'ಡಿ.27ರ ರಾಷ್ಟ್ರಪತಿ ಕಾರ್ಯಕ್ರಮಕ್ಕೆ ರಾಜಾಂಗಣವೇ ಸೂಕ್ತ ಸ್ಥಳ'

Update: 2018-12-16 15:53 GMT

ಉಡುಪಿ, ಡಿ.16: ರಾಷ್ಟ್ರಪತಿ ರಾಮನಾಥ ಕೋವಿಂದ್ ಡಿ.27ರಂದು ಭಾಗವಹಿಸುವ ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯ ಅಭಿನಂದನಾ ಸಮಾ ರಂಭವನ್ನು ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲೇ ನಡೆಸುವುದು ಸೂಕ್ತ ಎಂಬ ಒಮ್ಮತದ ಅಭಿಪ್ರಾಯವು ಇಂದು ಉಡುಪಿ ಪೇಜಾವರ ಮಠದ ಶ್ರೀ ರಾಮವಿಠಲ ಸಭಾಭವನದಲ್ಲಿ ನಡೆದ ಪೂರ್ವಭಾವಿ ಸಮಾಲೋಚನಾ ಸಭೆ ಯಲ್ಲಿ ವ್ಯಕ್ತವಾಯಿತು.

ಪೇಜಾವರ ಶ್ರೀ ಸನ್ಯಾಸಾಶ್ರಮ ಸ್ವೀಕರಿಸಿ 80 ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ಹಮ್ಮಿಕೊಳ್ಳಲಾಗಿರುವ ಈ ಕಾರ್ಯಕ್ರಮದ ಸ್ಥಳದ ಬಗ್ಗೆ ಸಭೆಯಲ್ಲಿ ವಿಸ್ತಾರವಾದ ಚರ್ಚೆ ನಡೆದಿದ್ದು, ರಾಷ್ಟ್ರಪತಿ, ರಾಜ್ಯಪಾಲ, ಮುಖ್ಯಮಂತ್ರಿಗಳು, ಕೇಂದ್ರ ಸಚಿವರು ಭಾಗವಹಿಸುವುದರಿಂದ ಗರಿಷ್ಠ ಭದ್ರತೆಯ ದೃಷ್ಠಿಯಿಂದ ರಾಜಾಂಗಣವೇ ಸೂಕ್ತ ಎಂಬ ಅಭಿಪ್ರಾಯ ಬಹುತೇಕರು ವ್ಯಕ್ತಪಡಿಸಿದರು.

ರಾಜಾಂಗಣದಲ್ಲಿ ಸ್ಥಳದ ಅಭಾವ ತಲೆದೋರುವುದರಿಂದ ಬಾಲ್ಕನಿಯಲ್ಲೂ ಸಾರ್ವಜನಿಕರು ಕುಳಿತುಕೊಳ್ಳಲು ಅವಕಾಶ ನೀಡುವಂತೆ ಜಿಲ್ಲಾಡಳಿತವನ್ನು ಒತ್ತಾಯಿಸಬೇಕೆಂಬ ಆಗ್ರಹ ಸಭೆಯಲ್ಲಿ ಕೇಳಿಬಂತು. ಶ್ರೀಕಷ್ಣ ಮಠದ ವ್ಯವ ಸ್ಥಾಪಕ ಪ್ರಹ್ಲಾದ್ ಆಚಾರ್ಯ ಮಾತನಾಡಿ, ರಾಜಾಂಗಣದ ವೇದಿಕೆಯಿಂದ 30 ಮೀಟರ್ ದೂರದಲ್ಲಿ ಕುರ್ಚಿಗಳನ್ನು ಹಾಕಲು ಅವಕಾಶ ಇರುವುದರಿಂದ ಕೆಳಗೆ ಸುಮಾರು 300 ಆಸನಗಳ ವ್ಯವಸ್ಥೆ ಮಾಡಬಹುದು. ಬಾಲ್ಕನಿಯಲ್ಲಿ ಅವಕಾಶ ನೀಡಿದರೆ ಕೆಳಗೆ ಸೇರಿದಂತೆ ಒಟ್ಟು 580 ಮಂದಿ ಕುಳಿತುಕೊಳ್ಳಲು ವ್ಯವಸ್ಥೆ ಕಲ್ಪಿಸಬಹುದಾಗಿದೆ ಎಂದರು.

