ಶ್ರೀನಗರದಲ್ಲಿ ಪ್ರತಿಭಟನಾ ಜಾಥಾ: ಮಾಜಿ ಶಾಸಕ ರಶೀದ್ ಬಂಧನ

Update: 2018-12-16 15:48 GMT

ಶ್ರೀನಗರ, ಡಿ.16: ಶನಿವಾರ ಜಮ್ಮು-ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಸಿರ್ನೂ ಗ್ರಾಮದಲ್ಲಿ ಎನ್‌ಕೌಂಟರ್ ಸಂದರ್ಭ ಪ್ರತಿಭಟನೆಯಲ್ಲಿ ತೊಡಗಿದ್ದ ಏಳು ನಾಗರಿಕರ ಹತ್ಯೆಯನ್ನು ವಿರೋಧಿಸಿ ರವಿವಾರ ಪ್ರತಿಭಟನಾ ಜಾಥಾವನ್ನು ಹಮ್ಮಿಕೊಂಡಿದ್ದ ಮಾಜಿ ಶಾಸಕ ಹಾಗೂ ಅವಾಮಿ ಇತ್ತೆಹಾದ್ ಪಾರ್ಟಿ(ಎಐಪಿ)ಯ ನಾಯಕ ಶೇಖ್ ಅಬ್ದುಲ್ ರಶೀದ್ ಮತ್ತು ಅವರ ಕೆಲವು ಬೆಂಬಲಿಗರನ್ನು ಪೊಲೀಸರು ಬಂಧಿಸಿದ್ದಾರೆ.

ಬೆಳಿಗ್ಗೆ ಇಲ್ಲಿಯ ಜವಾಹರ ನಗರ ಬಡಾವಣೆಯಲ್ಲಿ ಸಮಾವೇಶಗೊಂಡಿದ್ದ ರಶೀದ್ ಮತ್ತು ಅವರ ಬೆಂಬಲಿಗರು ಬಳಿಕ ಭಾರತ ಮತ್ತು ಪಾಕಿಸ್ತಾನದಲ್ಲಿ ವಿಶ್ವಸಂಸ್ಥೆಯ ಮಿಲಿಟರಿ ವೀಕ್ಷಕರ ತಂಡದ ಸ್ಥಳೀಯ ಕಚೇರಿಗೆ ಜಾಥಾದಲ್ಲಿ ಹೊರಟಿದ್ದರು. ಪ್ರತಿಭಟನಾಕಾರರು ಭದ್ರತಾ ಪಡೆಗಳ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದರು ಮತ್ತು ರಕ್ತಪಾತವನ್ನು ಅಂತ್ಯಗೊಳಿಸಲು ವಿಶ್ವಸಂಸ್ಥೆ ನಿರ್ಣಯಗಳ ಜಾರಿಗೆ ಆಗ್ರಹಿಸಿದ್ದರು. ಝೀರೊ ಬ್ರಿಡ್ಜ್ ಬಳಿ ಪೊಲೀಸರು ಅವರನ್ನು ತಡೆದು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಯೋರ್ವರು ತಿಳಿಸಿದರು.

ಬಂಧನಕ್ಕೆ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ರಶೀದ್,ಕಾಶ್ಮೀರದಲ್ಲಿ ನಡೆಯುತ್ತಿರುವ ನರಮೇಧಗಳನ್ನು ವಿಶ್ವ ಸಮುದಾಯವು ಗಮನಕ್ಕೆ ತೆಗೆದುಕೊಳ್ಳಬೇಕು. ಸರಕಾರದ ಬಳಿ ಕಾಶ್ಮೀರ ವಿವಾದಕ್ಕೆ ಪೆಲೆಟ್‌ಗಳು, ಗುಂಡುಗಳು, ನರಮೇಧಗಳು, ಕರಾಳ ಕಾನೂನುಗಳು ಮತ್ತು ಸರಕಾರಿ ಭಯೋತ್ಪಾದನೆಯ ಹೊರತು ಬೇರೆ ಪರಿಹಾರಗಳಿಲ್ಲ. ರಾಜ್ಯಪಾಲರು, ಡಿಜಿಪಿ ಮತ್ತು ಸೇನಾ ಮುಖ್ಯಸ್ಥರು ನಕಲಿ ವಿಚಾರಣೆಗಳು ಮತ್ತು ಖಂಡನೆಗಳ ಬದಲು ಈ ಹತ್ಯೆಗಳ ನೈತಿಕ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News