‘ಸಾವಯವ ಸಂತೆ’ ಪುನರಾರಂಭ: ಉತ್ಪನ್ನ ಖರೀದಿಗೆ ಮುಗಿಬಿದ್ದ ಗ್ರಾಹಕರು

Update: 2018-12-16 15:28 GMT

ಉಡುಪಿ, ಡಿ.16: ಜಿಲ್ಲಾ ಕೃಷಿ ಇಲಾಖೆ, ತೋಟಗಾರಿಕಾ ಇಲಾಖೆ, ದಕ್ಷಿಣ ಕನ್ನಡ, ಚಿಕ್ಕಮಗಳೂರು ಮತ್ತು ಉಡುಪಿ ಜಿಲ್ಲಾ ಪ್ರಾಂತೀಯ ಸಾವಯವ ಕೃಷಿಕರ ಒಕ್ಕೂಟ ಹಾಗೂ ಉಡುಪಿ ಗೋಮಾತಾ ಆರ್ಗ್ಯಾನಿಕ್ಸ್‌ಗಳ ಸಂಯುಕ್ತ ಆಶ್ರಯದಲ್ಲಿ ದೊಡ್ಡಣಗುಡ್ಡೆಯಲ್ಲಿರುವ ತೋಟಗಾರಿಕಾ ಇಲಾಖೆ ಆವರಣ ದಲ್ಲಿ ಇಂದಿನಿಂದ ಪುನರಾರಂಭಗೊಂಡ ‘ಸಾವಯವ ಸಂತೆ’ಗೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಪ್ರತಿ ರವಿವಾರ ನಡೆಯಲಿರುವ ಸಾವಯವ ಸಂತೆಯು ಇಂದು ಬೆಳಗ್ಗೆ 7ರಿಂದ ಆರಂಭಗೊಂಡು 11ಗಂಟೆಯವರೆಗೆ ನಡೆಯಿತು. ಈ ಮಧ್ಯೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ ಗ್ರಾಹಕರು ಸಾವಯವ ತರಕಾರಿ ಮತ್ತು ಸಿರಿಧಾನ್ಯ ಸೇರಿದಂತೆ ಸಾವಯವ ಉತ್ಪನ್ನಗಳ ಖರೀದಿಗೆ ಮುಗಿಬಿದ್ದಿದ್ದರು. ಸುವರ್ಣಗಡ್ಡೆ, ತೆಂಗು, ಬೂದಿ ಗುಂಬಳ, ಅಮ್ಟೆ ಕಾಯಿ, ಅರಿವೆ ಸೊಪ್ಪು, ಬಸಲೆ ಸೊಪ್ಪು, ಊರಿನ ಬೆಂಡೆ, ಬಿಳಿ ಅರಿವೆ, ಅವರೆಕಾಯಿ, ಸಬ್ಬಸಿಗೆ ಸೊಪ್ಪು, ಮೆಂತೆ ಸೊಪ್ಪು, ಊರಿನ ಕಾಟ್ ಬಾಳೆ ಕಾಯಿ, ಪಪ್ಪಾಯಿ ಹಣ್ಣುಗಳು ಹೆಚ್ಚು ಮಾರಾಟ ವಾದವು.

ಅದೇ ರೀತಿ ರಜಾಮುಡಿ, ನವರಅಕ್ಕಿ, ಕೆಂಪಕ್ಕಿ, ಬಿದಿರಕ್ಕಿ, ಸೋನಾ ಮಸೂರಿ, ಕುಚ್ಚಲಕ್ಕಿ, ದೋಸೆ ಅಕ್ಕಿ, ಅಕ್ಕಿ ರವಾ, ಅಕ್ಕಿ ಹಿಟ್ಟು, ಕೆಂಪು ದಪ್ಪ ಅವಲಕ್ಕಿ, ತೆಳು ಅವಲಕ್ಕಿ, ಬೇಳೆಕಾಳುಗಳು, ಸಾವಯವ ಬೆಲ್ಲ, ಬೆಲ್ಲದ ಪೌಡರ್, ಜೇನುತುಪ್ಪ, ದೇಶೀ ದನದ ತುಪ್ಪ ಹಾಗೂ ಇತರ ಉತ್ಪನ್ನಗಳಿಗೂ ಉತ್ತಮ ಬೇಡಿಕೆ ವ್ಯಕ್ತ ವಾದವು. ಉಡುಪಿ ನಗರ, ದೊಡ್ಡಣಗುಡ್ಡೆ, ಕುಂಜಿಬೆಟ್ಟು, ಕಡಿಯಾಳಿ ಸೇರಿ ದಂತೆ ವಿವಿಧ ಪ್ರದೇಶಗಳಿಂದ ಗ್ರಾಹಕರು ಸಂತೆಗೆ ಆಗಮಿಸಿದ್ದರು.

‘ಸಾವಯವ ಸಂತೆಯಲ್ಲಿ ಸಾವಯವ ಕೃಷಿಕರ ಒಕ್ಕೂಟದ 8 ರಿಂದ 10 ವ್ಯಾಪಾರಿಗಳು ತರಕಾರಿ, ಹಣ್ಣು, ಧಾನ್ಯಗಳನ್ನು ಮಾರಾಟ ಮಾಡಿದ್ದಾರೆ. ಪಪ್ಪಾಯಿ, ಸೂರನಗೆಡ್ಡೆ, ಸಿರಿಧಾನ್ಯ ಉತ್ಪನ್ನಗಳು ಸಾಕಷ್ಟು ಪ್ರಮಾಣದಲ್ಲಿ ಮಾರಾಟವಾಗಿವೆ. ಇಂದಿನ ಸಂತೆಯಲ್ಲಿ ಸುಮಾರು 90 ಸಾವಿರ ರೂ.ನಿಂದ ಒಂದು ಲಕ್ಷ ರೂ.ವರೆಗೆ ವ್ಯಾಪಾರ ನಡೆದಿದೆ ಎಂದು ಒಕ್ಕೂಟದ ಜಿ.ಪಿ ಸತೀಶ್ ತಿಳಿಸಿದ್ದಾರೆ.

ಕಳೆದ ವರ್ಷ ಅ.15ರಂದು ಪ್ರಾರಂಭಗೊಂಡ ಸಾವಯವ ಸಂತೆಯು ನಂತರ ಸಾವಯವ ಉತ್ಪನ್ನಗಳ ಕೊರತೆಯಿಂದ ಸ್ಥಗಿತಗೊಂಡಿತ್ತು. ಈ ವರ್ಷ ಮತ್ತೆ ಅಕ್ಟೋಬರ್ ತಿಂಗಳಲ್ಲಿ ಆರಂಭಿಸುವ ಉದ್ದೇಶ ಹೊಂದಿದ್ದರೂ ಮಳೆ ವೈಫರಿತ್ಯದಿಂದ ಕೃಷಿಗೆ ಉಂಟಾದ ಹಾನಿಯಿಂದ ಎರಡು ತಿಂಗಳ ಕಾಲ ವಿಳಂಬವಾಗಿ ಆರಂಭಿಸಲಾಯಿತು. ಇನ್ನು ಪ್ರತಿ ರವಿವಾರವೂ ಈ ಸಂತೆ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News