ನಿಝಾಮುದ್ದೀನ್ ದರ್ಗಾದಲ್ಲಿ ದುರಾಡಳಿತದ ದೂರು: ದಿಲ್ಲಿ ವಕ್ಫ್ ಮಂಡಳಿಯ ಮಧ್ಯಪ್ರವೇಶ

Update: 2018-12-16 16:01 GMT

ಹೊಸದಿಲ್ಲಿ, ಡಿ.16: ಇಲ್ಲಿಯ ಪ್ರಮುಖ ಸೂಫಿ ಶ್ರದ್ಧಾಕೇಂದ್ರ ಹಝರತ್ ನಿಝಾಮುದ್ದೀನ್ ದರ್ಗಾದಲ್ಲಿ ಸ್ವೀಕರಿಸಲಾದ ಕಾಣಿಕೆಗಳಲ್ಲಿ ಅಕ್ರಮಗಳು ಮತ್ತು ದುರಾಡಳಿತದ ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ದಿಲ್ಲಿ ವಕ್ಫ್ ಮಂಡಳಿಯು ಮಧ್ಯಪ್ರವೇಶಿಸಿದೆ.

ಕಾಣಿಕೆಗಳ ದಾಖಲೆಯನ್ನಿರಿಸಲು ಮತ್ತು ಸಾರ್ವಜನಿಕ ಕಲ್ಯಾಣ ಕಾರ್ಯಗಳಿಗೆ ಅದರ ಸದುಪಯೋಗವಾಗುವಂತೆ ನೋಡಿಕೊಳ್ಳಲು ನೂತನ ಸಮಿತಿಯ ರಚನೆಗಾಗಿ ಮಂಡಳಿಯ ಅಧ್ಯಕ್ಷ ಅಮಾನತುಲ್ಲಾ ಖಾನ್ ಅವರು ಗಣ್ಯ ನಾಗರಿಕರಿಂದ ಅರ್ಜಿಗಳನ್ನು ಆಹ್ವಾನಿಸಿದ್ದಾರೆ. ವಕ್ಫ್ ಆಸ್ತಿಯಾಗಿರುವ ದರ್ಗಾದಲ್ಲಿ ವರ್ಷಗಳಿಂದಲೂ ಕಾಣಿಕೆಗಳ ಲೆಕ್ಕವಿಡಲಾಗಿಲ್ಲ ಎಂದು ಅವರು ಆರೋಪಿಸಿದ್ದಾರೆ.

ಸೂಫಿ ಸಂತ ನಿಝಾಮುದ್ದೀನ್ ಔಲಿಯಾ ಮತ್ತು ಅವರ ಶಿಷ್ಯ ಅಮೀರ್ ಖುಸ್ರೋ ಅವರ ಮಝಾರ್‌ಗಳು ಸೇರಿದಂತೆ ಹಲವಾರು ಮಝಾರ್‌ಗಳು ದರ್ಗಾದಲ್ಲಿದ್ದು,ಭಾರೀ ಸಂಖ್ಯೆಯಲ್ಲಿ ಜನರನ್ನು ಆಕರ್ಷಿಸುತ್ತಿವೆ. ಇಲ್ಲಿರುವ ಸುಮಾರು 400 ಪೀರ್‌ಝಾದಾಗಳು ‘ಬಾರಿದರಿ’ ವ್ಯವಸ್ಥೆಯ ಮೂಲಕ ದರ್ಗಾಕ್ಕೆ ಬರುವ ಕಾಣಿಕೆಗಳನ್ನು ಸ್ವೀಕರಿಸುತ್ತಾರೆ.

ವಕ್ಫ್ ಮಂಡಳಿಯ 1970ರ ಗೆಝೆಟ್ ಅಧಿಸೂಚನೆಯಂತೆ ಪೀರ್‌ಝಾದಾಗಳು ದರ್ಗಾದ ವ್ಯವಸ್ಥಾಪಕರಾಗಿದ್ದು, ಕಾಣಿಕೆಗಳ ಮೇಲೆ ಹಕ್ಕು ಹೊಂದಿದ್ದಾರೆ ಎಂದು ಅಂಜುಮಾನ್ ಪೀರ್‌ಝಾದಾಂ ನಿಝಾಮಿಯಾಂ ಖುಸ್ರವಿಯ ಫರೀದ್ ಅಹ್ಮದ್ ನಿಝಾಮಿ ತಿಳಿಸಿದರು.

ಕಾಣಿಕೆಗಳ ಸ್ವೀಕಾರದಲ್ಲಿ ಅಕ್ರಮಗಳು ನಡೆಯುತ್ತಿವೆ ಎಂಬ ಆರೋಪಗಳನ್ನು ತಿರಸ್ಕರಿಸಿದ ಅವರು,ಪೀರ್‌ಝಾದಾಗಳು ಶತಮಾನಗಳಿಂದಲೂ ಭಕ್ತರ ಕಾಣಿಕೆಗಳ ನೆರವಿನಿಂದ ಮಂಡಳಿಯ ಹಸ್ತಕ್ಷೇಪವಿಲ್ಲದೆ ದರ್ಗಾವನ್ನು ನಿರ್ವಹಿಸುತ್ತಿದ್ದಾರೆ. ಕಾಣಿಕೆಗಳಲ್ಲಿ ಸ್ವಲ್ಪ ಭಾಗವನ್ನು ಅವರ ನಡುವೆ ಹಂಚಲಾಗುತ್ತದೆ ಮತ್ತು ಇಳಿದ ಹಣವನ್ನು ದರ್ಗಾದ ನಿರ್ವಹಣೆಗೆ ಬಳಸಲಾಗುತ್ತದೆ. ಕಾಣಿಕೆಗಳಿಗಿಂತ ಖರ್ಚುಗಳು ಹೆಚ್ಚಾದಾಗ ನಾವೇ ಅದನ್ನು ಭರಿಸುತ್ತೇವೆ ಎಂದರು.

2006ಲ್ಲಿ ದಿಲ್ಲಿ ಉಚ್ಚ ನ್ಯಾಯಾಲಯದ ಆದೇಶದಂತೆ ದರ್ಗಾಕ್ಕೆ ರಿಸೀವರ್ ನೇಮಕಗೊಳಿಸಲಾಗಿತ್ತಾದರೂ, ಪೀರ್‌ಝಾದಾಗಳ ಪ್ರತಿರೋಧದಿಂದಾಗಿ ಅದು ನಿಷ್ಕ್ರಿಯಗೊಂಡಿದೆ ಎಂದು ಮಂಡಳಿಯ ಅಧಿಕಾರಿಯೋರ್ರು ತಿಳಿಸಿದರು.

ದರ್ಗಾದ ಆದಾಯದಲ್ಲಿ ಶೇ.7ರಷ್ಟು ಪಾಲು ಪಡೆಯಲು ಮಂಡಳಿಗೆ ಹಕ್ಕು ಇದೆ ಎಂದು ಖಾನ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News