ವಿಕಲಚೇತನರ ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯ: ಕರ್ನಾಟಕ ಚಾಂಪಿಯನ್

Update: 2018-12-16 15:37 GMT

ಮಂಗಳೂರು, ಡಿ.16: ನಗರದ ಮಾತೃ ಪ್ರತಿಷ್ಠಾನ ಸಂಸ್ಥೆಯು ರಾಜ್ಯ ವಿಕಲಚೇತನ ಕಬಡ್ಡಿ ಸಂಸ್ಥೆ ಮತ್ತು ಯುವಜನ ಕ್ರೀಡಾ ಇಲಾಖೆ ಸಹಯೋಗದಲ್ಲಿ ನಗರದ ಕರಾವಳಿ ಉತ್ಸವ ಮೈದಾನದಲ್ಲಿ ಆಯೋಜಿಸಿದ ಎರಡು ದಿನಗಳ ವಿಕಲಚೇತನರ ರಾಷ್ಟ್ರಮಟ್ಟದ ಕಬಡ್ಡಿಯಲ್ಲಿ ರವಿವಾರ ಕರ್ನಾಟಕ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಫೈನಲ್‌ನಲ್ಲಿ ಕರ್ನಾಟಕದ ಮುಂದೆ ಸೋಲುಂಡ ಮಹಾರಾಷ್ಟ್ರ ತಂಡ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಡೆದುಕೊಂಡಿದೆ. ಅಂತಿಮ ಸುತ್ತಿನ ಪಂದ್ಯದಲ್ಲಿ 37-14 ಅಂಕಗಳ ಅಂತರದಲ್ಲಿ ಏಕಮುಖವಾಗಿ ಸಾಗಿದ್ದು, ಕರ್ನಾಟಕ ನಿರಾಯಾಸ ಗೆಲುವು ಸಾಧಿಸಿತು. ಕರ್ನಾಟಕ, ಆಂಧ್ರಪ್ರದೇಶ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ತೆಲಂಗಾಣ, ಗೋವಾ, ಜಾರ್ಖಂಡ್, ತಮಿಳುನಾಡು, ಮಧ್ಯಪ್ರದೇಶ, ಪಾಂಡಿಚೇರಿ, ರಾಜಸ್ಥಾನ, ಕೇರಳ ಸಹಿತ ರಾಷ್ಟ್ರದ ವಿವಿಧೆಡೆಗಳಿಂದ 12 ತಂಡಗಳು ಕೂಟದಲ್ಲಿ ಪಾಲ್ಗೊಂಡಿದ್ದವು.

ಚಾಂಪಿಯನ್ ಆಗಿ ಹೊರಹೊಮ್ಮಿದ ಕರ್ನಾಟಕ ತಂಡವು 20 ಸಾವಿರ ರೂ.ಹಾಗೂ ರನ್ನರ್ ಅಪ್ ಮಹಾರಾಷ್ಟ್ರ ತಂಡವು 10 ಸಾವಿರ ರೂ. ನಗದು ಬಹುಮಾನ ಮತ್ತು ಟ್ರೋಫಿಗಳನ್ನು ಪಡೆಯಿತು.

ವೈಯುಕ್ತಿಕ ಬಹುಮಾನ: ಕರ್ನಾಟಕದ ಪರಮಾನಂದ ಕೆ.ಜಿ.ಉತ್ತಮ ರೈಡರ್, ಸುರೇಶ್ ಹಿಡಿತಗಾರ ವೈಯುಕ್ತಿಕ ಬಹುಮಾನಗಳನ್ನು ಗೆದ್ದುಕೊಂಡರು. ಆಲ್‌ರೌಂಡರ್ ಗೌರವವನ್ನು ಮಹಾರಾಷ್ಟ್ರದ ಸಚಿನ್ ತೆಂಡಲ್ ಹಾಗೂ ವಿಶೇಷ ಪುರಸ್ಕಾರವನ್ನು ಕರ್ನಾಟಕ ತಂಡದ ನಾಯಕ ರಾಘವೇಂದ್ರ ಪಡೆದುಕೊಂಡರು.

ರವಿವಾರ ನಡೆದ ಸಮಾರೋಪ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಶಾಸಕ ಡಿ.ವೇದವ್ಯಾಸ ಕಾಮತ್, ಅಂಗವಿಕಲ ಕ್ರೀಡಾಪಟುಗಳಲ್ಲಿ ಹುದುಗಿದ್ದ ಪ್ರತಿಭೆಯ ಅನಾವರಣಕ್ಕೆ ಈ ಕ್ರೀಡಾಕೂಟ ಪೂರಕವಾಗಿದೆ ಎಂದರು.

ಮುಖ್ಯ ಅತಿಥಿಗಳಾಗಿ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಲ್ಲಣ್ಣ ಗೌಡ ಪಾಟೀಲ್, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪ ನಿರ್ದೇಶಕ ಪ್ರದೀಪ್ ಡಿಸೋಜ, ಕೂಟದ ಸಂಘಟನಾ ಕಾರ್ಯದರ್ಶಿ ಡಿ.ೆರ್ನಾಂಡಿಸ್, ಚಂದ್ರಶೇಖರ ರೈ, ಮಹೇಶ್ ಗೌಡ ಭಾಗವಹಿಸಿದ್ದರು.

ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿ ರಾಜ್ಯಾಧ್ಯಕ್ಷ ಬಸೂರು ರಾಜೀವ್ ಶೆಟ್ಟಿ, ಜಿಲ್ಲಾ ಅಧ್ಯಕ್ಷ ಶಾಂತಾರಾಮ ಶೆಟ್ಟಿ, ಗಾಯಕಿ ಮಲ್ಲಿಕಾ ಶೆಟ್ಟಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News