ಉಡುಪಿ ವೃತ್ತ ನಿರೀಕ್ಷಕ ಮಂಜುನಾಥ್ ಮಾತನಾಡಿ, ಕಾರ್ಯಕ್ರಮ ನಡೆ ಸುವ ಸ್ಥಳದ ಕುರಿತ ಅಂತಿಮ ನಿರ್ಧಾರವನ್ನು ರಾಷ್ಟ್ರೀಯ ಭದ್ರತಾ ಪಡೆ ಮಾಡ ಲಿದೆ. ಕಾರ್ಯಕ್ರಮ ರಾಜಾಂಗಣದಲ್ಲಿ ನಡೆದರೆ ಅಲ್ಲಿಂದ 100ಮೀಟರ್ ವ್ಯಾಪ್ತಿಯಲ್ಲಿ ಪಾಸ್ ಹೊಂದಿದವರು ಬಿಟ್ಟರೆ ಉಳಿದಂತೆ ಯಾರು ಕೂಡ ನಿಲ್ಲಲ್ಲು ಅವಕಾಶ ಇರುವುದಿಲ್ಲ. ಆದುದರಿಂದ ಮಠಕ್ಕೆ ಸಾರ್ವಜನಿಕ ಪ್ರವೇಶ ವನ್ನು ನಿರ್ಬಂಧಿಸಬೇಕಾಗುತ್ತದೆ ಎಂದರು.

ಕಾರ್ಯಕ್ರಮಕ್ಕೆ ಆಗಮಿಸುವ ಪಾಸ್ ಹೊಂದಿದವರು ಒಂದು ಗಂಟೆ ಮೊದಲೇ ಬಂದು ಸಭಾಂಗಣದಲ್ಲಿ ಕುಳಿತುಕೊಳ್ಳಬೇಕಾಗುತ್ತದೆ. ಪಾಸ್ ಕೂಡ ರಾಷ್ಟ್ರೀಯ ಭದ್ರತಾ ಪಡೆಯಿಂದಲೇ ಮಂಜೂರಾಗಿ ಬರಬೇಕು. ಹಲವು ಗಣ್ಯರು ಪಾಲ್ಗೊಳ್ಳುವುದರಿಂದ ಗರಿಷ್ಠ ಭದ್ರತೆಯನ್ನು ಒದಗಿಸಬೇಕಾಗುತ್ತದೆ. ಇದಕ್ಕೆ ಉಡುಪಿಯ ಜನತೆ ಪೂರ್ಣ ಸಹಕಾರ ನೀಡಬೇಕು. ಪೇಜಾವರ ಶ್ರೀಗಳ ಅಭಿಮಾನಿಗಳು, ಭಕ್ತರಿಗೆ ಸೂಕ್ತ ವ್ಯವಸ್ಥೆಗಳನ್ನು ಕಲ್ಪಿಸಲಾಗುವುದು ಎಂದರು.

ದ.ಕ. ಕಸಾಪ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಉಡುಪಿ ಜಿಲ್ಲಾ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಯಕ್ಷಗಾನ ಕಲಾರಂಗದ ಅಧ್ಯಕ್ಷ ಗಣೇಶ್ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್, ಉದ್ಯಮಿಗಳಾದ ಬಾಲಾಜಿ ರಾಘವೇಂದ್ರ ಆಚಾರ್ಯ, ವಿಲಾಸ್ ನಾಯಕ್ ಸೇರಿದಂತೆ ಹಲವು ಮಂದಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಹಿರಿಯ ಸಹಕಾರಿ ಕೃಷ್ಣರಾಜ್ ಸರಳಾಯ, ತಾಪಂ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ಉದ್ಯಮಿ ವಿ.ಜಿ.ಶೆಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ವಾಸುದೇವ ಭಟ್ ಪೆರಂಪಳ್ಳಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News