001-02ರಲ್ಲಿ ಈ ಯೋಜನೆ ಆರಂಭಗೊಂಡ ನಂತರ ರಾಜ್ಯದಲ್ಲಿ ಆರು ಮುಖ್ಯಮಂತ್ರಿಗಳು ಬದಲಾದರೂ ಬಿಸಿಯೂಟ ನೌಕರರ ಬದುಕಿನಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ. ಅದರ ಬದಲು ಅವರ ಸಂಕಷ್ಟ ಉಲ್ಬಣ ವಾಗಿದೆ ಎಂದು ಅವರು ಹೇಳಿದರು.

ಅಗತ್ಯವಸ್ತುಗಳ ಬೆಲೆಗಳು ಏರಿಕೆಯಾದರೂ ಬಿಸಿಯೂಟ ನೌಕರರ ಕೂಲಿ ಹೆಚ್ಚಾಗಿಲ್ಲ. ಅಕ್ಷರ ದಾಸೋಹದ ಇನ್ನಷ್ಟು ಬಲವರ್ಧನೆ ಆಗಬೇಕಾಗಿದೆ. ಸರಕಾರ ಈ ಯೋಜನೆಗೆ ಪೌಷ್ಠಿಕ ಆಹಾರವನ್ನು ಹೆಚ್ಚುವರಿಯಾಗಿ ನೀಡಬೇಕು. ನೌಕರರ ಕೂಲಿ ಏರಿಕೆಯಾಗಬೇಕು. ಈ ನಿಟ್ಟಿನಲ್ಲಿ ಹೋರಾಟ ಮಾಡಬೇಕಾಗಿದೆ ಎಂದು ಅವರು ಹೇಳಿದರು.

ಭಾರತದಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆಯು ಸೊಮಾಲಿಯ ದೇಶದ ಮಕ್ಕಳ ಸಂಖ್ಯೆಗೆ ಸಮಾನವಾಗಿದೆ. ಹೀಗೆ ಭಾರತದಲ್ಲಿ ಬಹಳ ಸಂಖ್ಯೆಯಲ್ಲಿ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಅದನ್ನು ನಿವಾರಣೆ ಮಾಡಲು ದೇಶದಲ್ಲಿ 20 ಲಕ್ಷ ಹಾಗೂ ರಾಜ್ಯದಲ್ಲಿ 1.18 ಲಕ್ಷ ಬಿಸಿಯೂಟ ನೌಕರರು ಶ್ರಮಿಸುತ್ತಿದ್ದಾರೆ ಎಂದರು.

ಅಧ್ಯಕ್ಷತೆಯನ್ನು ರಾಜ್ಯ ಅಕ್ಷರ ದಾಸೋಹ ಸಂಘದ ಉಡುಪಿ ಜಿಲ್ಲಾಧ್ಯಕ್ಷ ದಾಸು ಭಂಡಾರಿ ವಹಿಸಿದ್ದರು. ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ. ಶಂಕರ್, ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಂದಾ, ಕುಂದಾಪುರ ತಾಲೂಕು ಅಧ್ಯಕ್ಷೆ ಜಯಶ್ರೀ, ಕಾರ್ಯದರ್ಶಿ ಲತಾ, ಕಾರ್ಕಳ ತಾಲೂಕು ಅಧ್ಯಕ್ಷೆ ಬೇಬಿ ಭಂಡಾರಿ, ಕಾರ್ಯದರ್ಶಿ ಸುನಿತಾ ಶೆಟ್ಟಿ, ಉಡುಪಿ ಕಾರ್ಯ ದರ್ಶಿ ಕಮಲಾ ಉಪಸ್ಥಿತರಿದ್ದರು.

ತಮಿಳುನಾಡು, ಕೇರಳ ಮಾದರಿ ಜಾರಿಗೆ ಬರಲಿ

2001-02ರಲ್ಲಿ ಆರಂಭಗೊಂಡ ಅಕ್ಷರ ದಾಸೋಹವನ್ನು ಹಂತಹಂತವಾಗಿ ಖಾಸಗೀಕರಣ ಪೆಂಡಭೂತದಂತೆ ಆವರಿಸಿಕೊಳ್ಳುತ್ತ ಬಂತು. ಗುತ್ತಿಗೆದಾರರಿಗೆ ವಹಿಸಿಕೊಂಡು ಸರಕಾರ ಎಲ್ಲ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಕೆಲಸ ಮಾಡುತ್ತಿದೆ ಎಂದು ಹೇಳಿದ ಯಮುನಾ ಗಾಂವ್ಕರ್, ಬಿಸಿಯೂಟ ನೌಕರ ರನ್ನು ತಮಿಳುನಾಡು ಮಾದರಿಯಲ್ಲಿ ಡಿ ಗ್ರೂಪ್ ನೌಕರನ್ನಾಗಿ ಪರಿಗಣಿಸಬೇಕು ಹಾಗೂ ಕೇರಳ ಮಾದರಿಯಲ್ಲಿ ಅವರಿಗೆ ಕೂಲಿ, ಪಿಂಚಣಿ ಹಾಗೂ ಪಡಿತರ ವನ್ನು ನೀಡಬೇಕು ಎಂದು ಒತ್ತಾಯಿಸಿದರು.

ಬಿಸಿಯೂಟ ಕೇಂದ್ರ ಸರಕಾರ ಯೋಜನೆಯಾಗಿದ್ದು, ಕೇಂದ್ರ ಶೇ. 75 ಹಾಗೂ ರಾಜ್ಯ ಶೇ. 25ರ ಅನುಪಾತದಲ್ಲಿ ಅನುದಾನ ಕೊಡಬೇಕಾಗಿತ್ತು. ಆದರೆ ಇಂದು ಕೇಂದ್ರ ಸರಕಾರ ಈ ಯೋಜನೆಯ ಅನುದಾನಗಳನ್ನು ಕಡಿತಗೊಳಿಸುತ್ತಿದೆ. ಸರಕಾರದ ಬೊಕ್ಕಸದಲ್ಲಿರುವ ಹಣವನ್ನು ಶ್ರೀಮಂತರಿಗೆ ಕೊಡುತ್ತಿದೆ ಎಂದು ಅವರು ಕಟುವಾಗಿ ಟೀಕಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News